ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಗಂಗನ ದೊಡ್ಡಿ ಗ್ರಾಮದ ರಸ್ತೆಯಲ್ಲಿ ಮಲಗಿದ್ದ ಚಿರತೆ ಬೋನಿಗೆ ಬೀಳದೆ ಗ್ರಾಮಸ್ಥರನ್ನು ನಿದ್ದೆಗೆಡಿಸಿದೆ.ಗಂಗನ ದೊಡ್ಡಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಚಿರತೆಯೊಂದು ರೈತರ ಜಮೀನುಗಳಲ್ಲಿ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ. ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ವಿಫಲ ಆಗಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ರೈತರ ಕುರಿಯೊಂದನ್ನು ಕೊಂದು ಹಾಕಿತ್ತು. ಈಗ ಮತ್ತೆ ಬುಧವಾರ ರಾತ್ರಿ 9ರ ಸಮಯದಲ್ಲಿ ಗಂಗನ ದೊಡ್ಡಿ ಮುಖ್ಯರಸ್ತೆಯಲ್ಲಿ ಚಿರತೆ ಮಲಗಿರುವುದನ್ನು ಕಂಡ ಯುವಕರು ಬೆದರಿ ಓಡಿಹೋಗಿದ್ದಾರೆ.ಬೋನಿಗೆ ಬೀಳೆದ ಚಿರತೆ: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಜೋನ್ ವಲಯ ಅರಣ್ಯ ಪ್ರದೇಶದ ಅಂಚಿನಲ್ಲಿ ಬರುವ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ, ಕುರುಬರ ದೊಡ್ಡಿ ಸುತ್ತಲಿನ ಗ್ರಾಮಗಳಲ್ಲಿ ಹಲವಾರು ತಿಂಗಳುಗಳಿಂದ ಚಿರತೆ ರೈತರ ಜಮೀನುಗಳಲ್ಲಿ ಸಾಕು ಪ್ರಾಣಿಗಳಾದ ನಾಯಿ, ಮೇಕೆ ಕುರಿ ಇನ್ನಿತರ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದು, ಅರಣ್ಯ ಅಧಿಕಾರಿಗಳು ಅದನ್ನು ಹಿಡಿಯಲು ಸಾಧ್ಯವೇ ಇಲ್ಲದೆ ಬೋನ್ ಇಟ್ಟಿದ್ದಾರೆ. ಬೋನಿಗೆ ಬೀಳದೆ ಚಾಲಾಕಿ ಚಿರತೆ ಸುತ್ತಲಿನ ರೈತರ ಜಮೀನುಗಳಲ್ಲೇ ನಿತ್ಯ ರಾತ್ರಿ ವೇಳೆ ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ಗಂಗನದೊಡ್ಡಿ ಗ್ರಾಮಸ್ಥರು ಚಿರತೆ ನೋಡಿರುವ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ ದಿನನಿತ್ಯ ಸಿಬ್ಬಂದಿಯನ್ನು ಗಂಗನ ದೊಡ್ಡಿ ಸುತ್ತಮುತ್ತ ಚಿರತೆಗಾಗಿ ಶೋಧನೆ ನಡೆಸುತ್ತಿದ್ದಾರೆ. ಜೊತೆಗೆ ಅಲ್ಲಿಯೇ ಬೋನ್ ಇಡಲಾಗಿದೆ. ಆದರೂ ಚಿರತೆ ಬೋನಿಗೆ ಬೀಳದೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿರುವ ಬಗ್ಗೆ ಮಾಹಿತಿ ಬಂದಿದೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರವೀಣ್, ವಲಯ ಅರಣ್ಯ ಅಧಿಕಾರಿ
ಗಂಗನದೊಡ್ಡಿ, ಬಸಪ್ಪನದೊಡ್ಡಿ ವಿವಿಧ ಗ್ರಾಮಗಳ ಸುತ್ತಲಿನಲ್ಲಿ ಚಿರತೆ ರೈತರ ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮದ ರೈತನ ಕುರಿಯೊಂದನ್ನು ಕೊಂದು ಪರಾರಿ ಆಗಿದೆ. ಬುಧವಾರ ರಾತ್ರಿ ಮುಖ್ಯರಸ್ತೆಯಲ್ಲಿ ಚಿರತೆ ಮಲಗಿರುವುದನ್ನು ಕಂಡು ಗ್ರಾಮಸ್ಥರು ಭಯ ಪಡುತ್ತಿದ್ದಾರೆ. ಅರಣ್ಯಾಧಿಕಾರಿಗಳು ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಕಾಟ ಕೊಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಬೇಕು. ಅಮ್ಜದ್ ಖಾನ್, ರಾಜ್ಯ ರೈತ ಸಂಘ, ಹನೂರು ತಾಲೂಕು ಘಟಕ ಅಧ್ಯಕ್ಷ