ಮರುಡೇಶ್ವರದಲ್ಲಿ ಆನಂದವೇ ನೆಲೆ ನಿಂತಿದೆ: ರಾಘವೇಶ್ವರ ಭಾರತೀ ಶ್ರೀ

| Published : Feb 05 2025, 12:33 AM IST

ಮರುಡೇಶ್ವರದಲ್ಲಿ ಆನಂದವೇ ನೆಲೆ ನಿಂತಿದೆ: ರಾಘವೇಶ್ವರ ಭಾರತೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮರುಡೇಶ್ವರ ಕ್ಷೇತ್ರ ದಿವ್ಯ- ರಮ್ಯ ಕ್ಷೇತ್ರವಾಗಿದ್ದು, ಇಲ್ಲಿ ಪ್ರತಿ ಕ್ಷಣವೂ ಸಮುದ್ರ ಶಿವನ ಪಾದ ತೊಳೆಯುತ್ತಿದೆ. ಇಲ್ಲಿನ ಸಮುದ್ರ ಮೋಜು ಮಸ್ತಿ ಮಾಡುವವರಿಗಾಗಿ ಇಲ್ಲ. ಬದಲಾಗಿ ಶಿವನಿಗಾಗಿಯೇ ಇದೆ ಎಂದು ರಾಘವೇಶ್ವರ ಭಾರತೀ ಶ್ರೀಗಳು ತಿಳಿಸಿದರು.

ಭಟ್ಕಳ: ಮುರ್ಡೇಶ್ವರದಲ್ಲಿ ಮೃಡೇಶ ಲಿಂಗರೂಪಿಯಾಗಿ ನೆಲೆ ನಿಂತಿದ್ದು, ಇಲ್ಲಿ ಆನಂದವೇ ನೆಲೆನಿಂತಿದೆ. ಇಲ್ಲಿಗೆ ಬಂದು ಭಕ್ತಿಯಿಂದ ಬೇಡಿಕೊಳ್ಳುವ ಭಕ್ತರಿಗೆ ಮೃಡೇಶನು ಸುಖ, ಸಂತಸ, ನೆಮ್ಮದಿಯನ್ನು ಸದಾ ನೀಡುತ್ತಾನೆ. ಸಮುದ್ರದ ತಟದಲ್ಲಿ ನೆಲೆನಿಂತ ಮೃಡೇಶನು ಕಷ್ಟ ಕಾರ್ಪಣ್ಯಗಳನ್ನು ನಿವಾರಣೆ ಮಾಡಿ ಎಲ್ಲರ ಬಾಳಲ್ಲಿಯೂ ಸಂತಸವನ್ನು ನೀಡುವಂತಾಗಲಿ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಶ್ರೀ ಕ್ಷೇತ್ರ ಮುರ್ಡೇಶ್ವರ ದೇವಸ್ಥಾನದಲ್ಲಿ ಆಡಳಿತ ಧರ್ಮದರ್ಶಿಗಳ ವತಿಯಿಂದ ಸ್ವರ್ಣ ಮಂಟಪ ದೇವರ ಪೂಜೆ, ಸ್ವರ್ಣ ಪಾದುಕಾ ಪೂಜೆ, ಸ್ವರ್ಣ ಭಿಕ್ಷೆಯನ್ನು ಸ್ವೀಕರಿಸಿದ ನಂತರ ಡಾ. ಆರ್.ಎನ್. ಶೆಟ್ಟಿ ಸಭಾ ಭವನದಲ್ಲಿ ನಡೆದ ಧರ್ಮಸಭೆಯಲ್ಲಿ ಶಿಷ್ಯ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ಯಾವುದೇ ದೇವಸ್ಥಾನದಲ್ಲಿ ದೇವರ ಸೇವೆ ಮಾಡುವವರು ಮುಖ್ಯರಾಗುತ್ತಾರೆ. ಮುರುಡೇಶ್ವರ ದೇವಸ್ಥಾನದ ಧರ್ಮದರ್ಶಿ ಸತೀಶ ಶೆಟ್ಟಿಯವರು ತಮ್ಮ ತಂದೆಯವರು ಮಾಡಿಕೊಂಡು ಬಂದಿರುವಂತೆ ದೇವರ ಸೇವೆಯನ್ನು ಮಾಡುತ್ತಾ ಬಂದಿದ್ದು, ಇನ್ನೂ ಹೆಚ್ಚಿನ ಸೇವೆ ಮಾಡುತ್ತಿದ್ದಾರೆ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಲಿದೆ.

ಮರುಡೇಶ್ವರ ಕ್ಷೇತ್ರ ದಿವ್ಯ- ರಮ್ಯ ಕ್ಷೇತ್ರವಾಗಿದ್ದು, ಇಲ್ಲಿ ಪ್ರತಿ ಕ್ಷಣವೂ ಸಮುದ್ರ ಶಿವನ ಪಾದ ತೊಳೆಯುತ್ತಿದೆ. ಇಲ್ಲಿನ ಸಮುದ್ರ ಮೋಜು ಮಸ್ತಿ ಮಾಡುವವರಿಗಾಗಿ ಇಲ್ಲ. ಬದಲಾಗಿ ಶಿವನಿಗಾಗಿಯೇ ಇದೆ ಎಂದ ಅವರು, ಭಕ್ತರು ಮೊದಲು ಶಿವನಲ್ಲಿ ಬಂದು ಶರಣಾಗಿ ನಂತರ ಸಮುದ್ರಕ್ಕೆ ಹೋಗಬೇಕಾಗಿದೆ ಎಂದೂ ಸಮುದ್ರದ ಪ್ರಾಮುಖ್ಯತೆಯನ್ನು ಕೂಡಾ ವಿವರಿಸಿದರು.

ಮುರ್ಡೇಶ್ವರವನ್ನು ಅಭಿವೃದ್ಧಿ ಮಾಡಲು ರಾಮ ಬರುತ್ತಾನೆನ್ನುವ ಶ್ರೀಗಳೋರ್ವರ ಮಾತು ಸತ್ಯವಾಗಿದ್ದು, ತಮ್ಮ ಸಂಪತ್ತನ್ನು ಹಾಕಿ ಆರ್.ಎನ್. ಶೆಟ್ಟಿಯವರು ಈ ಕ್ಷೇತ್ರವನ್ನು ಅತ್ಯಂತ ಎತ್ತರಕ್ಕೆ ಬೆಳೆಸಿದ್ದಾರೆ. ದುಡಿಮೆಯ ಹಣವನ್ನು ಹಾಕಿ ದೇವಸ್ಥಾನವನ್ನು ಅಭಿವೃದ್ಧಿ ಮಾಡುವವರು ವಿರಳವಾಗಿದ್ದು, ಅವರ ಪುತ್ರರು ಕೂಡಾ ತಂದೆಯವರ ಹಾದಿಯನ್ನು ಅನುಸರಿಸುತ್ತಿರುವುದು ಈ ಕ್ಷೇತ್ರ ಇನ್ನಷ್ಟು ವಿಕಾಸವಾಗಲಿದೆ ಎಂದರು.

ಪಂಚ ಕ್ಷೇತ್ರಗಳಲ್ಲಿ ಅದ್ಭುತವಾಗಿ ಶೋಭಿಸುತ್ತಿರುವ ಮುರುಡೇಶ್ವರದಂತೆ ಇನ್ನುಳಿದ ನಾಲ್ಕೂ ಕ್ಷೇತ್ರಗಳು ಬೆಳಗುವಂತಾಗಲಿ ಎಂದು ಹಾರೈಸಿದರು.

ಮುರ್ಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಸತೀಶ ಶೆಟ್ಟಿ ಅವರು ಪಾದಪೂಜೆಯನ್ನು ನೆರವೇರಿಸಿ ಶ್ರೀಗಳಿಗೆ ಫಲ ಹಾಗೂ ಸುವಸ್ತುಗಳನ್ನು ಸಮರ್ಪಣೆ ಮಾಡಿದರು. ಮುರ್ಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗಳ್ ಸ್ವಾಗತಿಸಿ, ನಿವೇದನೆ ಮಾಡಿಕೊಂಡರು. ಸಭಾ ಕಾರ್ಯಕ್ರಮದ ನಂತರ ನೆರೆದ ಸರ್ವರಿಗೂ ಫಲ ಮಂತ್ರಾಕ್ಷತೆಯನ್ನು ನೀಡಿ ಶ್ರೀಗಳು ಆಶೀರ್ವದಿಸಿದರು.ಮುರುಡೇಶ್ವರ ದೇವಸ್ಥಾನಕ್ಕೆ ರಾಘವೇಶ್ವರ ಭಾರತೀ ಶ್ರೀ ಭೇಟಿ

ಭಟ್ಕಳ: ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿಯವರು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.ಶ್ರೀಗಳನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಸತೀಶ ಶೆಟ್ಟಿ, ಪ್ರಧಾನ ಅರ್ಚಕರಾದ ಶಿವರಾಮ ಅಡಿ, ಜಯರಾಮ ಅಡಿ, ಸತೀಶ ಶಿವರಾಮ ಭಟ್ಟ ದಂಪತಿಗಳು, ಉಪಾದಿವಂತರು, ಹವ್ಯಕ ವಲಯದ ಅಧ್ಯಕ್ಷೆ ರೇಷ್ಮಾ ಯೋಗೀಶ ಭಟ್ಟ, ಕಿತ್ರೆ ದೇವಿಮನೆ ದೇವಸ್ಥಾನದ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಗುರಿಕಾರರಾದ ವೆಂಕಟ್ರಮಣ ಹೆಗಡೆ, ಪ್ರಮುಖರಾದ ಮಂಜುನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಗಣೇಶ ಹರಿಕಂತ್ರ ಸೇರಿದಂತೆ ನೂರಾರು ಜನರು ಸ್ವಾಗತಿಸಿದರು. ನಂತರ ಮಹಾ ಮುರ್ಡೇಶ್ವರ ದೇವಸ್ಥಾನದ ವತಿಯಿಂದ ಧೂಳೀ ಪೂಜೆ ನೆರವೇರಿಸಲಾಯಿತು.ಬಳಿಕ ಶ್ರೀಗಳು ದೇವಸ್ಥಾನದ ಆಡಳಿತ ಧರ್ಮದರ್ಶಿ ಸತೀಶ ಶೆಟ್ಟಿಯವರಿಗೆ ಶ್ರೀಮಠದ ಸ್ವರ್ಣ ಮಂಟಪ ಹಾಗೂ ಸ್ವರ್ಣ ಮಂಟಪದಲ್ಲಿ ಪೂಜಿಸಲ್ಪಡುವ ದೇವರ ಕುರಿತು ಮಾಹಿತಿ ನೀಡಿದರು. ಶ್ರೀಗಳ ಅಪೇಕ್ಷೆಯಂತೆ ಸಮುದ್ರಯಾನ ಕೈಗೊಳ್ಳಲಾಯಿತು. ಶ್ರೀಗಳು ಶ್ರೀಕರಾರ್ಚಿತ ದೇವರ ಪೂಜೆಯಲ್ಲಿ ಸ್ವರ್ಣ ಮಂಟಪದಲ್ಲಿ ನೆರವೇರಿಸಿ ಪ್ರಸಾದ ನೀಡಿದರು.ಮಂಗಳವಾರ ಬೆಳಗ್ಗೆ ಸ್ವರ್ಣ ಭಿಕ್ಷಾ ಸೇವೆಯ ಅಂಗವಾಗಿ ಸ್ವರ್ಣ ಪಾದುಕಾ ಪೂಜೆ, ನೆರವೇರಿತು. ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿ ಶ್ರೀ ಮಹಾ ಮುರುಡೇಶ್ವರನಿಗೆ ಪೂಜೆ ಸಲ್ಲಿಸಿದರು. ಸ್ವರ್ಣ ಮಂಟಪದಲ್ಲಿ ಶ್ರೀ ಕರಾರ್ಚಿತ ಪೂಜೆಯ ನಂತರ ನೆರೆದ ಭಕ್ತರಿಗೆ ಶ್ರೀರಾಮ ದೇವರ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.