ಕೋಡಂಬಳ್ಳಿ ಗ್ರಾಪಂಯಲ್ಲಿ ಒಂದೆಡೆ ಪ್ರತಿಭಟನೆ, ಮತ್ತೊಂದೆಡೆ ಸಮರ್ಥನೆ

| Published : Feb 05 2025, 12:33 AM IST

ಕೋಡಂಬಳ್ಳಿ ಗ್ರಾಪಂಯಲ್ಲಿ ಒಂದೆಡೆ ಪ್ರತಿಭಟನೆ, ಮತ್ತೊಂದೆಡೆ ಸಮರ್ಥನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಹಂತದಲ್ಲಿ ವಾದ ವಿವಾದ ಏರ್ಪಟ್ಟು, ಎರಡೂ ಬಣದವರು ಪರ ಹಾಗೂ ವಿರೋಧ ಘೋಷಣೆಗಳನ್ನು ಕೂಗಿದರು. ವಿಚಾರ ಗಂಭೀರವಾಗುವ ಹಂತಕ್ಕೆ ತಲುಪಿತ್ತು. ಸ್ಥಳದಲ್ಲಿದ್ದ ಪೊಲೀಸರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿ ಎಂದು ಎರಡು ಬಣದವನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಹಾಗೂ ಪರವಾಗಿ ಒಂದೇ ದಿನ ಒಂದೇ ಪೆಂಡಾಲ್ ಅಡಿಯಲ್ಲಿ ಪ್ರತಿಭಟನೆಗಳು ನಡೆದ ಪ್ರಸಂಗಕ್ಕೆ, ತಾಲೂಕಿನ ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಆವರಣ ಸಾಕ್ಷಿಯಾಯಿತು.

ಮಂಗಳವಾರ ಬೆಳಗ್ಗೆ ಪಂಚಾಯಿತಿ ಎದುರು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಗ್ರಾಪಂ ಎದುರು ಜಮಾಯಿಸಿದ ಗ್ರಾಮದ ಕೆಲ ಮುಖಂಡರು ಹಾಗೂ ಮಹಿಳೆಯರು ಅಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದರು. ಆದರೆ ಮತ್ತೊಂದೆಡೆ ಅದೇ ಪೆಂಡಾಲ್ ಅಡಿಯಲ್ಲಿ ಕುಳಿತ ಕೆಲ ಮಹಿಳೆಯರು ಹಾಗೂ ಮುಖಂಡರು ಗ್ರಾಪಂ ಆಡಳಿತದ ಪರ ನಿಂತು ಗುಣಗಾನ ಮಾಡಿ ಸಮರ್ಥನೆ ಮಾಡಿದರು.

ಅಕ್ರಮ ಆರೋಪ:

ಗ್ರಾಪಂ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ ಬಣದವರು, ಕಂಪ್ಯೂಟರ್ ಆಪರೇಟರ್, ಗ್ರಂಥಾಲಯ ಸಹಾಯಕರ ನೇಮಕದಲ್ಲಿ ಅಕ್ರಮ ನಡೆಸಲಾಗಿದೆ. ಇ- ಖಾತೆಗೆ ಹಣ ವಸೂಲಿ ಮಾಡಲಾಗುತ್ತಿದೆ. ಒಂದೇ ಕಾಮಗಾರಿಗೆ ಬೇರೆ ಬೇರೆ ಹೆಸರುಗಳಲ್ಲಿ ನಕಲಿ ಬಿಲ್, ಬೀದಿ ದೀಪಗಳ ಅಳವಡಿಕೆಯಲ್ಲಿ ನಕಲಿ ಬಿಲ್, ವಸತಿ ಯೋಜನೆಯಲ್ಲಿ ಅಕ್ರಮ, ಗ್ರಾಪಂ ನಿಧಿಯ ನಕಲು ಬಿಲ್, ಕಂದಾಯ ಭೂಮಿಗೆ ಇ- ಖಾತೆ ಮಾಡಿರುವುದು, ರಾಜಧನ ಪಾವತಿಸದೆ ದುರ್ಬಳಕೆ, ಎಸ್ಸಿ, ಎಸ್ಟಿ ಮೀಸಲು ಹಣ ದುರುಪಯೋಗ ಹೀಗೆ ಸಾಲು ಸಾಲು ಅಕ್ರಮಗಳನ್ನು ಮಾಡಲಾಗಿದೆ ಎಂದು ಆರೋಪ ಮಾಡಿದರು.

ಆಧಾರರಹಿತ ಆರೋಪ:

ಇತ್ತ ಇನ್ನೊಂದು ಗುಂಪು ಆರೋಪಗಳನ್ನು ಅಲ್ಲಗಳೆಯಿತು. ಗ್ರಾಮ ಪಂಚಾಯಿತಿ ಆಡಳಿತ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯುತ್ತಿವೆ. ಹಲವಾರು ವರ್ಷಗಳಿಂದ ಆಗದ ಅಭಿವೃದ್ಧಿ ಕೆಲಸ ನಾಲ್ಕು ತಿಂಗಳಿಂದ ಆಗುತ್ತಿವೆ. ಸುಮ್ಮನೇ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಯಾವುದಾದರೂ ಒಂದು ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು.

ಪರಿಶೀಲಿಸುವ ಭರವಸೆ:

ಪ್ರತಿಭಟನೆ ವಿಷಯ ತಿಳಿದು ತಾಪಂ ಕಾರ್ಯನಿರ್ವಹಣಾಧಿಕಾರಿ ಸೂಚನೆ ಮೇರೆಗೆ ಸ್ಥಳಕ್ಕೆ ಆಗಮಿಸಿದ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸಿದ್ದರಾಜು, ವಿರೋಧಿ ಗುಂಪಿನ ಆರೋಪಗಳನ್ನು ಆಲಿಸಿ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಿ, 20 ದಿನಗಳಲ್ಲಿ ತಪ್ಪುಗಳಾಗಿದ್ದರೆ ಕ್ರಮ ಜರುಗಿಸುವ ಭರವಸೆ ನೀಡಿದರು. ಅಂಗನವಾಡಿ ಕಟ್ಟಡ ಕಳಪೆ ಆಗಿರುವ ಬಗೆಗಿನ ಆರೋಪದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಇತ್ತ ಆಡಳಿತದ ಪರವಾಗಿರುವವರು ಸಹ ಅಧಿಕಾರಿಗೆ ಸಮಜಾಯಿಷಿ ನೀಡಿದರು. ಗ್ರಾಪಂನಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಆಡಳಿತ ಸರಿಯಾಗಿಯೇ ನಡೆಯುತ್ತಿದೆ ಎಂದು ಮನವರಿಕೆ ಮಾಡಿಕೊಡಲು ಮುಂದಾದರು.

ಒಂದು ಹಂತದಲ್ಲಿ ವಾದ ವಿವಾದ ಏರ್ಪಟ್ಟು, ಎರಡೂ ಬಣದವರು ಪರ ಹಾಗೂ ವಿರೋಧ ಘೋಷಣೆಗಳನ್ನು ಕೂಗಿದರು. ವಿಚಾರ ಗಂಭೀರವಾಗುವ ಹಂತಕ್ಕೆ ತಲುಪಿತ್ತು. ಸ್ಥಳದಲ್ಲಿದ್ದ ಪೊಲೀಸರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿ ಎಂದು ಎರಡು ಬಣದವನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಗ್ರಾಪಂ ವಿರುದ್ಧದ ಪ್ರತಿಭಟನೆಯಲ್ಲಿ ಧನಂಜಯ, ಸಚಿನ್, ರಂಜನ್, ಪ್ರಶಾಂತ್, ರಾಕೇಶ್, ನಂದೀಶ್, ಶ್ರೀಧರ್, ಸಿದ್ದೇಶ್, ಯೋಗೇಶ್, ಪದ್ಮಾ, ವರಲಕ್ಷ್ಮೀ ಸೇರಿದಂತೆ ಹಲವರಿದ್ದರು. ಪರವಾಗಿ ಗ್ರಾಪಂ ಸದಸ್ಯರಾದ ಪ್ರವೀಣ್ ಕುಮಾರ್, ಕೆ.ಎಸ್.ರಾಜಣ್ಣ, ಮುಖಂಡ ಸಿದ್ದರಾಜು, ಮಹೇಂದ್ರ ಮತ್ತಿತರರು ಇದ್ದರು.--