ಸಾರಾಂಶ
ಕನ್ನಡಪ್ರಭ ವಾರ್ತೆ ದೇವಲಾಪುರ (ನಾಗಮಂಗಲ)
ಮಳೆಗಾಗಿ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡಿದ್ದಾಯ್ತು, ಮಳೆರಾಯನನ್ನು ಹೊತ್ತು ಕುಣಿದದ್ದೂ ಆಯ್ತು. ಇದೀಗ ಈ ಊರಿನ ಜನರು ಮಕ್ಕಳಿಗೆ ಮದುವೆ ಮಾಡಿ ಮಳೆರಾಯನಿಗೆ ಮೊರೆಹೋಗಿದ್ದಾರೆ.ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಗಂಡು-ಹೆಣ್ಣಿನ ವೇಷ ತೊಡಿಸಿ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ನೆರವೇರಿಸಿ ಮಳೆರಾಯನನ್ನು ೨೪ ದಿನಗಳ ಕಾಲ ಪೂಜಿಸಿದ್ದಾರೆ. ಮದುವೆ ಮಾಡಿಸಿದ ನಂತರದಲ್ಲಿ ಮಳೆಯಾಗುವುದೆಂಬ ನಂಬಿಕೆ ಈ ಊರಿನ ಜನರಲ್ಲಿ ಅಚಲವಾಗಿದೆ.
ಮಳೆ ನಿರೀಕ್ಷೆಯೊಂದಿಗೆ ರಾಗಿ ಬಿತ್ತನೆ ಮಾಡಿದ್ದರೂ ಇದುವರೆಗೂ ನಿರೀಕ್ಷೆಯಂತೆ ಮಳೆಯಾಗಿರಲಿಲ್ಲ. ರಾಗಿ ಬೆಳೆ ಗದ್ದೆಯಲ್ಲೇ ಒಣಗಲಾರಂಭಿಸಿತ್ತು. ಆಗ ಊರಿನ ಹಿರಿಯರೆಲ್ಲರೂ ಸೇರಿ ಮಕ್ಕಳಿಗೆ ಮದುವೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯೊಂದಿಗೆ ನಿರ್ಧಾರ ಮಾಡಿದರು.ಒಟ್ಟು ೨೪ ದಿನಗಳ ಕಾಲ ಮಳೆರಾಯನ ಪೂಜೆ ನಡೆಯಿತು. ಗ್ರಾಮದ ಹಿರಿಯರು ಪ್ರತಿದಿನವೂ ಗರಿಕೆ ಹುಲ್ಲು ಪೂಜೆ ಮಾಡುವ ಮೂಲಕ ಊರಿನ ಸುತ್ತ ಮಳೆರಾಯನ ಪದಗಳನ್ನು ಗುನುಗುತ್ತಾ ಪೂಜೆ ಮಾಡಿದರು. ೨೪ನೇ ದಿನದಂದು ಬಾಲಕಿಯೊಬ್ಬಳಿಗೆ ಗಂಡಿನ ವೇಷ ತೊಡಿಸಿ ಮತ್ತೊಬ್ಬ ಬಾಲಕಿಗೆ ಸೀರೆಯುಡಿಸಿ ವಧುವಿನಂತೆ ಅಲಂಕರಿಸಿ ಸಂಪ್ರದಾಯಬದ್ಧವಾಗಿ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಲಾಯಿತು. ಊರಿನ ಜನರೆಲ್ಲರೂ ಇದರಲ್ಲಿ ಸಡಗರ-ಸಂಭ್ರಮದಿಂದ ತೊಡಗಿಸಿಕೊಂಡಿದ್ದರು.
ಸಂಪ್ರದಾಯದಂತೆ ಶಾಸ್ತ್ರಗಳನ್ನು ಮಾಡಿ ಮಳೆರಾಯನನ್ನು ಪೂಜಿಸಿ ಗ್ರಾಮದ ಸುತ್ತ ಮಂಗಳವಾದ್ಯದೊಂದಿಗೆ ಮೆರೆವಣಿಗೆಯನ್ನು ಮಾಡಲಾಯಿತು. ಮದುವೆಯ ದಿಬ್ಬಣದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿಯೂ ಮಳೆರಾಯನ ಪದಗಳನ್ನು ಹಾಡುತ್ತಾ ಸಾಗಿದರು. ಹೀಗೆ ಮದುವೆ ಮಾಡಿದ ಕೆಲ ದಿನಗಳಲ್ಲೇ ಮಳೆ ಬರಲಿದೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.ಕಳೆದ ವರ್ಷವೂ ಇದೇ ರೀತಿ ಮಳೆಯಾಗದೆ ಇದ್ದ ಸಂದರ್ಭದಲ್ಲಿ ಆಗಲೂ ಊರಿನ ಜನರೆಲ್ಲರೂ ಸೇರಿ ಮಕ್ಕಳಿಗೆ ಮದುವೆ ಮಾಡಿದ್ದರು. ಆಗ ಭಾರೀ ಮಳೆಯಾಗದಿದ್ದರೂ ಮಳೆಯ ಸಿಂಚನವಾಗಿತ್ತು ಎಂದು ಹೇಳಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))