ಸಾರಾಂಶ
ಕನ್ನಡ ಪ್ರಭ ವಾರ್ತೆ ಪಾವಗಡ
ಬಿಸಿಯೂಟದ ಬಳಿಕ ಮಿಠಾಯಿ ಸೇವಿಸುತ್ತಿದ್ದಂತೆ ವಾಂತಿ ಬೇಧಿ ಶುರುವಾಗಿ ಮುಖ್ಯ ಶಿಕ್ಷಕಿ ಸೇರಿ ಸುಮಾರು 42ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಶುಕ್ರವಾರ ಮಧ್ಯಾಹ್ನ ತಾಲೂಕಿನ ಕೋಣನಕುರಿಕೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದಿದೆ.ಪಾವಗಡ ತಾಲೂಕು ನಿಡಗಲ್ ಹೋಬಳಿಯ ಕೋಣನಕುರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು 50ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಈ ಪೈಕಿ ಬಿಸಿಯೂಟ ಸೇವಿಸಿದ 1ರಿಂದ 7ನೇ ತರಗತಿಯ 42ಮಂದಿ ವಿದ್ಯಾರ್ಥಿಗಳಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ. ಇದೇ ಬಿಸಿಯೂಟ ಸೇವಿಸಿದ್ದ ಮುಖ್ಯ ಶಿಕ್ಷಕಿ ಲೋಕಮ್ಮ ಅವರಿಗೂ ವಾಂತಿ ಭೇದಿ ಕಾಣಿಸಿಕೊಂಡಿದ್ದು. ಅವರು ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿರುವುದಾಗಿ ತಿಳಿದುಬಂದಿದೆ. ಫೋಷಕರಿಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಶಾಲೆಗೆ ಆಗಮಿಸಿದ ಫೋಷಕರು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿದ್ದಾರೆ. ನಂತರ ಆಗಮಿಸಿದ್ದ ತುರ್ತು ವಾಹನಗಳಲ್ಲಿ ಅಸ್ವಸ್ಥರಾದ 42ಮಂದಿಯನ್ನು ಕರೆ ತಂದು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮುಖ್ಯ ಶಿಕ್ಷಕಿ ಹಾಗೂ ಅಡುಗೆ ಸಹಾಯಕಿಯರ ಬೇಜವಾಬ್ದಾರಿಯಿಂದಲೇ ಮಕ್ಕಳಿಗೆ ಈ ಸ್ಥಿತಿಗೆ ತಲುಪಲು ಕಾರಣವಾಗಿದೆ. ಬಿಸಿಯೂಟಕ್ಕೆ ಗುಣಮಟ್ಟವಲ್ಲದ ಅಕ್ಕಿ ಹಾಗೂ ತರಕಾರಿ ಬಳಸಿರುವ ಪರಿಣಾಮ ಹೀಗಾಗಿದೆ. ಮಿಠಾಯಿ ಹಾಗೂ ಚಿಕ್ಕಿಗಳಲ್ಲಿ ಹುಳುಗಳು ಸುತ್ತುವರಿದಿವೆ ಎಂದು ಪೋಷಕರು ದೂರಿದರು.ಇನ್ನೂ ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಡಿ.ಎನ್. ವರದರಾಜು, ಜಾನಕಿರಾಮ್, ಬಿಇಒ ಇಂದ್ರಾಣಮ್ಮ, ಇಲ್ಲಿನ ಬಿಸಿಯೂಟದ ಸಹಾಯಕ ಅಧಿಕಾರಿ ಶಂಕರಪ್ಪ, ಮುಖಂಡ ಗುಜ್ಜನಡು ನರಸಯ್ಯ ಹಾಗೂ ಇಲ್ಲಿನ ಪೊಲೀಸ್ ಇಲಾಖೆ ಸಿಬ್ಬಂದಿ ಅಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ವೆಂಕಟೇಶ್ ತಿಳಿಸಿದ್ದಾರೆ.