ಶಿವಮೊಗ್ಗದಲ್ಲಿ ಮಳೆ ತಗ್ಗಿದರೂ ನಿಲ್ಲದ ಹಾನಿ

| Published : Aug 02 2024, 01:03 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈನಲ್ಲಿ ವಾಡಿಕೆಯೂ ಮೀರಿ ಸುರಿದ ಮಳೆಗೆ ಜಿಲ್ಲೆಯ ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳು ಭರ್ತಿ ಯಾಗಿದ್ದು, ಜಲಾಶಯಗಳಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಗುರುವಾರ ಮಳೆ ಪ್ರಮಾಣ ತಗ್ಗಿದ್ದರೂ ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಆಗಾಗ್ಗೆ ಜೋರು ಮಳೆ ಸುರಿದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 23.93 ಮಿ.ಮೀ. ಸರಾಸರಿ ಮಳೆಯಾಗಿದೆ.

ಗುರುವಾರ ಸಾಗರದಲ್ಲಿ 61.10 ಮಿ.ಮೀ ಮಳೆ ಸುರಿದಿದ್ದರೆ, ತೀರ್ಥಹಳ್ಳಿಯಲ್ಲಿ 34.10 ಮಿ.ಮೀ, ಹೊಸನಗರದಲ್ಲಿ 31.50 ಮಿ.ಮೀ ಮಳೆಯಾಗಿದೆ. ಉಳಿದಂತೆ ಸೊರಬದಲ್ಲಿ 23.80 ಮಿ.ಮೀ, ಶಿಕಾರಿಪುರದಲ್ಲಿ 9.90 ಮಿ.ಮೀ, ಶಿವಮೊಗ್ಗದಲ್ಲಿ 4.10 ಮಿ.ಮೀ, ಭದ್ರಾವತಿಯಲ್ಲಿ 3 ಮಿ.ಮೀ ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಜುಲೈನಲ್ಲಿ ವಾಡಿಕೆಯೂ ಮೀರಿ ಸುರಿದ ಮಳೆಗೆ ಜಿಲ್ಲೆಯ ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳು ಭರ್ತಿ ಯಾಗಿದ್ದು, ಜಲಾಶಯಗಳಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯಕ್ಕೆ 72599 ಕ್ಯುಸೆಕ್‌ ನೀರು ಹರಿದು ಬಂದಿದ್ದು, 79,474 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಭದ್ರಾ ಜಲಾಶಯಕ್ಕೆ 56152 ಕ್ಯುಸೆಕ್‌ ನೀರು ಒಳಹರಿವಿದ್ದು, 65724 ಕ್ಯುಸೆಕ್‌ ನೀರನ್ನು ನದಿಗೆ ಹರಿಸ ಲಾಗುತ್ತಿದೆ. ಇನ್ನು, ಲಿಂಗನಮಕ್ಕಿ ಜಲಾಶಯವೂ ಬಹುತೇಕ ಭರ್ತಿಯಾಗಿದ್ದು, ಗುರುವಾರ ಜಲಾಶಯದಿಂದ ಸುಮಾರು 10 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ತೀರ್ಥಹಳ್ಳೀಲಿ ರಸ್ತೆ ಹಾನಿ; ಸಂಚಾರ ದುರ್ದರ

ಪುಷ್ಯ ಮಳೆಯ ಆರ್ಭಟ ಬುಧವಾರದಿಂದ ತುಸು ಕಡಿಮೆಯಾಗಿದ್ದರೂ ಆಗಿರುವ ಹಾನಿಯಿಂದಾಗಿ ತಾಲೂಕಿನ ರಾಜ್ಯ ಹೆದ್ದಾರಿಗಳೂ ಸೇರಿದಂತೆ ಕೆಲ ಭಾಗದ ರಸ್ತೆಗಳಲ್ಲಿ ವಾಹನಗಳು ಸಂಚರಿಸಲಾಗದಷ್ಟರ ಮಟ್ಟಿಗೆ ಹಾನಿಯಾಗಿವೆ.

ಉಂಟೂರುಕಟ್ಟೆ ಕೈಮರ ಸಮೀಪದ ಎಂಕೆ ಬೈಲಿನ ರಾಜ್ಯ ಹೆದ್ದಾರಿಯ ಮಧ್ಯದಲ್ಲಿ ಸುಮಾರು ಒಂದೂವರೆ ಅಡಿಯಷ್ಟು ದೊಡ್ಡ ಗುಂಡಿ ನಿರ್ಮಾಣವಾಗಿದ್ದು ದಿನದ 24 ತಾಸು ವಾಹನ ಸಂಚಾರವಿರುವ ಕರಾವಳಿ ಸಂಪರ್ಕದ ಈ ಮಾರ್ಗದಲ್ಲಿ ದೊಡ್ಡ ಅವಘಡ ಸಂಭವಿಸದಿರುವುದು ಸುದೈವ. ರಸ್ತೆಗಳು ಹಾಳಾಗಿರುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಈ ಸ್ಥಳದಲ್ಲಿ ಹಲವು ಮಂದಿ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ರಾತ್ರಿ ಸಂಚಾರದ ಬಸ್ಸುಗಳು ಕಾರು ಮತ್ತು ಭಾರಿ ವಾಹನಗಳಿಗಂತೂ ನೀರು ತುಂಬಿರುವ ಈ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದೇ ದೊಡ್ಡ ಸಾಹಸ ವಾಗಿದೆ. ಇದರೊಂದಿಗೆ ಇದೇ ಸ್ಥಳದ ಸಮೀಪ ಶಂಕರಮನೆ ಬಳಿ ಹೆದ್ದಾರಿ ಬದಿಯಲ್ಲಿರುವ ಮರಗಳ ಬುಡದ ಮಣ್ಣು ಸಂಪೂರ್ಣ ತೊಳೆದು ಹೋಗಿ ರಸ್ತೆಗೆ ಬಾಗಿ ಕೊಂಡಿದ್ದು ಯಾವುದೇ ಕ್ಷಣದಲ್ಲಿ ಬೀಳುವಂತಿದೆ. ಅವಘಡ ಸಂಭವಿಸುವ ಮುನ್ನ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೊಸಮನೆ ಗ್ರಾಪಂ ಮಾಜಿ ಅಧ್ಯಕ್ಷ ಶಂಕರಮನೆ ಅರುಣ್ ಆಗ್ರಹಿಸಿದ್ದಾರೆ.

ಕಿರು ಸೇತುವೆ ಕುಸಿತ; ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಕಳೆದ ದಿನಗಳಿಂದ ಎಡಬಿಡದೆ ಸುರಿದ ಮಳೆಯಿಂದಾಗಿ ಸ್ಥಳೀಯ ಗ್ರಾಮ ಪಂಚಾಯತಿಯ ಮುಂಬಾಳು ಗ್ರಾಮದಲ್ಲಿ ಕಿರು ಸೇತುವೆ ಕುಸಿದಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

ಆನಂದಪುರ ಪಟ್ಟಣಕ್ಕೆ ಸಂಪರ್ಕ ಸೇತುವೆಯಾಗಿದ್ದ ಮುಂಬಾಳು ಗ್ರಾಮದ ಕಿರು ಸೇತುವೆಯ ಅರ್ಥಕ್ಕೂ ಹೆಚ್ಚು ಭಾಗ ಕುಸಿತಗೊಂಡಿದ್ದು, ಇನ್ನುಳಿದ ಭಾಗವೂ ಕುಸಿಯುವ ಹಂತದಲ್ಲಿದೆ. ಈ ಸೇತುವೆ ಮಾರ್ಗವಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ಮಳೆ ಹೆಚ್ಚಾಗಿ ಸೇತುವೆ ಸಂಪೂರ್ಣವಾಗಿ ಕುಸಿದು ಬಿದ್ದರೆ ಜನರು ಸಂಚಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಈ ಕಾಲುವೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ. ಕಾಲುವೆಯ ಎರಡು ಭಾಗಗಳಲ್ಲೂ ಕುಸಿತ ಉಂಟಾಗಬಹುದು ಎನ್ನಲಾಗಿದೆ.

ಸೇತುವೆ ಕುಸಿದ ವಿಚಾರವನ್ನು ತಿಳಿದು ಗ್ರಾಪಂ ಅಧ್ಯಕ್ಷ ಮೋಹನ್‌ ಕುಮಾರ್, ಸದಸ್ಯ ಕೆ.ಗುರುರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.