ದಲಿತ ಸಂಘಟನೆಗಳಲ್ಲಿ ಗುಂಪುಗಳು, ಮುಖಂಡರು ಜಾಸ್ತಿಯಾಗಿ ಒಗ್ಗಟ್ಟು ಉಳಿದಿಲ್ಲ: ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ

| Published : Jan 01 2024, 01:15 AM IST

ದಲಿತ ಸಂಘಟನೆಗಳಲ್ಲಿ ಗುಂಪುಗಳು, ಮುಖಂಡರು ಜಾಸ್ತಿಯಾಗಿ ಒಗ್ಗಟ್ಟು ಉಳಿದಿಲ್ಲ: ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಮಟ್ಟದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ದಲಿತ ಸಂಘಟನೆಗಳು ಜನತೆಗೆ ಒಳಿತು ಮಾಡುವ ಕಾರ್ಯದಲ್ಲಿ ತೊಡಗದಿದ್ದರೆ ಸಮುದಾಯ ಅಭಿವೃದ್ಧಿ ಅಸಾಧ್ಯವೆಂದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ದಲಿತ ಸಂಘಟನೆಗಳಲ್ಲಿ ಗುಂಪುಗಳು, ಮುಖಂಡರು ಜಾಸ್ತಿಯಾಗುತ್ತಿರುವುದರಿಂದ ಒಗ್ಗಟ್ಟು ಉಳಿದಿಲ್ಲವೆಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಅಂಬೇಡ್ಕರ್ ಪರಿನಿಬ್ಬಾಣ ದಿನದ ನಿಮಿತ್ತ ದಸಂಸ ವತಿಯಿಂದ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ದಲಿತ ಸಂಘಟನೆಗಳು ಜನತೆಗೆ ಒಳಿತು ಮಾಡುವ ಕಾರ್ಯದಲ್ಲಿ ತೊಡಗದಿದ್ದರೆ ಸಮುದಾಯ ಅಭಿವೃದ್ಧಿ ಅಸಾಧ್ಯವೆಂದರು.

ದಲಿತ ಯುವಕರು ಬರೀ ಸ್ಥಳೀಯ ಸಂಸ್ಥೆಗಳ ರಾಜಕಾರಣದ ಮೇಲೆ ಮಾತ್ರ ಕಣ್ಣಾಯಿಸುತ್ತಿದ್ದಾರೆ. ಆದರೆ ಸಹಕಾರ ಕ್ಷೇತ್ರದತ್ತ ನೋಡತ್ತಿಲ್ಲ. ಅಲ್ಲಿ ಲಕ್ಷಾಂತರ ಕೋಟಿ ರುಪಾಯಿ ಹಣವಿದ್ದು ಅಲ್ಲೊಬ್ಬರು, ಇಲ್ಲೊಬ್ಬರಂತೆ ದಲಿತರು ಕಾಣಿಸುತ್ತಿದ್ದಾರೆ. ಈ ಬಗ್ಗೆ ಗಂಭೀರ ಪ್ರಯತ್ನ ಮಾಡಿ ಹಾಲು ಒಕ್ಕೂಟದಂತಹ ಬೃಹತ್ ಸಹಕಾರಿ ಕ್ಷೇತ್ರಕ್ಕೆ ದಲಿತರ ಲಗ್ಗೆ ಇಡಬೇಕಾದ ಅಗತ್ಯವಿದೆ ಎಂದರು.

ದಲಿತ ಸಂಘಟನೆಗಳು, ಚಳವಳಿಗಳು ಕೇವಲ ಸಾಂಸ್ಕೃತಿಕವಾಗಿ ಆಲೋಚಿಸದೆ ರಾಜಕೀಯದ ನಿಟ್ಟಿನಲ್ಲಿ ಚಿಂತಿಸಬೇಕು. ದಲಿತ ಚಳವಳಿ ಮತ್ತು ರಾಜಕೀಯ ಬೆಸೆಯುವ ಕೆಲಸಗಳು ಆಗಬೇಕು. ಸಂಘಟನೆಗಳ ಮಧ್ಯೆ ಸಮನ್ವಯತೆ ಸಾಧ್ಯವಾಗದೇ ಹೋಗಿದ್ದು ಚಳವಳಿ ನೇತಾರರು ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಆಗ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆ, ಸಂಸತ್ತು ಅಪಾರ ಸಂಖ್ಯೆಯಲ್ಲಿ ದಲಿತರಿಗೆ ಪ್ರವೇಶ ನೀಡುತ್ತದೆ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ ಪ್ರೊ.ಬಿ.ಕೃಷ್ಣಪ್ಪ ಅವರ ಕಾಳಜಿಗಳಿಂದಾಗಿ ಕರ್ನಾಟಕದಲ್ಲಿ ದಸಂಸ ಅಸ್ಥಿತ್ವಕ್ಕೆ ಬಂದಿತು. ದಲಿತ ಯುವಕರಲ್ಲಿ ಹೋರಾಟದ ಕಿಚ್ಚು ಮೂಡಿತು. ಈ ಕಾರಣದಿಂದಾಗಿಯೇ ಸರ್ಕಾರದ ಅನೇಕ ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗಿದೆ. ದಲಿತರು ಯಾವುದೇ ಕಾರಣದಿಂದ ಹೋರಾಟದ ಭೂಮಿಕೆಯಿಂದ ಹಿಂದೆ ಸರಿಯಬಾರದೆಂದರು.

ಪರಿಶಿಷ್ಟರಲ್ಲಿ ಒಳ ಮೀಸಲಾತಿ ಬೇಕೆಂಬ ಕೂಗುಗಳು ಎದ್ದಿವೆ. ಜನಸಂಖ್ಯೆಗೆ ಆಧಾರದಲ್ಲಿ ಮೀಸಲಾತಿ ಪಡೆದುಕೊಳ್ಳವುದು ಎಲ್ಲರ ಹಕ್ಕು. ಒಳ ಮೀಸಲಾತಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಅಗತ್ಯ.ಸರ್ಕಾರದ ಮೇಲೆ ಒತ್ತಡ ಹೇರಲು ಶಕ್ತಿ ಪ್ರದರ್ಶನ ಮಾಡಬೇಕು. ಇದುವರೆಗಿನ ಮೀಸಲಾತಿಯಲ್ಲಿ ನಮಗಾಗಿರುವ ಅನ್ಯಾಯಗಳ ಮನಗಂಡು ಒಕ್ಕೊರಲಿನಿಂದ ನಿಲ್ಲಬೇಕೆಂದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತಾಡಿ ದಲಿತ ಮತ್ತುಹಿಂದುಳಿದ ಸಮುದಾಯಗಳಿಗೆ ಬ್ರಾಹ್ಮಣಹಾಗೂ ಬಂಡವಾಳಶಾಹಿಗಳೇ ದೊಡ್ಡ ಶತೃ. ಸನಾತನ ಧರ್ಮದ ವಿಚಾರದಲ್ಲಿ ನಾವು ಜಾಗೃತರಾಗಿಲ್ಲ. ಕೇವಲ ಸಂಘಟನೆಯಾಗುವುದರಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಹೋರಾಟದ ಕಿಚ್ಚು ಇರಬೇಕೆಂದರು.

ರಾಜಕಾರಣಿ ಮತ್ತು ಮಠಾಧೀಶರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ. ಗೋವು ಪವಿತ್ರವೆಂದು ಹೇಳಿದ್ದ ಬ್ರಾಹ್ಮಣರೇ ಮಾಂಸ ತಿನ್ನುವುದನ್ನು ಕಲ್ಪಿಸಿಕೊಟ್ಟವರು. ಆದರೆ, ನಮ್ಮವರು ಇಂದು ಕೋಮುವಾದಿಗಳ ಜೊತೆ ಶಾಮೀಲಾಗಿದ್ದಾರೆ. ರಾಮಮಂದಿರ ಟ್ರಸ್ಟ್‌ನೊಳಗೆ ಇರುವವರೆಲ್ಲರೂ ಒಂದೇ ಸಮಾಜದವರು. ಭಾರತದಲ್ಲಿ ಒಂದೇ ಧರ್ಮ, ಜಾತಿ ಇಲ್ಲ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಆದರೂ ತಾರತಮ್ಯ ಮುಂದುವರೆದಿದೆ. ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದರೆ, ದೇಶ ದಿವಾಳಿಯಾಗೊಲ್ಲ. ಆದರೆ, ಬಡವರಿಗೆ ಉಚಿತ ಯೋಜನೆ ನೀಡಿದರೆ, ದಿವಾಳಿಯಾಗುತ್ತದೆಂದು ಕೆಲವರು ಹೇಳುತ್ತಾರೆ. ಇದು ಯಾವ ನ್ಯಾಯವೆಂದು ರಾಮಚಂದ್ರಪ್ಪ ಪ್ರಶ್ನಿಸಿದರು.

ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಬಿ.ತಿಪ್ಪೇಸ್ವಾಮಿ ಮಾತನಾಡಿ, ದಲಿತ ಸಂಘಟನೆಗಳು ಛಿದ್ರ ಆಗುತ್ತಿದ್ದು ಇದರ ಲಾಭವ ಬೇರೆಯವರು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಮೇಲಾದೂ ಸಮುದಾಯದ ಒಳಿತಿಗಾಗಿ ಸಂಘಟನೆಗಳು, ಮುಖಂಡರು ಒಂದೆಡೆ ಒಗ್ಗೂಡಬೇಕಾದ ಅಗತ್ಯವಿದೆ ಎಂದರು.

ದಸಂಸ ಮುಖಂಡರಾದ ಹೆಗ್ಗೆರೆ ರಂಗಪ್ಪ, ಬಿ.ಎಂ.ಹನುಮಂತಪ್ಪ, ಮೈಲಪ್ಪ, ಭಾಗ್ಯಮ್ಮ ನಾರಾಯಣಸ್ವಾಮಿ, ಉಚ್ಚಂಗಿ ಪ್ರಸಾದ್, ಭೀಮನಕೆರೆ ಶಿವಮೂರ್ತಿ, ಕಾಂಗ್ರೆಸ್ ಮುಖಂಡ ಡಾ.ಬಿ.ತಿಪ್ಪೇಸ್ವಾಮಿ, ಓ.ಶಂಕರ್, ಭರತ್ ಕುಮಾರ್ ಬೆಲ್ಲದ ಮಡು ಉಪಸ್ಥಿತರಿದ್ದರು.