ಎಂಎಸ್ಐಎಲ್‌ನಲ್ಲಿಯೇ ಇಲ್ಲ ಎಂಆರ್‌ಪಿ ಬೆಲೆ!

| Published : Jun 30 2024, 12:50 AM IST

ಸಾರಾಂಶ

ಗದಗ ಜಿಲ್ಲೆಯಲ್ಲಿ ಗರಿಷ್ಠ ಮಾರಾಟ ಬೆಲೆಗೆ ಮದ್ಯ ಮಾರಾಟ ಮಾಡಬೇಕಿದ್ದ ಎಂಎಸ್‌ಐಎಲ್‌ ಮಳಿಗೆಗಳಲ್ಲೇ ಹೆಚ್ಚಿನ ಬೆಲೆ ಮಾರಾಟ ಮಾಡಲಾಗುತ್ತಿದೆ. ಕೇಳಿದರೆ ಚಿಲ್ಲರೆ ನೆಪ ಹೇಳುತ್ತಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಸರ್ಕಾರಿ ಮದ್ಯದಂಗಡಿ ಪ್ರಾರಂಭಿಸಿರುವುದೇ ಗರಿಷ್ಠ ಮಾರಾಟ ಬೆಲೆಗೆ (ಎಂಆರ್‌ಪಿ) ಮದ್ಯ ಸಿಗಬೇಕು ಎನ್ನುವ ಕಾರಣಕ್ಕಾಗಿ. ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಎಂಎಸ್ಐಎಲ್‌ಗಳೇ ನೇರವಾಗಿ ಗ್ರಾಹಕರಿಂದ ಎಂಆರ್‌ಪಿಗಿಂತಲೂ ಹೆಚ್ಚಿನ ಹಣ ಪಡೆಯುತ್ತಿವೆ!

ಸರ್ಕಾರ ಒಂದೆಡೆ ದುಬಾರಿ ಬೆಲೆಯ ಮದ್ಯದ ದರವನ್ನು ಕಡಿಮೆ ಮಾಡುವುದಾಗಿ ಹೇಳುತ್ತಿದೆ. ಆದರೆ ಈಗಾಗಲೇ ಕಡಿಮೆ ಬೆಲೆಗೆ ಸಿಗುತ್ತಿರುವ ಮದ್ಯಕ್ಕೆ ಮದ್ಯದಂಗಡಿ ಮಾಲೀಕರು ಹೆಚ್ಚಿನ ದರ ವಿಧಿಸುತ್ತಿದ್ದು, ಮದ್ಯಪ್ರಿಯರು ಮದ್ಯ ಸೇವಿಸುವ ಮೊದಲೇ ಸುಸ್ತಾಗುವಂತೆ ಮಾಡುತ್ತಿದೆ.

ಎಷ್ಟು ಹೆಚ್ಚು?: ಎಂಆರ್‌ಪಿ ಬೆಲೆಗೆ ಮದ್ಯ ಸಿಗುವ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮಾರಾಟ ಮಳಿಗೆಗಳಲ್ಲೂ ಪ್ರತಿ ಪ್ಯಾಕೆಟ್ ಮತ್ತು ಬಾಟಲಿ ಮೇಲೆ ಕನಿಷ್ಠ ₹5ರಿಂದ ಗರಿಷ್ಠ ₹25ರ ವರೆಗೆ ಹೆಚ್ಚಿನ ದರ ಪಡೆಯಲಾಗುತ್ತಿದೆ. ಯಾರನ್ನೇ ಕೇಳಿದರೂ ಹೌದು, ಹೆಚ್ಚುವರಿಯಾಗಿ ಕೊಡಬೇಕು ಎನ್ನುತ್ತಾರೆ.

ಜಿಲ್ಲೆಯಲ್ಲಿ ಒಟ್ಟು 19 ಎಂಎಸ್‌ಐಎಲ್ ಮಳಿಗೆಗಳಿದ್ದು, ಬಹುತೇಕ ಕಡೆಗಳಲ್ಲಿಯೂ ಇಂತಹ ಅಲಿಖಿತ ನಿಯಮ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಎಂಎಸ್‌ಐಎಲ್ ಮಳಿಗೆಗಳಲ್ಲಿ ಸಾಮಾನ್ಯ ಸಂಗತಿ ಎಂಬಂತೆ ಗ್ರಾಹಕರು ಹೆಚ್ಚಿನ ಬೆಲೆ ತೆರುತ್ತಾರೆ. ಇದರ ಬಗ್ಗೆ ಪ್ರಶ್ನಿಸಿದರೆ ಸಾಕು, ಮಾರಾಟಗಾರರು ಮದ್ಯವೇ (ಸ್ಟಾಕ್) ಇಲ್ಲ, ಹೋಗು ಎಂದು ಸಾಗ ಹಾಕುತ್ತಾರಂತೆ.

ಯಾರಿಗೆ ಹೇಳುವುದು?: ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತದೆ. ಸಿಎಲ್ -2 ಲೈಸೆನ್ಸ್ ಹೊಂದಿದ ಅಂಗಡಿಗಳಲ್ಲೂ ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ನಡೆಯುತ್ತಿದೆ. ಪಾರ್ಸೆಲ್ ತೆಗೆದುಕೊಂಡು ಹೋದರೂ ಹೆಚ್ಚಿನ ಬೆಲೆ ಕೊಟ್ಟು ಮದ್ಯ ಖರೀದಿಸಬೇಕು. ಹೀಗಾಗಿ ಎಂಆರ್‌ಪಿ ಬೆಲೆಗೆ ಸಿಗುವ ಎಂಎಸ್‌ಐಎಲ್ ಅಂಗಡಿಗಳಿಗೆ ಹೋದರೂ ₹5ರಿಂದ ₹25 ವರೆಗೆ ಹೆಚ್ಚು ಹಣ ಕೊಡಬೇಕಾಗಿದೆ. ಐದು ರುಪಾಯಿಗಾಗಿ ಯಾರೊಬ್ಬರೂ ಅಬಕಾರಿ ಅಧಿಕಾರಿಗಳಿಗೆ ದೂರು ಕೊಡುವುದಿಲ್ಲ. ಹೀಗಾಗಿಯೇ ಎಂಎಸ್‌ಐಎಲ್ ಮಾರಾಟಗಾರರು ಯಾರ ಭಯವಿಲ್ಲದೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ಕುಡುಕರು.

ಚಿಲ್ಲರೆ ನೆಪ: ಎಂಆರ್‌ಪಿಗಿಂತ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಮದ್ಯದಂಗಡಿ ಮಾಲೀಕರನ್ನು ಕೇಳಿದರೆ ಚಿಲ್ಲರೆ ನೆಪ ಹೇಳುತ್ತಾರೆ. ₹200 ನೋಟು ಕೊಟ್ಟು 185 ಬೆಲೆಯ ಮದ್ಯ ಖರೀದಿಸಿದರೆ ₹5 ಚಿಲ್ಲರೆ ಇಲ್ಲ ಎಂದು ₹10 ಮರಳಿ ಕೊಡುತ್ತಾರೆ. ಅದೇ ₹500 ನೋಟು ಕೊಟ್ಟಾಗಲೂ ಚಿಲ್ಲರೆ ಇಲ್ಲ ಎನ್ನುವ ಸಬೂಬು ನೀಡಿ ₹200 ಪಡೆಯುವುದು ಎಲ್ಲ ಕಡೆಗಳಲ್ಲಿಯೂ ಸಾಮಾನ್ಯವಾಗಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎನ್ನುವುದು ಗ್ರಾಹಕರ ಒತ್ತಾಸೆಯಾಗಿದೆ. ಕುಡುಕರ ಮಾತು ನಂಬಿ: ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಚಟಕ್ಕೆ ಅಂಟಿಕೊಂಡಿದ್ದೇವೆ. ಬಾರ್‌ಗಳಲ್ಲಿ ಹೆಚ್ಚಿನ ದರಕ್ಕೆ ಹೇಳುತ್ತಾರೆ ಎಂಬ ಕಾರಣಕ್ಕೆ ಎಂಎಸ್‌ಐಎಲ್ ಮಾರಾಟ ಮಳಿಗೆಗೆ ಹೋದರೆ, ಅಲ್ಲಿಯೂ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ವಿಷಯವನ್ನು ನಾವು ಯಾರಿಗಾದರೂ ಹೇಳಿದರೆ ಯಾರೂ ನಂಬುವುದಿಲ್ಲ. ಇನ್ನು ಮದ್ಯ ಮಾರಾಟ ಮಾಡಿದ್ದಕ್ಕೆ ರಸೀದಿಯನ್ನೂ ಕೊಡುವುದಿಲ್ಲ. ಹೀಗಾಗಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗುವುದಿಲ್ಲ. ಆದರೆ ಅಧಿಕಾರಿಗಳಿಗೆ ನಿಜವಾಗಿಯೂ ಇಚ್ಛಾಶಕ್ತಿ ಇದ್ದರೆ ಎಂಎಸ್‌ಐಎಲ್ ಮಳಿಗೆಯಲ್ಲಿ ಹಾಕಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿ ನೋಡಿದರೆ ಖಂಡಿತವಾಗಿಯೂ ಹೆಚ್ಚಿನ ದರ ವಿಧಿಸುತ್ತಿರುವುದು ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ. ಆಗಲಾದರೂ ಕುಡುಕರನ್ನು ನಂಬಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ ಎನ್ನುತ್ತಾರೆ ಮದ್ಯಪ್ರಿಯರು. ಕೆಲವೆಡೆ ಎಂಎಸ್‌ಐಎಲ್ ಮಳಿಗೆಯಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ಕಡೆ ಈಗಾಗಲೇ ದಾಳಿ ನಡೆಸಿ ದಂಡ ವಿಧಿಸಲಾಗಿದೆ. ನಿರ್ದಿಷ್ಟವಾಗಿ ದೂರು ನೀಡಿದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಉಪ ಆಯುಕ್ತರಾದ ಲಕ್ಷ್ಮಿ ನಾಯಕ ಹೇಳುತ್ತಾರೆ.