ಸಾರಾಂಶ
ಬಿರುಗಾಳಿಗೆ ಆಸ್ಪತ್ರೆಯ ಮುಂಭಾಗದ ಬೃಹತ್ ಮರದ ಕೊಂಬೆ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿಗೊಳಗಾಗಿರುವ ಘಟನೆ ಹನೂರು ತಾಲೂಕಿನ ಕೂಡ್ಲೂರಿನಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಬಿರುಗಾಳಿಗೆ ಆಸ್ಪತ್ರೆಯ ಮುಂಭಾಗದ ಬೃಹತ್ ಮರದ ರಂಬೆ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿಗೊಳಗಾಗಿರುವ ಘಟನೆ ಹನೂರು ತಾಲೂಕಿನ ಕೂಡ್ಲೂರಿನಲ್ಲಿ ಜರುಗಿದೆ.ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆಸ್ಪತ್ರೆಯ ಮುಂಭಾಗ ರಸ್ತೆಯಲ್ಲಿ ಬಿದ್ದಿದ್ದ ಮರದ ರಂಬೆಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಕಲ್ಪಿಸಿದ್ದಾರೆ.
ಕೂಡ್ಲೂರು ಗ್ರಾಮದ ಆಸ್ಪತ್ರೆಯ ಮುಂಭಾಗದ ವಿದ್ಯುತ್ ಕಂಬ, ಟ್ರಾನ್ಸ್ ಫಾರಂ ಹಾಳಾಗಿರುವುದರಿಂದ ಆಸ್ಪತ್ರೆ ಹಾಗೂ ಕುಡಿಯುವ ನೀರಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವಾರು ಮನೆಗಳಿಗೆ ಇದೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಹೀಗಾಗಿ ಸಂಬಂಧಪಟ್ಟ ಚೆಸ್ಕಾಂ ಇಲಾಖೆ ಕೂಡಲೆ ವಿದ್ಯುತ್ ಕಂಬ ಬದಲಾವಣೆ ಮಾಡಿ ಟ್ರಾನ್ಸ್‌ಫಾರ್ಮರ್ ದುರಸ್ತಿಪಡಿಸಿ ಸರ್ಕಾರಿ ಆಸ್ಪತ್ರೆಗೆ ಕುಡಿಯುವ ನೀರಿನ ಮೋಟಾರ್ ಪಂಪ್‌ಸೆಟ್‌ಗೆ ವಿದ್ಯುತ್ ಕಲ್ಪಿಸುವಂತೆ ಕೂಡ್ಲೂರು ಗ್ರಾಮದ ರೈತ ಮುಖಂಡ ವೆಂಕಟೇಶ್ ಒತ್ತಾಯಿಸಿದ್ದಾರೆ.ತಾಲೂಕಿನ ಬೂದಿಪಡಗ ಗ್ರಾಮದ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು ವಿದ್ಯುತ್ ಕಂಬ ಮುರಿದು ತುಂಡಾಗಿ ಗ್ರಾಮದ ವಿದ್ಯುತ್ ಸಂಪರ್ಕವೇ ಕಡಿತಗೊಂಡಿರುವುದರಿಂದ ಸೋಮವಾರ ರಾತ್ರಿ ಇಡೀ ದಿನ ನಿವಾಸಿಗಳು ಕಗ್ಗತ್ತಲಿನಲ್ಲಿ ಕಾಲ ಕಳೆಯುವಂತಾಯಿತು. ಕೂಡಲೆ ಮುರಿದು ಹೋಗಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಹೊಸ ವಿದ್ಯುತ್ ಕಂಬ ಹಾಕಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಕಲ್ಪಿಸುವಂತೆ ಗ್ರಾಮದ ಕುಮಾರ್ ಆಗ್ರಹಿಸಿದ್ದಾರೆ.
ಕೂಡ್ಲೂರು ಸರ್ಕಾರಿ ಆಸ್ಪತ್ರೆ ಮುಂಭಾಗ ವಿದ್ಯುತ್ ಕಂಬ ಬದಲಾವಣೆ ಮಾಡಿ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸೂಚನೆ ನೀಡಲಾಗಿದೆ. ಬೂದಿಪಡಗ ಗ್ರಾಮದಲ್ಲಿ ವಿದ್ಯುತ್ ಕಂಬ ಮುರಿದಿರುವ ಬಗ್ಗೆ ಆ ಭಾಗದ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಲಾಗುವುದು.ಶಂಕರ್, ಎಇಇ ಹನೂರು ಚೆಸ್ಕಾಂ ಉಪ ವಿಭಾಗ