ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಭಾರತೀಯ ಕಿವಿ ಮೂಗು ಹಾಗೂ ಗಂಟಲು ತಜ್ಞರ ಸಂಘದ ಮೈಸೂರು ಶಾಖೆ ವತಿಯಿಂದ ಭಾನುವಾರ ವಾಕಾಥಾನ್ ಆಯೋಜಿಸಲಾಗಿತ್ತು.ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ವಾಕಾಥಾನ್ ಗೆ ಚಾಲನೆ ನೀಡಿದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಕಿವುಡುತನ ಕೆಲವೊಬ್ಬರಿಗೆ ಹುಟ್ಟಿನಿಂದ ಬಂದಿದ್ದರೆ, ಇನ್ನೂ ಕೆಲವರಿಗೆ ಬೆಳೆಯುತ್ತ ಯಾವುದೋ ಕಾರಣಕ್ಕೆ ಅಥವಾ ತೊಂದರೆಯಿಂದಾಗಿ ಕಾಣಿಸಿಕೊಳ್ಳುತ್ತದೆ. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಇಡೀ ಭಾರತದಲ್ಲೇ ಅತ್ಯುತ್ತಮ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತಿದ್ದು, ನಮಗೆ ಹೆಮ್ಮೆಯಿದೆ. ಈ ಸಂಸ್ಥೆಗೆ ಬೇರೆ ಬೇರೆ ರಾಜ್ಯಗಳಿಂದ ಸಮಸ್ಯೆಯುಳ್ಳವರು ಬಂದು ಚಿಕಿತ್ಸೆ ಪಡೆದುಕೊಳ್ಳುತಿದ್ದಾರೆ ಎಂದರು.
ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಅತ್ಯುತ್ತಮ ಚಿಕಿತ್ಸೆ ದೊರೆಯುತ್ತಿದೆ. ಇತ್ತೀಚಿನ ದಿನಮಾನಗಳಲ್ಲಿ ಕಿವಿಗಳಿಗೂ ಫಿಜಿಯೋಥೆರಪಿ ನೀಡುತ್ತಿರುವುದು ಕಾಣಬಹುದು ಎಂದು ಅವರು ಹೇಳಿದರು.ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿ, ನಿಮ್ಮನ್ನು ಸಬಲಗೊಳಿಸಿ- ಶ್ರವಣ ಹಾಗೂ ಶ್ರವಣ ಆರೈಕೆ ಎಲ್ಲರಿಗೂ ಸಿಗುವಂತಾಗಲಿ ಎಂಬ ವಿಚಾರ ಕುರಿತು ಜನರಲ್ಲಿ ಅರಿವು ಮೂಡಿಸಲು ಆಯೋಜಿಸಿದ್ದ ವಾಕಾಥಾನ್ ನಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ, ಜೆಎಸ್‌ಎಸ್ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು, ಮಣಿಪಾಲ್ ಆಸ್ಪತ್ರೆ ಹಾಗೂ ಅಪೋಲೊ ಬಿಜಿಎಸ್ ಆಸ್ಪತ್ರೆಯವರು ಹೆಜ್ಜೆ ಹಾಕಿದರು.
200 ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಗಣ್ಯರು ಭಾಗವಹಿಸಿ, ಕಿವುಡುತನದ ಬಗ್ಗೆ ಅರಿವು ಮೂಡಿಸಲಾಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾದ ವಾಕಾಥಾನ್ ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಮತ್ತೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಕೊನೆಗೊಂಡಿತು.ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿ ಡಾ. ಬಸವನಗೌಡಪ್ಪ, ಜೆಎಸ್‌ಎಸ್ ಆಸ್ಪತ್ರೆ ವೈದ್ಯಕೀಯ ವ್ಯವಸ್ಥಾಪಕ ಡಾ.ಸಿ.ಪಿ. ಮಧು,
ಭಾರತೀಯ ಕಿವಿ ಮೂಗು ಹಾಗೂ ಗಂಟಲು ತಜ್ಞರ ಸಂಘದ ಮೈಸೂರು ಶಾಖೆಯ ಅಧ್ಯಕ್ಷ ಡಾ.ಕೆ. ಸೋಮಸುಂದರ್, ಕಾರ್ಯದರ್ಶಿ ಡಾ.ಡಿ. ಸಂಧ್ಯಾ ಮೊದಲಾದವರು ಇದ್ದರು.