ಸಾರಾಂಶ
ಹೋಳಿ ಆಚರಣೆ । ಸಣ್ಣವರು, ಹಿರಿಯರು, ಮಹಿಳೆಯರ ಸಡಗರ । ವಯಸ್ಸಿನ ಭೇದವಿಲ್ಲದೆ ಎಲ್ಲೆಡೆ ಬಣ್ಣದೋಕುಳಿ । ಕಾಮದಹನ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನಾಧ್ಯಂತ ಹಾಗೂ ಪಟ್ಟಣದಲ್ಲಿ ಪುಟ್ಟ ಪುಟ್ಟ ಮಕ್ಕಳು ಹಾಗೂ ಯುವಕರು ಹಾಗೂ ವೃದ್ಧರು ವಯಸ್ಸಿನ ತಾರತಮ್ಯವಿಲ್ಲದೆ ವಿವಿಧ ರೀತಿಯ ಬಣ್ಣಗಳನ್ನು ಪರಸ್ಪರ ಹಚ್ಚಿಕೊಂಡು ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಬಣ್ಣದೋಕುಳಿ ಆಡುತ್ತಿದ್ದುದ್ದು ಶನಿವಾರ ಕಂಡು ಬಂತು.ಹೊನ್ನಾಳಿ ಪಟ್ಣದ ವಿವಿಧ ಬಡಾವಣೆ ಹಾಗೂ ಕೇರಿಗಳಲ್ಲಿ ಯುವಕರು ಪರಸ್ಪರ ಬಣ್ಣ ಎರಚಾಡುತ್ತಾ ಬೈಕ್‌ಗಳಲ್ಲಿ ಮೆರವಣಿಗೆ ಮಾಡುತ್ತ ಬಣ್ಣದ ಹಬ್ಬ ಹೋಳಿಯನ್ನು ಸಂಭ್ರಮಿಸಿದರು. ಹಿಂದಿನ ರಾತ್ರಿ ಅಂದರೆ ಶುಕ್ರವಾರ ದುರ್ಗಿಗುಡಿ 2ನೇ ರಸ್ತೆ, ಹಳೆಪೇಟೆ ಹಾಗೂ ಹಿರೇಕಲ್ಮಠದ ಯುವಕರು ರತಿ ಮನ್ಮಥರನ್ನು ಅಲಂಕರಿಸಿ ಮೆರವಣಿಗೆ ಮಾಡಿ ನಂತರ ಶನಿವಾರ ಬೆಳಗಿನ ಜಾವ ಕಾಮದಹನ ಮಾಡಲಾಯಿತು.
ವರ್ಷದಿಂದ ವರ್ಷಕ್ಕೆ ಹೋಳಿ ಹಬ್ಬ ಕಳೆ ಕಳೆದುಕೊಳ್ಳುತ್ತಿದೆ:ಹೋಳಿ ಹಬ್ಬ ಅಥವಾ ಹಬ್ಬ ಎಂದು ಚಿರಪರಿಚಿತವಾಗಿರುವ ಈ ಹಬ್ಬ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಹೋಳಿ ಹಬ್ಬದ ದಿನ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಚಿಕ್ಕ ಚಿಕ್ಕ ಮಕ್ಕಳಿಂದ ವೃದ್ಧರ ವರೆಗೆ ಎಲ್ಲರಿಗೂ ಬಣ್ಣ ಹಾಕುತ್ತ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದರು, ಆದರೆ ಬರು ಬರುತ್ತ ಹೋಳಿ ಹಬ್ಬದ ಸಂಭ್ರಮ ಕ್ಷೀಣಿಸುತ್ತ ಬಂದಿದೆ. ಪೋಷಕರು ತಮ್ಮ ಮಕ್ಕಳನ್ನು ಹೊರಗೆ ಕಳುಹಿಸುತ್ತಿಲ್ಲ. ಪರೀಕ್ಷೆ ಭೂತವನ್ನು ಮುಂದಿಟ್ಟು ಓದಿಕೊ ಹೊರಗೆ ಹೋಗಬೇಡ ಎಂದು ಹೇಳುತ್ತ ಪೋಷಕರು ಮಕ್ಕಳನ್ನು ಹೊರಗೆ ಕಳುಹಿಸುತ್ತಿಲ್ಲ,ಇನ್ನೊಂದು ಕಡೆ ಯುವಕರು ಮೊಬೈಲ್ ಗೀಳು ಹಚ್ಚಿಕೊಂಡು ಹೋಳಿಯಲ್ಲಿ ಪಾಲ್ಗೊಳುತ್ತಿಲ್ಲ, ಇನ್ನೂ ಪರಿಕ್ಷೆಯ ಭಯ ಬೇರೆ. ಈ ಎಲ್ಲಾ ಕಾರಣಗಳಿಂದ ಹೋಳಿ ಹಬ್ಬ ಹಿಂದಿನ ಸಂಭ್ರಮ, ವೈಭವವನ್ನು ಕಳೆದುಕೊಂಡಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.