ನಾಲ್ಕೇ ತಿಂಗಳಲ್ಲಿ ಕಳಪೆ ಕಾಮಗಾರಿಯ ಬಂಡವಾಳ ಬಯಲು!

| Published : Aug 14 2024, 12:46 AM IST

ನಾಲ್ಕೇ ತಿಂಗಳಲ್ಲಿ ಕಳಪೆ ಕಾಮಗಾರಿಯ ಬಂಡವಾಳ ಬಯಲು!
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋವಾಡಿ ಶಾಲಾ ಸಮೀಪದ ದಲಿತ ಕಾಲನಿ ರಸ್ತೆಯ ಜಲ್ಲಿಗಳಲೆಲ್ಲ ಮೊದಲ ಮಳೆಗೆ ಎದ್ದು ಬಂದಿವೆ. ಈ ಕಳಪೆ ಕಾಮಗಾರಿ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀಕಾಂತ ಹೆಮ್ಮಾಡಿ

ಕನ್ನಡಪ್ರಭ ವಾರ್ತೆ ಕುಂದಾಪುರ

ತಮಗೊಂದು ಸುಸಜ್ಜಿತವಾದ ರಸ್ತೆ ನಿರ್ಮಿಸಿಕೊಡಿ ಎಂದು ಈ ದಲಿತ ಕಾಲನಿ ನಿವಾಸಿಗಳು ಪ್ರತೀ ಗ್ರಾಮಸಭೆಯಲ್ಲೂ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಇವರ ಬೇಡಿಕೆಗೆ ಸ್ಪಂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಈ ಕೇರಿಗೊಂದು ಸುಸಜ್ಜಿತವಾದ ಕಾಂಕ್ರೀಟ್ ರಸ್ತೆ ನಿರ್ಮಾಣವಾಯಿತು. ನಡೆದಾಡಲು ಸುಸಜ್ಜಿತ ರಸ್ತೆಯಾಯಿತು ಎಂದು ಖುಷಿಯಲ್ಲಿರುವಾಗಲೇ ಇಲ್ಲಿನ ದಲಿತರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ರಸ್ತೆ ನಿರ್ಮಾಣಗೊಂಡ ನಾಲ್ಕೇ ತಿಂಗಳಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿಕಲ್ಲುಗಳೆಲ್ಲಾ ಮೇಲೆದ್ದು ಹೊಂಡ ಸೃಷ್ಟಿಯಾಗಿದೆ.ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋವಾಡಿ ಶಾಲಾ ಸಮೀಪದ ದಲಿತ ಕಾಲನಿ ರಸ್ತೆಗೆ ಕಳೆದ ಜನವರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಉಡುಪಿ ನಿರ್ಮಿತಿ ಕೇಂದ್ರದಿಂದ 261 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಮಳೆಗಾಲದ ಆರಂಭದಲ್ಲೇ ಎರಡು ಕಡೆಗಳಲ್ಲಿ ಜಲ್ಲಿಕಲ್ಲುಗಳೆಲ್ಲಾ ಮೇಲೆದ್ದು ಬಂದಿದ್ದು, ವಾಹನಗಳು ಸಂಚರಿಸುವಾಗ ಜಲ್ಲಿಗಳು ಟಯರ್‌ನಿಂದ ಸಿಡಿಯುವುದರಿಂದ ಪದಾಚಾರಿಗಳಿಗೆ, ಶಾಲಾ ಮಕ್ಕಳಿಗೆ, ವಯೋವೃದ್ಧರಿಗೆ ನಡೆದಾಡಲು ಸಮಸ್ಯೆಗಳಾಗುತ್ತಿದೆ. ಹೊಂಡ ಮಾತ್ರವಲ್ಲದೇ ಕೆಲವು ಕಡೆಗಳಲ್ಲಿ ರಸ್ತೆ ಬಿರುಕು ಬಿಟ್ಟಿದೆ.

* ಆರಂಭದಿಂದಲೂ ಧ್ವನಿ ಎತ್ತಿದ ಸ್ಥಳಿಯರು:

ರಸ್ತೆ ಕಾಮಗಾರಿಯ ವಿರುದ್ದ ಆರಂಭದಿಂದಲೂ ಇಲ್ಲಿನ ನಿವಾಸಿಗಳು ಧ್ವನಿ ಎತ್ತಿದ್ದು, ಸಂಬಂಧಪಟ್ಟ ಗುತ್ತಿಗೆದಾರರನ್ನು ಪ್ರಶ್ನಿಸಿ ಕಳಪೆ ಕಾಮಗಾರಿ ನಡೆಸದೇ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಲು ಆಗ್ರಹಿಸಿದ್ದರು. ಅಲ್ಲದೆ ರಸ್ತೆ ಕಾಮಗಾರಿಗೆ ಸಹಕಾರವನ್ನು ಕೊಟ್ಟಿದ್ದಲ್ಲದೇ ದೈವಸ್ಥಾನದ ನೀರು ಕಾಂಕ್ರೀಟ್‌ಗೆ ಕೊಡುವ ಮೂಲಕ ಗುತ್ತಿಗೆದಾರರೊಂದಿಗೆ ಇಲ್ಲಿನ ನಿವಾಸಿಗಳು ಕೈ ಜೋಡಿಸಿದ್ದರು. ಕಳಪೆ ಕಾಮಗಾರಿ ನಡೆಸಲು ಮುಂದಾದಗೆಲ್ಲಾ ಸ್ಥಳದಲ್ಲೇ ನಿಂತು ಎಚ್ಚರಿಸುತ್ತಿದ್ದ ಸ್ಥಳೀಯರಿಗೆ ಏನೇನೊ ಸಬೂಬು ಕೊಟ್ಟು ಕಾಮಗಾರಿ ಮುಗಿಸಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.ಸುಸಜ್ಜಿತ ಚರಂಡಿ ನಿರ್ಮಾಣ:

261 ಮೀಟರ್ ಉದ್ದದ ರಸ್ತೆಯ ಕಲ್ಲುಕುಟ್ಟಿಗ ದೈವಸ್ಥಾನದ ಎದುರು ಎರಡು ಕಡೆಗಳಲ್ಲಿ ಜಲ್ಲಿಕಲ್ಲುಗಳು ಎದ್ದು ಹೊಂಡ ಬಿದ್ದಿದೆ. ಈ ರಸ್ತೆ ನಿರ್ಮಾಣಕ್ಕೂ ಮೊದಲು ತ್ರಾಸಿ ಪಂಚಾಯಿತಿ ವತಿಯಿಂದ ಎರಡೂ ಕಡೆ ಚರಂಡಿ ನಿರ್ಮಾಣ ಮಾಡಲಾಗಿದೆ. ರಸ್ತೆ ಮೇಲೆ ನೀರು ನಿಂತುಕೊಳ್ಳದೇ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ರಸ್ತೆಯಲ್ಲಿ ಗುಂಡಿಗಳು ಏಕಾದವು ಎನ್ನುವುದೇ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ. ಇದೇ ದೇವಸ್ಥಾನದ ಮಗ್ಗುಲಲ್ಲೇ ಕಳೆದ ಏಳೆಂಟು ವರ್ಷಗಳ ಹಿಂದೆ ಮಾಡಿರುವ ಕಾಂಕ್ರೀಟ್ ರಸ್ತೆ ಇಂದಿಗೂ ಸುಸಜ್ಜಿತವಾಗಿದೆ.------ಗುತ್ತಿಗೆ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಆಗ್ರಹಸದ್ಯ ಕಾರ್ಕಳ ಪರಶುರಾಮ ಮೂರ್ತಿಯ ಅವ್ಯವಹಾರದ ಕುರಿತಂತೆ ತೂಗುಗತ್ತಿಯಲ್ಲಿರುವ ನಿರ್ಮಿತಿ ಕೇಂದ್ರ, ಇದೀಗ ದಲಿತ ಕಾಲನಿ ರಸ್ತೆ ನಿರ್ಮಾಣದಲ್ಲಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಉಡುಪಿ ನಿರ್ಮಿತಿ ಕೇಂದ್ರದ ವಿರುದ್ಧ ದಲಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಳಪೆ ಕಾಮಗಾರಿ ನಡೆಸಿ ದಲಿತರ ಹಣವನ್ನು ದುರುಪಯೋಗ ಮಾಡುವುದು ಸರಿಯಲ್ಲ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಿರ್ಮೀತ ಕೇಂದ್ರ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

-------ರಸ್ತೆ ನಿರ್ಮಾಣದ ಆರಂಭದಿಂದಲೂ ಕಳಪೆ ಕಾಮಾಗಾರಿಯ ವಿರುದ್ದ ನಾವು ಧ್ವನಿ ಎತ್ತುತ್ತಲೇ ಬಂದಿದ್ದೇವೆ. ಬೇಕಾಬಿಟ್ಟಿಯಾಗಿ ವೆಟ್ ಮಿಕ್ಸ್ ಅನ್ನು ಚೆಲ್ಲಿದ್ದಾರೆ. ಕಾಟಾಚಾರಕ್ಕೆ ಕಾಂಕ್ರೀಟ್ ಮಾಡಿ ಹೋಗಿದ್ದಾರೆ. ಕಾಂಕ್ರೀಟ್ ಕಿತ್ತು ಹೋದ ಬಗ್ಗೆ ಸ್ಥಳೀಯಾಡಳಿತದ ಗಮನಕ್ಕೆ ತಂದಿದ್ದೇವೆ. ಆದರೆ ಇದುವರೆಗೂ ನಮಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದಷ್ಟು ಶೀಘ್ರ ನಮಗೆ ರಸ್ತೆ ಸರಿಪಡಿಸಿಕೊಡಬೇಕು.

। ಚಿದಂಬರ, ಸ್ಥಳೀಯ ನಿವಾಸಿ

----------

ಪ್ರಭಾರ ಯೋಜನಾ ನಿರ್ದೇಶಕನಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋವಾಡಿ ದಲಿತ ಕಾಲನಿಯ ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ ಎಂಜಿನಿಯರ್ ಅನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ‌ ಕೈಗೊಳ್ಳಲಾಗುವುದು.

। ದಿವಾಕರ್, ಪ್ರಭಾರ ಯೋಜನಾ ನಿರ್ದೇಶಕರು ನಿರ್ಮೀತಿ ಕೇಂದ್ರ ಉಡುಪಿ