ಸಾರಾಂಶ
ಯಲ್ಲಾಪುರ: ತಾಲೂಕಿನ ಮದನೂರು ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಕಾಡಾನೆಗಳ ದಾಳಿಯಿಂದ ಬೆಳೆ ನಾಶವಾಗುತ್ತಿದ್ದು, ಇಲ್ಲಿನ ರೈತರು ಆತಂಕಗೊಂಡಿದ್ದಾರೆ.ಕಿರವತ್ತಿ, ಮದನೂರು, ಕಣ್ಣಿಗೇರಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಪ್ರತಿವರ್ಷವೂ ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟ ಉಂಟಾಗುವುದು ಸಾಮಾನ್ಯ. ಆದರೆ ಈ ಬಾರಿ ಪ್ರತಿವರ್ಷಕ್ಕಿಂತ ಒಂದು ತಿಂಗಳ ಮೊದಲೇ ಆನೆಗಳು ಕೃಷಿ ಜಮೀನಿನತ್ತ ಲಗ್ಗೆ ಇಟ್ಟಿವೆ. ಮದನೂರು ಗ್ರಾಪಂ ವ್ಯಾಪ್ತಿಯ ಹೆಗ್ಗಾಪುರ, ಕರಡೊಳ್ಳಿ, ಕಳಸೂರು ಮುಂತಾದ ಪ್ರದೇಶಗಳಲ್ಲಿ ಕಳೆದ ೧೫ ದಿನಗಳಿಂದ ಕಾಡಾನೆಗಳ ಹಾವಳಿ ಜೋರಾಗಿದೆ. ರೈತರ ಕೃಷಿ ಜಮೀನುಗಳಿಗೆ ಆನೆಗಳು ನುಗ್ಗಿ ಬೆಳೆನಾಶ ಮಾಡುತ್ತಿದ್ದು, ಬೆಳೆ ಸಂರಕ್ಷಣೆ ರೈತರಿಗೆ ಸವಾಲಿನ ಕೆಲಸವಾಗಿದೆ. ಮೊದಲೇ ಅತಿವೃಷ್ಟಿಯಿಂದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬರುವುದಿಲ್ಲವೆಂಬ ಚಿಂತೆ ರೈತರನ್ನು ಒಂದೆಡೆ ಕಾಡುತ್ತಿದ್ದರೆ, ಇದೀಗ ಕಾಡಾನೆಗಳಿಂದ ಇನ್ನಷ್ಟು ಹಾನಿಯಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.೧೬ ಆನೆಗಳಿರುವ ೨ ಗುಂಪು ನಿತ್ಯ ರೈತರ ಗದ್ದೆಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ೬ ಆನೆಗಳು, ೨ ಮರಿಗಳಿರುವ ಒಂದು ಗುಂಪು ಕರಡೊಳ್ಳಿ ಭಾಗದಲ್ಲಿ ಓಡಾಡುತ್ತಿವೆ. ೭ ಆನೆಗಳು ಹಾಗೂ ಒಂದು ಮರಿ ಇರುವ ಇನ್ನೊಂದು ಗುಂಪು ಕಳಸೂರು ಭಾಗದಲ್ಲಿ ಓಡಾಡುತ್ತಿವೆ. ೧೫ ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಮೆಕ್ಕೆಜೋಳ, ಭತ್ತ, ಕಬ್ಬು ಮುಂತಾದ ಬೆಳೆಗಳನ್ನು ನಾಶ ಮಾಡುತ್ತಿವೆ. ರೈತರು ಎಷ್ಟೇ ಪ್ರಯತ್ನಿಸಿದರೂ ಬೆಳೆನಾಶ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ಆನೆ ದಾಳಿಯಿಂದ ಬೆಳೆ ನಷ್ಟ ಉಂಟಾದ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಆತಂಕ ದೂರ ಮಾಡಿ: ಕಾಡಾನೆಗಳಿಂದಾಗಿ ಬೆಳೆ ರಕ್ಷಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ. ಪ್ರತಿವರ್ಷವೂ ಈ ಗೋಳು ತಪ್ಪಿದ್ದಲ್ಲ. ಅರಣ್ಯ ಇಲಾಖೆಯವರು ಆನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡು ರೈತರ ಆತಂಕ ದೂರ ಮಾಡಬೇಕು ಎಂದು ಸ್ಥಳೀಯ ಮುಖಂಡ ವಿಠ್ಠಲ ಪಾಂಡ್ರಮೀಸೆ ಆಗ್ರಹಿಸಿದರು.ನಿಯಂತ್ರಣಕ್ಕೆ ಕ್ರಮ: ಪ್ರತಿವರ್ಷಕ್ಕಿಂತ ಈ ಬಾರಿ ಬೇಗ ಕಾಡಾನೆಗಳು ಆಗಮಿಸಿವೆ. ಹಲವೆಡೆ ಬೆಳೆಹಾನಿ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಆನೆಗಳ ಹಾವಳಿ ನಿಯಂತ್ರಣಕ್ಕೆ ಪ್ರಯತ್ನಿಸಲಾಗುವುದು. ಪರಿಹಾರದ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ವಲಯ ಅರಣ್ಯಾಧಿಕಾರಿ ದಿನೇಶ ಮಿರ್ಜಾನಕರ್ ತಿಳಿಸಿದರು.