ಸಾರಾಂಶ
ಮತದಾರರನ್ನು ಸೆಳೆಯಲು ವಿಶೇಷ ಮತಗಟ್ಟೆಗಳ ಸ್ಥಾಪನೆ, 5 ಮಾದರಿಯಲ್ಲಿ 9 ವಿಶಿಷ್ಟ ಬೂತ್ ಪ್ರಾರಂಭ
ಇಂದರಪಾಷ ಚಿಂಚರಕಿ
ಕನ್ನಡಪ್ರಭ ವಾರ್ತೆ ಮಸ್ಕಿಇದೇ ಮೇ 7ರಂದು ನಡೆಯಲಿರುವ ಕೊಪ್ಪಳ ಲೋಕಸಭೆ ಚುನಾವಣೆ ಹಿನ್ನೆಲೆ ಮಸ್ಕಿ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆ ಸ್ಥಾಪಿಸಿ ಮತದಾರರನ್ನು ಸೆಳೆಯಲು ತಾಲೂಕು ಸ್ವೀಪ್ ಸಮಿತಿ ಮುಂದಾಗಿದೆ.
ಸಾರ್ವತ್ರಿಕ ಲೋಕಸಭೆ ಚುನಾವಣೆ ಅಂಗವಾಗಿ ರಾಜ್ಯದಲ್ಲಿ 2ನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಮತದಾರರು ಮತಗಟ್ಟೆಗೆ ಸೆಳೆಯಲು ವಿವಿಧ ರೀತಿ ಪ್ರಚಾರ ಕಾರ್ಯ ನಡೆಸಿರುವ ಅಧಿಕಾರಿಗಳು, ಈ ಬಾರಿ ಹೇಗಾದರೂ ಮಾಡಿ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿಸಲು ಪಣ ತೊಟ್ಟು, ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹಲವು ಕ್ರಮ ಕೈಗೊಂಡಿದ್ದಾರೆ.ಮಸ್ಕಿ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳು:
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5 ವಿವಿಧ ಮಾದರಿಯಲ್ಲಿ 9 ವಿಶೇಷ ಮತಗಟ್ಟೆ ಸ್ಥಾಪನೆಗೆ ಈಗಾಗಲೇ ಸಿದ್ಧತೆ ಭರದಿಂದ ಸಾಗಿದೆ. ಮಹಿಳಾ ನಿರ್ವಹಣೆ ಮತಗಟ್ಟೆ ಸಖಿ, ವಿಶೇಷ ಚೇತನರ ಮತಗಟ್ಟೆ, ಯುವಜನ ಮತಗಟ್ಟೆ, ಧ್ಯೇಯ ಆಧಾರಿತ ಮತಗಟ್ಟೆ ಹಾಗೂ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗುತ್ತಿದೆ.ಮಹಿಳೆಯರೇ ನಿರ್ವಹಿಸುವ ಸಖಿ ಮತಗಟ್ಟೆ ಮಟ್ಟೂರು ಗ್ರಾಪಂ ಕುಣಿಕಲ್ಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೂತ್ ನಂ.35, ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಮಸ್ಕಿ ಬೂತ್ ನಂ.85 ಉತ್ತರ, ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಸಮಕಲ್ ಬೂತ್ ನಂ.162, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೀನಸಮುದ್ರ ಬೂತ್ ನಂ.165, ತುರ್ವಿಹಾಳದ ಕೋಟೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೂತ್ ನಂಬರ್ 214 ಇಲ್ಲಿ ಸ್ಥಾಪಿಸಲಾಗುತ್ತಿದೆ.
ಮಟ್ಟೂರು ಗ್ರಾಪಂ ಗುಡಿಹಾಳದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೂತ್ ನಂ.34 ವಿಶೇಷ ಚೇತನರ ನಿರ್ವಹಣೆ ಮತಗಟ್ಟೆ, ಮಸ್ಕಿ ಪಟ್ಟಣದ ನಾಯಕವಾಡಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೂತ್ ನಂ.93ರಲ್ಲಿ ಯುವ ಜನ ನಿರ್ವಹಣೆಯ ಮತಗಟ್ಟೆ, ಮಸ್ಕಿ ಪುರಸಭೆ ಆವರಣದಲ್ಲಿ ಬೂತ್ ನಂ.90ರಲ್ಲಿ ಸ್ಥಳೀಯ ಧ್ಯೇಯ ಆಧಾರಿತ ಬೂತ್, ಬಳಗಾನೂರಿನ ಶ್ರೀ ಆಂಜನೇಯ ದೇವಸ್ಥಾನದ ಹತ್ತಿರದ ರೈತರ ಗೋದಾಮಿನಲ್ಲಿ ಬೂತ್ ನಂ.112 ಸಾಂಪ್ರದಾಯಿಕ ಮತಗಟ್ಟೆಗಳ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.ಮತಗಟ್ಟೆ ಕೇಂದ್ರಗಳಲ್ಲಿ ಮೂಲ ಸೌಕರ್ಯ:
2008ರಲ್ಲಿ ಆಸ್ತಿತ್ವಕ್ಕೆ ಬಂದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡ ಮೀಸಲು 231 ಮತಗಟ್ಟೆಗಳಿವೆ. ಪ್ರತಿಯೊಂದು ಬೂತ್‌ನಲ್ಲಿ ಕುಡಿವ ನೀರು, ಶೌಚಾಲಯ, ವಿದ್ಯುಚ್ಛಕ್ತಿ ಇತ್ಯಾದಿ ಸೌಕರ್ಯ ಒದಗಿಸಲಾಗಿದೆ. ಈಗಲಾದರೂ ಜನ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಮತದಾನ ಮಾಡಿದರೆ ಚುನಾವಣಾ ಅಧಿಕಾರಿಗಳು ಮತ ಪ್ರಮಾಣ ಹೆಚ್ಚಿಸಲು ಮಾಡಿದ ವಿವಿಧ ರೀತಿ ಕಸರತ್ತು ಸಾರ್ಥಕ್ಯ ಪಡೆಯುತ್ತದೆ.ಲೋಕಸಭೆ ಚುನಾವಣೆ ಹಿನ್ನೆಲೆ ಮಸ್ಕಿ ಕ್ಷೇತ್ರದಲ್ಲಿ 9 ಕಡೆ ವಿಶೇಷ ಬೂತ್ ಸ್ಥಾಪಿಸಲಾಗುತ್ತಿದೆ. ಮತದಾನ ಜಾಗೃತಿಗೆ ತಾಲೂಕು ಸ್ವೀಪ್ ಸಮಿತಿಯಿಂದ ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಬೂತ್‌ಗಳಲ್ಲಿ ವಿಶೇಷ ಟ್ಯಾಬ್ಲೋ ಮೂಲಕ ಜಾಗೃತಿ ಮೂಡಿಸಲಾಗಿದೆ. ಮೇ 7 ರಂದು ಪ್ರತಿಯೊಬ್ಬರು ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲ ಪಡಿಸಬೇಕು.ಅಂಬರೀಶ್, ತಾಪಂ ಇಒ ಮಸ್ಕಿ