ಹೊನ್ನಾಳಿಯಲ್ಲಿ ಅಬ್ಬರದ ಮಳೆಗಾಳಿಗೆ ಬೆಳೆ, ಮರ ಧರೆಗೆ

| Published : Aug 19 2024, 12:45 AM IST

ಸಾರಾಂಶ

ಭಾರೀ ಮಳೆಯಿಂದ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಸಮೀಪ ಇರುವ ಜಮೀನಿನಲ್ಲಿ ಮೆಕ್ಕೆಜೋಳ ಸಂಪೂರ್ಣ ನೆಲಕಚ್ಚಿರುವುದನ್ನು ತಹಸೀಲ್ದಾರ್ ಪಟ್ಟರಾಜಗೌಡ ಹಾಗೂ ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ವೀಕ್ಷಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶನಿವಾರ ಸಂಜೆ ಬಿರುಗಾಳಿ ಹಾಗೂ ಗುಡುಗು ಸಮೇತ ಬಿದ್ದ ಬಾರಿ ಮಳೆಗೆ ಅಡಕೆ ಮರ ಹಾಗೂ ಮೆಕ್ಕೆಜೋಳ ನೆಲಕ್ಕುರಿಳಿದರೆ, ರಸ್ತೆ ಅಕ್ಕಪಕ್ಕದ ಮರಗಳು ಧರೆಗುರುಳಿವೆ. ಹೊನ್ನಾಳಿ ತಾಲೂಕಿನಾದ್ಯಂತ ವಿದ್ಯುತ್ ಕಂಬಗಳು ಬಿದ್ದಿವೆ, ಒಂದು ಸಂಪೂರ್ಣ ಹಾಗೂ ಒಂದು ಬಾಗಶಃ ಮನೆಗಳು ಜಖಂ ಆಗಿದೆ.

ಧಾರಕಾರ ಸುರಿದ ಮಳೆಗೆ 6 ಹೆಕ್ಟೇರ್‌ ಪ್ರದೇಶದಲ್ಲಿ ಫಲ ಬರುತ್ತಿದ್ದ ಅಡಕೆ, ಒಂದು ಎಕರೆಯಲ್ಲಿ ಬೆಳೆದಿದ್ದ ತೆಂಗು, 188 ಎಕರೆ ಮೆಕ್ಕೆಜೋಳ ಹಾಗೂ ಇನ್ನಿತರ ಕೃಷಿ ಬೆಳೆಗಳು ಸಂಪೂರ್ಣ ಹಾನಿಯಾಗಿದೆ.

ತಾಲೂಕಿನ ಅರಕೆರೆ, ಮಾಸಡಿ, ತರಗನಹಳ್ಳಿ, ಗೋಣಿಗೆರೆ ರಸ್ತೆಗಳಲ್ಲಿ ಮರಗಳು ರಸ್ತೆಗೆ ಬಿದ್ದ ಪರಿಣಾಮ ಸುಮಾರು ಎರಡು ಗಂಟೆ ಸಂಚಾರ ಅಸ್ತವ್ಯಸ್ತ ವಾಗಿದ್ದಲ್ಲದೆ, ತಾಲೂಕಿನ ಬಿದಿರಗಡ್ಡೆ, ಹೊಳೆಮಾದಾಪುರ, ಕ್ಯಾಸಿನಕೆರೆ, ಅರಕೆರೆ, ಹಳೆದೇವರ ಹೊನ್ನಾಳಿ, ಲಿಂಗಾಪುರ, ಬಾಗೆವಾಡಿ, ರಾಂಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಿರುಗಾಳಿ ಮತ್ತು ಮಳೆಗೆ ಸುಮಾರು 53 ವಿದ್ಯುತ್ ಕಂಬಗಳು ರಸ್ತೆ ಅಕ್ಕಪಕ್ಕ ಬಿದ್ದಿದ್ದರಿಂದ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ಮೂರು ಗಂಟೆಗೂ ಹೆಚ್ಚುಕಾಲ ವಿದ್ಯುತ್ ಇರಲಿಲ್ಲ ಎಂದು ಬೆಸ್ಕಾಂ ಅಧಿಕಾರಿ ಜಯಪ್ಪ ತಿಳಿಸಿದರು.

ತಹಸೀಲ್ದಾರ್ ಭೇಟಿ:

ತಹಸೀಲ್ದಾರ್ ಪಟ್ಟರಾಜಗೌಡ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಹಾಗೂ ಇತರೆ ಕಂದಾಯ ಇಲಾಖೆ ಅಧಿಕಾರಿಗಳು ಮಳೆಯಿಂದ ಹಾನಿಯಾದ ಅಡಕೆ, ತೆಂಗು ಹಾಗೂ ಮೆಕ್ಕೆಜೋಳ ಬೆಳೆ ಪರಿಶೀಲಿಸಿದರು. ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ಇನ್ನೆರಡು ದಿನಗಳಲ್ಲಿ ಮಳೆಯಿಂದ ಹಾನಿಯಾದ ಎಲ್ಲಾ ಪ್ರದೇಶಗಳ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಬೆಳೆ ಸಮೀಕ್ಷೆ ಮಾಡಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗವುದು ಎಂದು ತಿಳಿಸಿದರು.

ರೈತ ಬಸವರಾಜಪ್ಪ ಮನವಿ ಮಾಡಿ, ನೀವು ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಿದರೆ ಕೊಟ್ಟ ಕೂಲಿಗೂ ಸಾಕಾಗುವುದಿಲ್ಲ. ನಮಗೆ ₹5 ಲಕ್ಷ ಪರಿಹಾರ ನೀಡಿ ಎಂದು ಮನವಿ ಮಾಡಿದರು. ಕೂಡಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿ ಮೂಲಕ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳ ಸಮೀಪಕ್ಷೆ ಮಾಡಿಸಿ ರೈತರಿಗೆ ಪರಿಹಾರ ದೊರಕಿಸಿಕೊಡಿ ಎಂದು ಮನವಿ ಮಾಡಿದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ್ ನಾಯ್ಕ, ರಾಜಸ್ವ ನಿರೀಕ್ಷಕ ಸುಧೀರ್, ರಮೇಶ್ ಗ್ರಾಮ ಲೆಕ್ಕಾಧಿಕಾರಿ ದೊಡ್ಡೇಶ್, ಬಸವರಾಜು, ರಮೇಶ್, ಗ್ರಾಮ ಸಹಾಯಕ ಸಂಜೀವ್ ಹಾಗೂ ಶಿವಕುಮಾರ್ ಹಾಗೂ ರೈತ ಬಸವರಾಜಪ್ಪ ಇದ್ದರು.