ಸಾರಾಂಶ
ಪುಣ್ಯಾಹ ಕಳಸ ಸ್ಥಾಪನೆ, ಬಿಂಬ ಶುದ್ಧಿ ವಾಸ್ತು ರಾಕ್ಷೋಘ್ನ ಹವನ ಅಧಿವಾಸ ಹೋಮಪರ್ಯಗ್ನಿ ಕರಣ ಬಲಿಹರಣ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕು ಇಲವಾಲ ಹೋಬಳಿಯ ದೊಡ್ಡಮಾರಗೌಡನಹಳ್ಳಿಯಲ್ಲಿ ಶ್ರೀ ಅರುಣೋದಯ ಸೇವಾ ಟ್ರಸ್ಟ್ ನೂತನವಾಗಿ ನಿರ್ಮಿಸಿರುವ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನೆ ವಿಗ್ರಹ ಹಾಗೂ ರಾಜಗೋಪುರದ ಕಳಸ ಪ್ರತಿಷ್ಠಾಪನಾ ಮಹೋತ್ಸವವು ಮೇ 22 ರಿಂದ 24 ರವರೆಗೆ ಆಯೋಜಿಸಲಾಗಿದೆ.ಮೇ 22ರ ಸಂಜೆ 7ಕ್ಕೆ ಗಣಪತಿ ಪೂಜೆ, ಪುಣ್ಯಾಹ ಕಳಸ ಸ್ಥಾಪನೆ, ಬಿಂಬ ಶುದ್ಧಿ ವಾಸ್ತು ರಾಕ್ಷೋಘ್ನ ಹವನ ಅಧಿವಾಸ ಹೋಮಪರ್ಯಗ್ನಿ ಕರಣ ಬಲಿಹರಣ ಇತ್ಯಾದಿ ಕಾಯಕ್ರಮವಿದೆ.ಮೇ 23ರ ಬೆಳಗ್ಗೆ 6ಕ್ಕೆ ದೊಡ್ಡಮಾರಗೌಡನಹಳ್ಳಿಯ ರಾಜಬೀದಿಯಲ್ಲಿ ವೀರ ಮಕ್ಕಳ ಕುಣಿತ, ನಂದಿಕಂಬ, ಛತ್ರಿ ಚಾಮರಗಳ ಸಮೇತ ಗ್ರಾಮದ ಹೆಣ್ಣು ಮಕ್ಕಳಿಂದ ದೇವರು ತರುವ ಕಾರ್ಯಕ್ರಮ. ಬೆಳಗ್ಗೆ 8 ರಿಂದ 8.28 ರ ಮಿಥುನ ಲಗ್ನದಲ್ಲಿ ಶ್ರೀ ಶನೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ, ನಂತರ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳಿಂದ ಕಳಸ ಪ್ರತಿಷ್ಠಾಪನೆ, ಪ್ರತಿಷ್ಠಾ ಹೋಮ, ನವಗ್ರಹ ಹೋಮ, ಕಲಾವೃದ್ಧಿ ಹೋಮವು ಅನಂತ ಭಟ್ಟ ತಂಡದವರು ನೆರವೇರಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಮಹಾ ಪೂರ್ಣಾಹುತಿ ಮತ್ತು ಸ್ವಾಮೀಜಿಯವರಿಂದ ಹಿತವಚನ, ಮಧ್ಯಾಹ್ನ 12ಕ್ಕೆ ತೀರ್ಥ ಪ್ರಸಾದ, ಆಶೀರ್ವಾದ ಗ್ರಹಣ ಜರುಗಲಿದೆ.ಮೇ 24ರ ಬೆಳಗ್ಗೆ 7.45 ರಿಂದ ಸ್ವಾಮಿಗೆ ಪೂಜಾ ಕೈಂಕರ್ಯ ಪ್ರಾರಂಭ, ದರ್ಶನ, ಅಪ್ಪಣೆ, ಮಧ್ಯಾಹ್ನ 12ಕ್ಕೆ ತೀರ್ಥ ಪ್ರಸಾದ ಸಂತರ್ಪಣೆ ಇದೆ. ಮೇ 23 ಮತ್ತು 24 ರಂದು ಅನ್ನ ಸಂತರ್ಪಣೆ, ಹಿರಿಯ ಕಲಾವಿದರು ಮತ್ತು ತಂಡದವರಿಂದ ಸುಗಮ ಸಂಗೀತ, ಭಕ್ತಿಗೀತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶನೇಶ್ವರಸ್ವಾಮಿ ಗುಡ್ಡಪ್ಪ ಟಿ. ಕೃಷ್ಣಪ್ಪ ಕೋರಿದ್ದಾರೆ.