ಸಾರಾಂಶ
ಕನ್ನಡಪ್ರಭ ವಾರ್ತೆ
ನಾಗಮಂಗಲ: ಪ್ರಸ್ತುತ ಸಮಾಜದಲ್ಲಿ ಸ್ವಾರ್ಥ ಹಾಗೂ ಕುಟುಂಬಕ್ಕಾಗಿ ಜೀವಿಸುವವರೇ ಹೆಚ್ಚಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ರೋಟರಿ ಸಂಸ್ಥೆ ವಿದ್ಯಾರ್ಥಿ ವೇತನ ವಿಭಾಗದ ಅಧ್ಯಕ್ಷ ರೊ.ಬಿ.ಇ.ಚಂದ್ರಶೇಖರ್ ಸಚವಿ ಬೇಸರ ವ್ಯಕ್ತಪಡಿಸಿದರು. ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ರೋಟರಿ ದಕ್ಷಿಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಎಂಕಾಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ದಿನಮಾನದಲ್ಲಿ ವ್ಯಕ್ತಿ ವೈಯಕ್ತಿಕ ಲಾಲಸೆಯ ದಾಸನಾಗಿದ್ದಾನೆ. ಸಮಾಜ ಮತ್ತು ಸಮುದಾಯಕ್ಕಾಗಿ ಬದುಕುವವರ ಸಂಖ್ಯೆ ಅತ್ಯಂತ ವಿರಳವಾಗಿದೆ. ಇಂದು ವೃತ್ತಿ ಆಯ್ಕೆ ವಿಚಾರದಲ್ಲಿ ಶಿಕ್ಷಕ ಹಾಗೂ ಕೃಷಿಕ ವೃತ್ತಿಯನ್ನು ಕೊನೆಯದಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ಆದ್ಯತೆಯ ಕೆಲಸವಾಗಬೇಕಿದೆ. ಇದರಿಂದ ದೇಶ ಸುಭದ್ರವಾಗಿರುತ್ತದೆ. ದೇಶದ ಭದ್ರತೆಗೆ ಒಬ್ಬ ಸಮರ್ಥ ನಾಯಕನ ಅಗತ್ಯವಿದೆ.
ಆಯ್ಕೆಯ ವಿಚಾರದಲ್ಲಿ ಪ್ರತಿಯೊಬ್ಬ ನಾಗರೀಕರೂ ಸಹ ಪ್ರಬುದ್ಧತೆ ಮೆರೆಯಬೇಕು ಎಂದರು. ಸಂಸ್ಥೆ ಸಮುದಾಯ ಸೇವಾ ವಿಭಾಗದ ನಿರ್ದೇಶಕ ರೊ.ವಾಸುದೇವ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮುಂದಿನ ಸಾಧನೆಯ ಗುರಿ ಕಡೆಗೆ ಹೆಚ್ಚು ಗಮನ ಹರಿಸಬೇಕು. ಅತ್ಯುತ್ತಮ ಪರಿಶ್ರಮ ವ್ಯಯಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಬೇಕು ಎಂದರು. ನಿಮ್ಮನ್ನು ಬಾಧಿಸುವ ವಿಷಯಗಳಿಂದ ದೂರವಿರಬೇಕು. ಸಾಮಾಜಿಕ ಜಾಲತಾಣಗಳು ನಿಮ್ಮ ಗುರಿ ಮತ್ತು ಕನಸನ್ನು ಭಗ್ನಗೊಳಿಸಲು ಅವಕಾಶ ನೀಡಬಾರದು.
ಈ ಕಾಲೇಜಿನ ವಜ್ರಗಳಾಗಿ ಹೊರಹೊಮ್ಮುವ ಜೊತೆಗೆ, ನಿಮ್ಮ ಕಿರಿಯರಿಗೆ ಆದರ್ಶವಾಗಿ ವಿದ್ಯೆ ಕಲಿತ ಶಿಕ್ಷಣ ಸಂಸ್ಥೆಗೆ ನಿಮ್ಮ ಶಕ್ತ್ಯಾನುಸಾರ ಸಹಾಯ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ವಿದ್ಯಾರ್ಥಿ ವೇತನ ಪಡೆಯುವುದು ಸಾಧನೆಯಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವುದು ಉತ್ತಮ ಸಾಧನೆ. ಜ್ಞಾನವನ್ನು ಸರಿದಾರಿಯಲ್ಲಿ ಕೊಂಡೊಯ್ದಾಗ ಮಾತ್ರ ಜ್ಞಾನದ ಪ್ರತಿಭೆಗೆ ನಿಜವಾದ ಅರ್ಥ ಸಿಗುತ್ತದೆ. ಉನ್ನತ ಹುದ್ದೆಯನ್ನು ಅಲಂಕರಿಸಿದರೆ ಸಾಲದು, ಮಾನವೀಯ ಮೌಲ್ಯಗಳನ್ನು ಹೊಂದಿದ ಮನುಷ್ಯರಾಗುವುದು ಮೊದಲಾಗಬೇಕು ಎಂದರು.
ಕಾಲೇಜಿನ 22 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆಂಪೇಗೌಡ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಎಂಕಾಂ ವಿಭಾಗದ ಮುಖ್ಯಸ್ಥೆ ನವೇರಿಯಾಬಾನು ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ.ಶ್ರೇಯಸ್ ಕೃಷ್ಣನ್, ಉಪನ್ಯಾಸಕಿಯರಾದ ಪಲ್ಲವಿ, ಇಂದುಶ್ರೀ, ಗ್ರಂಥಪಾಲಕ ಎನ್.ಟಿ.ಕುಮಾರ್ ಸೇರಿದಂತೆ ಎಂಕಾಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.