ಗುಂಡ್ಲುಪೇಟೆಯಲ್ಲಿ ಅರ್ಧ ಗಂಟೇಲೇ ರೈಲ್ವೆ ಕಂಬಿಗೆ ಸಿಕ್ಕಿದ್ದ ಕಾಡಾನೆ ರಕ್ಷಣೆ

| Published : Sep 02 2024, 02:01 AM IST

ಗುಂಡ್ಲುಪೇಟೆಯಲ್ಲಿ ಅರ್ಧ ಗಂಟೇಲೇ ರೈಲ್ವೆ ಕಂಬಿಗೆ ಸಿಕ್ಕಿದ್ದ ಕಾಡಾನೆ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ರೈಲ್ವೆ ಕಂಬಿಯಡಿ ನುಸುಳಲು ಹೋದ ಸಲಗವೊಂದು ಸಿಲುಕಿದ್ದನ್ನು ಕಂಡ ಮದ್ದೂರು ಅರಣ್ಯ ಇಲಾಖೆಯ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಕೇವಲ ಅರ್ಧ ಗಂಟೆಯಲ್ಲೇ ರೈಲ್ವೆ ಕಂಬಿಯಿಂದ ಕಾಡಾನೆ ಬಿಡಿಸಿ ಕಾಡಿಗೆ ಕಳುಹಿಸಿದ ಪ್ರಸಂಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆ ತ್ವರಿತ ಕ್ರಮ । ಮದ್ದೂರು ಆರ್‌ಎಫ್‌ಒ ಪುನೀತ್‌ ಕುಮಾರ್‌ ತಂಡ ಕಾರ್ಯಾಚರಣೆ । ರೈಲ್ವೆ ಕಂಬಿ ನುಸುಳುವಾಗ ಘಟನೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರೈಲ್ವೆ ಕಂಬಿಯಡಿ ನುಸುಳಲು ಹೋದ ಸಲಗವೊಂದು ಸಿಲುಕಿದ್ದನ್ನು ಕಂಡ ಮದ್ದೂರು ಅರಣ್ಯ ಇಲಾಖೆಯ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಕೇವಲ ಅರ್ಧ ಗಂಟೆಯಲ್ಲೇ ರೈಲ್ವೆ ಕಂಬಿಯಿಂದ ಕಾಡಾನೆ ಬಿಡಿಸಿ ಕಾಡಿಗೆ ಕಳುಹಿಸಿದ ಪ್ರಸಂಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಗೋಪಾಲಸ್ವಾಮಿ ಬೆಟ್ಟದ ಕಡೆಯಿಂದ ಬಂದ ಎರಡು ಕಾಡಾನೆಗಳು ಮದ್ದೂರು ವಲಯದ ಮಾವಿನ ಹಳ್ಳದ ಬಳಿಯ ರೈಲ್ವೆ ಕಂಬಿ ದಾಟಲು ಹೋಗಿದ್ದವು. ಈ ವೇಳೆ ಸಲಗ ರೈಲ್ವೆ ಕಂಬಿಯಡಿ ನುಸುಳಲು ಹೋದಾಗ ಸಿಲುಕಿದೆ.

ಸಿಲುಕಿದ ಸಲಗ ಕಂಡ ಜೊತೆಯಲ್ಲಿದ್ದ ಕಾಡಾನೆ ಸಿಲುಕಿದ ಆನೆ ತಳ್ಳಲು ಪ್ರಯತ್ನಿಸಿದೆ. ಆದರೆ ಸಿಲುಕಿದ ಆನೆಯ ಜೊತೆಗಿದ್ದ ಆನೆಯೂ ಅಲ್ಲೇ ಉಳಿದಿದೆ. ಗಸ್ತಿನಲ್ಲಿದ್ದ ಮದ್ದೂರು ವಲಯದ ಅರಣ್ಯ ಸಿಬ್ಬಂದಿ ಕಾಡಾನೆ ರೈಲ್ವೆ ಕಂಬಿಯಡಿ ಸಿಲುಕಿರುವುದನ್ನು ಕಂಡು ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್‌ ಕುಮಾರ್‌ಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ತಕ್ಷಣವೇ ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್‌ ಕುಮಾರ್‌ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ರೈಲ್ವೆ ಕಂಬಿಗೆ ಹಾಕಲಾಗಿದ್ದ ನೆಟ್‌ಗಳನ್ನು ತೆಗೆದು ಹಾಕಿದರೆ ಆನೆ ತಾನಾಗಿಯೇ ಹೋಗುತ್ತದೆ ಎಂದು ಯೋಜಿಸಿದ್ದಾರೆ.

ಸಿಲುಕಿದ ಆನೆ ಬಳಿ ಮತ್ತೊಂದು ಆನೆ ಕಂಡ ಸಿಬ್ಬಂದಿ ಕೂಗಿದಾಗ ಆನೆ ಜೋರಾಗಿ ಮುಂದೆ ಹೋಗಿ ರೈಲ್ವೆ ಬ್ಯಾರಿಕೇಡ್‌ ದಾಟಿ ಕಾಡಿನೊಳಗೆ ಓಡಿ ಹೋಗಿದೆ. ಬಳಿಕ ಆನೆ ಸಿಲುಕಿದ್ದ ಕಂಬಿ ಸ್ವಲ್ಪ ಸಡಿಲವಾದ ಬಳಿಕ ಅರಣ್ಯ ಸಿಬ್ಬಂದಿ ಜೋರಾಗಿ ಕೂಗಿದಾಗ ಕಂಬಿಯಡಿಗೆ ಸಿಲುಕಿದ್ದ ಸಲಗ ಜಾರಿಕೊಂಡು ಕಾಡಿನೊಳಗೆ ಓಡಿ ಹೋಗಿದೆ ಎಂದು ವಲಯ ಅರಣ್ಯಾಧಿಕಾರಿ ಪುನೀತ್‌ ಕುಮಾರ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕಾಡಾನೆ ರಕ್ಷಿಸುವಲ್ಲಿ ವಲಯ ಅರಣ್ಯಾಧಿಕಾರಿ ಪುನೀತ್‌ ಕುಮಾರ್‌, ಡಿಆರ್‌ಎಫ್‌ಒ ರವಿಕುಮಾರ್‌, ಸಿಬ್ಬಂದಿ ಸಂಜಯ್‌, ನದಾಫ್‌, ಜೀವನ್‌ (ಚಾಲಕ), ಜೆ.ಮಾದೇವ್‌, ಮನು ಸಫಲರಾಗಿದ್ದಾರೆ.

ರಕ್ಷಿಸಿದ ಅರಣ್ಯ ಸಿಬ್ಬಂದಿ:

ಕಾಡಾನೆಯೊಂದು ರೈಲ್ವೆ ಕಂಬಿಯಡಿಗೆ ಸಿಲುಕಿ ಒದ್ದಾಡುತ್ತಿದ್ದುದನ್ನು ಕಂಡ ಗಸ್ತಿನಲ್ಲಿದ್ದ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಸಲಗವೊಂದು ಬಚಾವ್‌ ಆಗಿದೆ. ಸಿಬ್ಬಂದಿ ಕರ್ತವ್ಯ ಪ್ರೇಮಕ್ಕೆ ಇಂದಿನ ಘಟನೆ ತಾಜಾ ಉದಾಹರಣೆಯಾಗಿದೆ.

ಅರಣ್ಯ ಮತ್ತು ವನ್ಯಜೀವಿಗಳ ರಕ್ಷಿಸಲು ಅರಣ್ಯ ಸಿಬ್ಬಂದಿ ಕೆಲಸವನ್ನು ಸಾರ್ವಜನಿಕರು ಹಾಗೂ ಪರಿಸರವಾದಿಗಳು ಪ್ರಶಂಶಿಸಿದ್ದಾರೆ.

ಕಿಲಾಡಿ ಕಾಡಾನೆ:

ಮದ್ದೂರು ವಲಯ ಮಾವಿನ ಹಳ್ಳದ ಬಳಿ ಕಾಡಿಗೆ ತೆರಳುತ್ತಿದ್ದ ಎರಡು ಕಾಡಾನೆಗಳಲ್ಲಿ ಕಿಲಾಡಿ ಕಾಡಾನೆಯೊಂದು ರೈಲ್ವೆ ಬ್ಯಾರಿಕೇಡ್‌ ಅನ್ನೇ ದಾಟಿ ಕೊಂಡು ಹೋಗಿದೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವನ್ಯಜೀವಿ ರಕ್ಷಿಸುವ ಮತ್ತು ಉಳಿಸುವ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದೆ. ಜವಾಬ್ದಾರಿಯ ಜೊತೆಗೆ ಬದ್ಧತೆಯ ಭಾಗವಾಗಿ ಮದ್ದೂರು ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ರೈಲ್ವೆ ಕಂಬಿ ನೆಟ್‌ ಬಿಚ್ಚಿ ಸಡಿಸಲಗೊಳಿಸಿದ ಬಳಿಕ ಆನೆ ಹೋಗಿದೆ. ಆನೆ ರಕ್ಷಿಸಿದ ತೃಪ್ತಿ ಇಲಾಖೆಗೆ ಇದೆ.

ಎಸ್.ಪ್ರಭಾಕರನ್‌, ಡಿಸಿಎಫ್‌, ಬಂಡೀಪುರ.