ಕಿಮ್ಸ್‌ನಲ್ಲಿ ಇನ್ಮುಂದೆ ನವಜಾತ ಶಿಶುಗಳಿಗೆ ಜೀವಾಮೃತ

| Published : Apr 11 2024, 12:45 AM IST

ಸಾರಾಂಶ

ತಾಯಿಯ ಹಾಲು ಕೊಡುವುದಕ್ಕಾಗಿಯೇ ಕಿಮ್ಸ್‌ನಲ್ಲಿ ಜೀವಾಮೃತ ಹೆಸರಿನಲ್ಲಿ ಹ್ಯುಮನ್‌ ಮಿಲ್ಕ್‌ ಬ್ಯಾಂಕ್‌ ಸ್ಥಾಪಿಸಲಾಗುತ್ತಿದೆ. ತಾಯಂದಿರು ಕೊಡುವ ಹಾಲು ಸಂಗ್ರಹಿಸಿ ಸಂಸ್ಕರಿಸಿದ ನಂತರ ಪಂಪ್‌ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ.

ಹುಬ್ಬಳ್ಳಿ:

ನಗರದ ಕಿಮ್ಸ್‌ನ ಚಿಕ್ಕ ಮಕ್ಕಳ ವಿಭಾಗದಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ (ಜೀವಾಮೃತ)ನ್ನು ಏ. 12ರಂದು ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಸಲಾಗುತ್ತಿದೆ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ರಾಜು ದೊಡ್ಡಮನಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ ಟೌನ್ ಮತ್ತು ರೋಟರಿ ಕ್ಲಬ್ ಆಫ್ ಕೊಪೆಲ್ ರೋಟರಿ ಇಂಟರ್‌ ನ್ಯಾಷನಲ್ ರೋಟರಿ ಫೌಂಡೇಶನ್ ಗ್ರ್ಯಾಂಟ್ ಅಡಿಯಲ್ಲಿ ₹ 46 ಲಕ್ಷ ಮೌಲ್ಯದ ಅತ್ಯಾಧುನಿಕ ಯಂತ್ರೋಪಕರಣ ಖರೀದಿಸಿ ಕಿಮ್ಸ್‌ಗೆ ನೀಡಲಾಗುತ್ತಿದೆ. ಕಿಮ್ಸ್‌ನ ತಾಯಿ ಮತ್ತು ಮಗು ವಿಭಾಗದ ನೆಲಮಾಳಗಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ನಂತರ ಹೊಸ ಓಟಿ ಕಾಂಪ್ಲೆಕ್ಸ್ ನ ಚಾಲುಕ್ಯ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ‌ ಎಂದರು.

ಅಂದು ನಡೆಯುವ ಕಾರ್ಯಕ್ರಮಕ್ಕೆ ರೋಟರಿ ಜಿಲ್ಲಾ ಗವರ್ನರ್ ನಾಸಿರ್ ಬೋರಸದವಾಲ್ ಮತ್ತು ಹಿಂದಿನ ಗವರ್ನರ್ ವೆಂಕಟೇಶ ದೇಶಪಾಂಡೆ, ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಸುರೇಂದ್ರ ಫೋರವಾಲ್, ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ್ ಸಿ, ಕಾರ್ಯದರ್ಶಿ ಶಿವಪ್ರಸಾದ್ ಲಕ್ಕಮನಹಳ್ಳಿ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆ ಎಂದರು.

ಸ್ತನ್ಯಪಾನವು ನವಜಾತ ಶಿಶುಗಳಿಗೆ ಮುಖ್ಯ ಆಹಾರ ನೀಡುವ ವಿಧಾನ. ಏಕೆಂದರೆ ತಾಯಿ ಹಾಲು ಅಮೃತ ಸಮಾನ. ಆದರೆ, ತಾಯಿ ಹಾಲು ಕೆಲವು ಕಾರಣಗಳಿಂದ ಸಿಗುವುದಿಲ್ಲ. ಇದರಿಂದಾಗಿ ಮಗು ಅನಾರೋಗ್ಯದಿಂದ ಬಳಲುವ ಸಾಧ್ಯತೆ ಇರಲಿದ್ದು, ತೂಕ ಇಳಿಕೆ, ಅಪೌಷ್ಟಿಕತೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ತಾಯಿಯ ಹಾಲು ಕೊಡುವುದಕ್ಕಾಗಿಯೇ ಕಿಮ್ಸ್‌ನಲ್ಲಿ ಜೀವಾಮೃತ ಹೆಸರಿನಲ್ಲಿ ಹ್ಯುಮನ್‌ ಮಿಲ್ಕ್‌ ಬ್ಯಾಂಕ್‌ ಸ್ಥಾಪಿಸಲಾಗುತ್ತಿದೆ. ತಾಯಂದಿರು ಕೊಡುವ ಹಾಲು ಸಂಗ್ರಹಿಸಿ ಸಂಸ್ಕರಿಸಿದ ನಂತರ ಪಂಪ್‌ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ಈ ವ್ಯವಸ್ಥೆ ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಈಗ ಆರಂಭಿಸಲಾಗುತ್ತಿದೆ ಎಂದರು.

ಈ ವೇಳೆ ಜೀವಾಮೃತ ಯೋಜನಾ ಸಂಚಾಲಕ ಡಾ. ಪ್ರಕಾಶ ವಾರಿ, ಲಿಂಗರಾಜ ಪಾಟೀಲ್, ವಾಸುಕಿ ಸಂಜಿ ಸೇರಿದಂತೆ ಹಲವರಿದ್ದರು.