ಕುಷ್ಟಗಿಯಲ್ಲಿ ಅವಧಿಗೂ ಮುನ್ನವೇ ನೆತ್ತಿ ಸುಡುತ್ತಿದೆ ಬಿಸಿಲು

| Published : Feb 25 2024, 01:49 AM IST

ಕುಷ್ಟಗಿಯಲ್ಲಿ ಅವಧಿಗೂ ಮುನ್ನವೇ ನೆತ್ತಿ ಸುಡುತ್ತಿದೆ ಬಿಸಿಲು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಭೂಮಿ ಬರಡಾಗುತ್ತಿದೆ. ಬಿಸಿಲಿನ ಝಳ ಮತ್ತಷ್ಟು ಜನರನ್ನು ಹೈರಾಣಾಗಿಸುತ್ತಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಪಟ್ಟಣ ಸೇರಿ ತಾಲೂಕಿನಲ್ಲಿ ಬಿಸಿಲ ಬೇಗೆಗೆ ತತ್ತರಿಸಿದ ಜನ ಕಲ್ಲಂಗಡಿ, ಎಳನೀರು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.

ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಭೂಮಿ ಬರಡಾಗುತ್ತಿದೆ. ಬಿಸಿಲಿನ ಝಳ ಮತ್ತಷ್ಟು ಜನರನ್ನು ಹೈರಾಣಾಗಿಸುತ್ತಿದೆ. ನೆತ್ತಿ ಮೇಲೆ ಬಿಸಿಲಿನ ತಾಪ ಜೋರಾಗಿದೆ. ಫೆಬ್ರವರಿ ತಿಂಗಳಲ್ಲಿಯೇ ಬಿಸಿಲಿನ ಝಳಕ್ಕೆ ರಸ್ತೆಗಳು ಕಾದು ಕೆಂಡವಾಗುತ್ತಿವೆ. ಈಗಲೇ ಹೀಗಾದರೆ ಮುಂದಿನ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿನ ಉರಿ ಬಿಸಿಲಿನ ಸೆಕೆ ಊಹಿಸಿಕೊಳ್ಳಲು ಅಸಾಧ್ಯವೆನಿಸುತ್ತಿದೆ.

ಬೆಳಿಗ್ಗೆ 9-10 ಗಂಟೆಗೆಲ್ಲ ಉರಿ ಬಿಸಿಲಿನಿಂದ ಜನ ಕಂಗಾಲಾಗುತ್ತಿದ್ದಾರೆ. ಅದರಲ್ಲೂ ಮಧ್ಯಾಹ್ನ 12 ಗಂಟೆ ನಂತರದ ಬಿಸಿಲಿನ ತಾಪದ ಬಗ್ಗೆ ಮಾತನಾಡುವಂತಿಲ್ಲ. ವ್ಯಾಪಾರ ವಹಿವಾಟಿನ ಮೇಲೂ ಬಿಸಿಲು ಪ್ರತಿಕೂಲ ಪರಿಣಾಮ ಬೀರಿದೆ. ಮಾರುಕಟ್ಟೆ, ಮುಖ್ಯ ರಸ್ತೆಗಳಲ್ಲಿ ಜನಸಂಚಾರ ಕಡಿಮೆ ಆಗಿದೆ. ತಾಪಮಾನ ಹೆಚ್ಚಾಗಿರುವ ಕಾರಣ ತಂಪು ಪಾನೀಯ ಅಂಗಡಿಗಳಿಗೆ ಜನರು ಲಗ್ಗೆ ಇಡುತ್ತಿದ್ದಾರೆ. ಅಂಗಡಿಯವರಿಗೂ ಡಬಲ್ ಧಮಾಕಾ ಎಂಬಂತೆ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಬೇಸಿಗೆಯಲ್ಲಿ ಉಳಿದ ತಂಪು ಪಾನೀಯಗಳಿಗಿಂತ ಎಳನೀರು ಸೇವನೆ ಅತ್ಯಂತ ಉಪಯುಕ್ತವಾಗಿದ್ದು, ಇದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಉಂಟಾಗುವ ಕಾಯಿಲೆಗಳಿಗೆ ರಾಮಬಾಣದಂತಿದೆ. ದೇಹದ ಉಷ್ಣವನ್ನು ಸಮತೋಲನದಲ್ಲಿ ಇಡುತ್ತದೆ. ಹೆಚ್ಚು ಎಳನೀರು ಸೇವಿಸಿ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವಂತೆ ಹಿರಿಯರು ಹೇಳುತ್ತಾರೆ.

ತಾಲೂಕಿನಲ್ಲಿ ಪ್ರತಿದಿನ 33ರಿಂದ 36 ಡಿಗ್ರಿ ಸೆಲ್ಸಿಯಸ್ ಬಿಸಿಲು ಉಂಟಾಗಿದ್ದು, ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಬೆಳಿಗ್ಗೆ 6 ಗಂಟೆಗೆ ರೈತರು, ಕೂಲಿಕಾರರು ಹೊಲಕ್ಕೆ ತೆರಳಿ ಬಿಸಿಲು ಏರುವ ಮೊದಲೇ ಮನೆಗೆ ಮರಳುತ್ತಿರುವುದು ಉರಿ ಬಿಸಿಲಿಗೆ ಸಾಕ್ಷಿಯಾಗಿದೆ.

ಹಣ್ಣುಗಳಿಗೆ ಮೊರೆ:

ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಎಳನೀರು, ತರಾವರಿ ಹಣ್ಣುಗಳಿಗೆ ಬೇಡಿಕೆ ಬಂದಿದೆ. ಕಲ್ಲಂಗಡಿ, ಅನಾನಸ್, ಕರಬೂಜ, ಪಪ್ಪಾಯಿ, ಪೇರಲ, ಪೈನಾಪಲ್, ಬಾಳೆಹಣ್ಣು, ದ್ರಾಕ್ಷಿ, ಕರಿದ್ರಾಕ್ಷಿ, ಕಿತ್ತಳೆ, ಮೋಸಂಬಿ, ಸೇಬು, ಸ್ಟ್ರಾಬೆರಿ ಹಣ್ಣಿನ ಜ್ಯೂಸ್, ಕಬ್ಬಿನ ಹಾಲು, ಲಿಂಬು ಸೋಡಾ, ಮಜ್ಜಿಗೆ, ಲಸ್ಸಿ ಸೇವಿಸುತ್ತಿದ್ದಾರೆ. ಎಳನೀರು ದರ ₹40-50, ಕಲ್ಲಂಗಡಿ ₹90, ಜ್ಯೂಸ್ ಬೆಲೆ ₹30-60ಕ್ಕೆ ಏರಿಕೆಯಾಗಿದೆ.

ಫೆಬ್ರುವರಿ ತಿಂಗಳಿನಲ್ಲಿ ಭಾರಿ ಬಿಸಿಲು ಇದೆ. ಇನ್ನು ಮೂರು ತಿಂಗಳು ಹೇಗೆ ಜೀವನ ಕಳೆಯಬೇಕು ಎಂಬುದೇ ತಿಳಿಯುತ್ತಿಲ್ಲ. ದೇಹವನ್ನು ತಂಪು ಮಾಡಿಕೊಳ್ಳಲು ಪ್ರತಿದಿನ ನೂರಾರು ರುಪಾಯಿ ಖರ್ಚು ಮಾಡಿದರೂ ಸಮಾಧಾನ ಇಲ್ಲ ಎನ್ನುತ್ತಾರೆ ಕುಷ್ಟಗಿ ನಿವಾಸಿ ಮಲಕಾಜಪ್ಪ ಹೊಸವಕ್ಕಲ.

ಬೇಸಿಗೆಯ ಆರಂಭದ ದಿನಗಳಲ್ಲಿ ಬಿಸಿಲು ಬಹಳಷ್ಟಿದೆ. ಗಿರಾಕಿಗಳು ಕಲ್ಲಂಗಡಿ, ಕಬ್ಬಿನಹಾಲು, ಎಳನೀರು ಸೇವನೆಗೆ ಬರುತ್ತಿದ್ದಾರೆ. ವ್ಯಾಪಾರ ಉತ್ತಮವಾಗಿದೆ ಎನ್ನುತ್ತಾರೆ ಕಲ್ಲಂಗಡಿ ವ್ಯಾಪಾರಿ ಶಿವುಕುಮಾರ ಹಿರೇಮಠ.