ಸಾರಾಂಶ
ಭತ್ತ ಖರೀದಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ ಕೇಂದ್ರ ಸರ್ಕಾರದ ಬೆಂಬಲ ಬೆಲೆಗೆ 300 ರು. ಗಳ ಸಹಾಯಧನವನ್ನು ನೀಡಿ ರೈತರನ್ನು ಕಷ್ಟದಿಂದ ಪಾರು ಮಾಡಬೇಕೆಂದು ಅವರು ಕೋರಿದರು.
ಕನ್ನಡಪ್ರಭ ವಾರ್ತೆ ಬನ್ನೂರು
ಮೈಸೂರು ಹಾಗೂ ಸುತ್ತಮುತ್ತಲಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆದಿದ್ದು, ನವೆಂಬರ್ ತಿಂಗಳಲ್ಲಿ ಬಹುತೇಕ ಭತ್ತದ ಕಟಾವು ಆರಂಭವಾಗುವುದರಿಂದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿಯೇ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಆಗ್ರಹಿಸಿದರು.ವರುಣ ವಿಧಾನಸಭಾ ವ್ಯಾಪ್ತಿಯ ತಾಯೂರು ಗೇಟ್ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಭತ್ತ ಖರೀದಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ ಕೇಂದ್ರ ಸರ್ಕಾರದ ಬೆಂಬಲ ಬೆಲೆಗೆ 300 ರು. ಗಳ ಸಹಾಯಧನವನ್ನು ನೀಡಿ ರೈತರನ್ನು ಕಷ್ಟದಿಂದ ಪಾರು ಮಾಡಬೇಕೆಂದು ಅವರು ಕೋರಿದರು.ಇತ್ತೀಚಿನ ದಿನಗಳಲ್ಲಿ ರೈತರು ಆರ್ಥಿಕವಾಗಿ ಬಹಳಷ್ಟು ತೊಂದರೆಯಲ್ಲಿದ್ದು, ವಿದ್ಯುತ್ ಇಲಾಖೆಯಲ್ಲಿ ಬದಲಾವಣೆಯಾಗಿರುವ ನೀತಿ ನಿಯಮಗಳಿಂದ ರೈತರಿಗೆ ಮತ್ತಷ್ಟು ಬರೆ ಎಳೆಯುವ ಕೆಲಸ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಹಿಂದಿದ್ದ ಅಕ್ರಮ ಸಕ್ರಮದ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗದೇ ಇದ್ದಲ್ಲಿ ರೈತರು ರೊಚ್ಚಿಗೆದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.
ಕಬ್ಬು ಬೆಳೆಯುವ ರೈತರು ಬಹಳಷ್ಟು ತೊಂದರೆಗೆ ಈಡಾಗುತ್ತಿರುವ ಹಿನ್ನೆಲೆ ಕಬ್ಬು ಕಟಾವಿನ ವೆಚ್ಚ ಹಾಗೂ ಸಾಗಾಣಿಕ ವೆಚ್ಚವನ್ನು ಕಾರ್ಖಾನೆಯ ಮಾಲೀಕರೇ ಭರಿಸುವಂತೆ ಆದೇಶ ಮಾಡಬೇಕೆಂದು ಆಗ್ರಹಿಸಿದ ಅವರು, ರೈತರ ಜಮೀನುಗಳಿಗೆ ಹೋಗುವ ರಸ್ತೆಯು ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದ ಹಾಳಾಗಿದ್ದು, ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಅವರು ಕೋರಿದರು.