ಅರ್ಥಶಾಸ್ತ್ರದ ಅರಿವು ಮತ್ತು ಸಾರ್ವಜನಿಕ ಚರ್ಚೆಗಳು ಶಕ್ತಿಯುತ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಆಳವಾದ ಅಧ್ಯಯನ, ತಾರ್ಕಿಕ ಚಿಂತನೆ ಮತ್ತು ಪ್ರಾಮಾಣಿಕ ಆಲೋಚನೆಗಳು ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗೆ ಪ್ರೇರಣೆ ನೀಡುವ ಶಕ್ತಿ ಹೊಂದಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಪರೀಕ್ಷಾಂಗ ಪ್ರೊ. ಸುರೇಶ್ ಎಂ. ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಅರ್ಥಶಾಸ್ತ್ರದ ಅರಿವು ಮತ್ತು ಸಾರ್ವಜನಿಕ ಚರ್ಚೆಗಳು ಶಕ್ತಿಯುತ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಆಳವಾದ ಅಧ್ಯಯನ, ತಾರ್ಕಿಕ ಚಿಂತನೆ ಮತ್ತು ಪ್ರಾಮಾಣಿಕ ಆಲೋಚನೆಗಳು ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗೆ ಪ್ರೇರಣೆ ನೀಡುವ ಶಕ್ತಿ ಹೊಂದಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಪರೀಕ್ಷಾಂಗ ಪ್ರೊ. ಸುರೇಶ್ ಎಂ. ಹೇಳಿದರು.ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಎ.ಡಿ. ಶ್ರಾಫ್ ಸ್ಮರಣಾರ್ಥ ಅರ್ಥಶಾಸ್ತ್ರ ವಿಷಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಖ್ಯಾತ ಅರ್ಥಶಾಸ್ತ್ರಜ್ಞ ಎ.ಡಿ. ಶ್ರಾಫ್ ಅವರ ಸ್ಮರಣಾರ್ಥ ಕಾಲೇಜಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಾತು, ಆಲೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಶಕ್ತಿಯನ್ನು ಸಂಭ್ರಮಿಸುವುದು ಅವರ ಆಶಯವಾಗಿತ್ತು ಎಂದರು.ಕಾರ್ಯಕ್ರಮದ ಸಂಯೋಜಕ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ತಿಪ್ಪೇಸ್ವಾಮಿ ಈ. ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಆರ್ಥಿಕ, ಕೈಗಾರಿಕಾ ಹಾಗೂ ವಾಣಿಜ್ಯ ನೀತಿಗಳಿಗೆ ಎ.ಡಿ. ಶ್ರಾಫ್ ನೀಡಿದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ದೇಶದಾದ್ಯಂತ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಅರ್ಥಶಾಸ್ತ್ರದ ಕುರಿತು ಜ್ಞಾನ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸಾಹಿತಿ ಹಾಗೂ ಎಫ್‌ಎಂಸಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಆತ್ಮಸ್ಥೈರ್ಯ ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ಅರ್ಥಶಾಸ್ತ್ರದ ಕೇಂದ್ರಬಿಂದು ಮಾನವನಾಗಿದ್ದು, ಮಾನವ ಕಲ್ಯಾಣ, ಸಾಮಾಜಿಕ ನ್ಯಾಯ ಹಾಗೂ ಸುಸ್ಥಿರ ಅಭಿವೃದ್ಧಿಯ ಕುರಿತು ಆಳವಾದ ಜ್ಞಾನವನ್ನು ನೀಡುವ ವಿಷಯವಾಗಿದೆ ಎಂದರು.
ಜಿಲ್ಲಾಮಟ್ಟದ ಸ್ಪರ್ಧೆಯ ತೀರ್ಪುಗಾರರಾದ ಹಿಂದಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ತಳವಾರ್ ಬಿ.ಎಚ್., ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಮೇಶ್ ಹೆಚ್.ಆರ್. ಹಾಗೂ ಟಿವಿ1 ವರದಿಗಾರ್ತಿ ಹರ್ಷಿತ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಭಾಷಣದ ವಿಷಯವನ್ನು ಪ್ರಸ್ತುತಪಡಿಸುವ ಕುರಿತು ಮಾರ್ಗದರ್ಶನ ನೀಡಿದರು.ವಿಜೇತರುಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಬಿಂದ್ಯಾ ಐ.ಪಿ. ಪ್ರಥಮ ಸ್ಥಾನ ಪಡೆದು ರು. 2,500 ನಗದು ಬಹುಮಾನ ಗಳಿಸಿದರು. ಗೋಣಿಕೊಪ್ಪದ ಕಾವೇರಿ ಕಾಲೇಜಿನ ವಿದ್ಯಾರ್ಥಿ ಬೆಳ್ಳಿಯಪ್ಪ ಎಂ.ಜಿ. ದ್ವಿತೀಯ ಸ್ಥಾನ ಪಡೆದು ರು. 1,500 ಹಾಗೂ ಇದೇ ಕಾಲೇಜಿನ ಸಫಾನ ಕೆ.ಎಸ್. ತೃತೀಯ ಸ್ಥಾನ ಪಡೆದು ರು. 1,000 ಬಹುಮಾನ ಪಡೆದರು.
ಎಫ್‌ಎಂಸಿ ಕಾಲೇಜಿನ ವಿದ್ಯಾರ್ಥಿನಿ ಹೇಮಾವತಿ ಎಸ್. ಹಾಗೂ ನಾಪೋಕ್ಲು ಮರ್ಕಜ್ ಕಾಲೇಜಿನ ವಿದ್ಯಾರ್ಥಿ ನಫ್ಸೀಮಾ ಪಿ.ಎ. ಸಮಾಧಾನಕರ ಬಹುಮಾನ ಪಡೆದರು.ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೇಣುಶ್ರೀ ಎಚ್.ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಪ್ನ ಎಂ. ಶೇಟ್ ಪ್ರಾರ್ಥಿಸಿದರು. ಹೇಮಾವತಿ ಎಸ್. ವಂದಿಸಿದರು. ಮೇಘ ಎಸ್. ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ನಯನ ಕೆ.ಎಸ್., ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಡಾ. ರಾಜೇಂದ್ರ ಆರ್., ಸಮಾಜಶಾಸ್ತ್ರ ವಿಭಾಗದ ಡಾ. ಗಾಯತ್ರಿ ಎ.ಎನ್., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ಆರ್. ಭಂಡಾರಿ, ರಾಜ್ಯಶಾಸ್ತ್ರ ವಿಭಾಗದ ಡಾ. ಶೃಂಗಾರ್, ಇತಿಹಾಸ ವಿಭಾಗದ ಡಾ. ಚಂದ್ರಯ್ಯ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.