ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಅಂಬೇಡ್ಕರ್ ಸಂವಿಧಾನ ಸಿದ್ಧಾಂತದಡಿ ಬಿಜೆಪಿ ಪಕ್ಷವು ರೈತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಜಯಂತಿ ದಿನದಂದು ಬಿಜೆಪಿ ಪ್ರಣಾಳಿಕೆಯನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ಕಳೆದ ಒಂದು ತಿಂಗಳಿಂದ ಸಾಕಷ್ಟು ತಯಾರಿ ಮಾಡಲಾಗಿತ್ತು. ವಿವಿಧ ಕ್ಷೇತ್ರದ ತಜ್ಞರ, ಹಿರಿಯರ ಸಲಹೆ ಸೇರಿದಂತೆ ನಾಲ್ಕು ಲಕ್ಷ ಸಲಹೆ ಸ್ವೀಕಾರ ಮಾಡಿ ಅತ್ಯತ್ತಮ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ ಎಂದರು.ನಮೋ ಆಪ್ ಮೂಲಕ ಬಂದ ಸಲಹೆ, ಸೂಚನೆಯನ್ನು ಪ್ರಣಾಳಿಕೆಯಲ್ಲಿ ಪರಿಗಣಿಸಲಾಗಿದೆ. ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲರನ್ನೂ ಒಳಗೊಂಡ ಪ್ರಣಾಳಿಕೆ ರೂಪಿತವಾಗಿದೆ. ವಿಶೇಷವಾಗಿ ಭಾರತ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿರುವುದು ಕಾಣುತ್ತಿದೆ. ಭಾರತದ ಚುನಾವಣಾ ಪ್ರಕ್ರಿಯೆಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ದೇಶದಲ್ಲಿ ವಿದ್ಯುತ್ ಉತ್ಪಾದನೆ ಕಳೆದ 10 ವರ್ಷದಲ್ಲಿ ದ್ವಿಗುಣಗೊಂಡಿದೆ. ಹಾಗೆಯೇ ಪ್ರತಿಯೊಂದು ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯಾಗಿದೆ. ಹೀಗಿದ್ದೂ ಹೊಸ ಪ್ರಣಾಳಿಕೆಯಲ್ಲಿ ಅನೇಕ ವಿಷಯಗಳ ಬಗ್ಗೆ ಗಮನ ಹರಿಸಲಾಗಿದೆ ಎಂದರು.ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್ ಮತ್ತೆ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡಿದೆ. ಹಾಗಾಗಿ ಈ ಹಿಂದೆ ಆದಂತೆ ಈ ಬಾರಿಯೂ ಕಾಂಗ್ರೆಸ್ ಸೋಲಲಿದೆ. ರಾಜ್ಯ ಸರ್ಕಾರವೂ ಕೇವಲ ಗ್ಯಾರಂಟಿಯನ್ನು ಪ್ರಸ್ತಾಪಿಸುತ್ತಿದೆ. ಅದನ್ನು ಬಿಟ್ಟರೆ ಮತ್ತ್ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರದ ಬಳಿ ಹಣವೂ ಇಲ್ಲ ಎಂದು ದೂರಿದರು.ಮೋದಿ ಸರ್ಕಾರ ಬರುವ ಹಿಂದಿನ 10 ವರ್ಷಗಳಲ್ಲಿ ನಡೆದ ಆಡಳಿತವನ್ನು ಜನ ನೋಡಿದ್ದಾರೆ. 60 ವರ್ಷ ಆಳಿದ ಕಾಂಗ್ರೆಸ್ ದೇಶದ ಸ್ಥಿತಿಗತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಿರಲಿಲ್ಲ. 10 ವರ್ಷ ಆಳದ ಮೋದಿ ಸರ್ಕಾರ ಎಲ್ಲಾ ಅಭಿವೃದ್ಧಿಯ ಅಂಕಿ ಅಂಶಗಳ ಸಹಿತ ಶ್ವೇತ ಪತ್ರ ಹೊರಡಿಸಿದ್ದು, ವಿಶ್ವದಲ್ಲೇ ಮೂರನೇ ಸ್ಥಾನದತ್ತ ಬೃಹತ್ ಆರ್ಥಿಕ ಶಕ್ತಿಯಾಗಿ ಭಾರತ ದಾಪುಗಾಲು ಹಾಕುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ 10 ವರ್ಷದಲ್ಲಿ 2800 ಮೆಗಾ ವ್ಯಾಟ್ ಸೋಲಾರ್ ಶಕ್ತಿ ಉತ್ಪತ್ತಿಯಾಗುತ್ತಿತ್ತು. ಮೋದಿ ಅವಧಿಯಲ್ಲಿ 27 ಸಾವಿರ ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಬರುವ ದಿನಗಳಲ್ಲಿ ಮನೆ ಮನೆಗಳಲ್ಲಿ ಸೋಲಾರ್ ವಿದ್ಯುತ್ ಉಚಿತ ಉತ್ಪಾದನೆಯಾಗಲಿದೆ ಎಂದರು.ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಯನ್ನು ಮಾಮೂಲಿನಂತೆ ಘೋಷಿಸಿದ್ದು, ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಜನ ವಿಶ್ವಾಸ ಕಳೆದುಕೊಂಡು ತಿರಸ್ಕಾರ ಮಾಡಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತು ತಿನ್ನುವ ಕಾಂಗ್ರೆಸ್ ಅಸಲಿಯತ್ತನ್ನು ಜನ ಅರ್ಥಮಾಡಿಕೊಂಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ, ಅಬಕಾರಿ, ಎಲ್ಲವೂ ಶೇ. 80ರಷ್ಟು ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಕ್ಕಿಯನ್ನು ತನ್ನದೆಂದು ಸುಳ್ಳು ಹೇಳುವ ಕಾಂಗ್ರೆಸ್ ಮೋಸವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಏ.18ರಂದು ಬೆಳಗ್ಗೆ 9ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆಯೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ರಾಮಶ್ರೇಷ್ಠಿ ಪಾರ್ಕ್‌ನಿಂದ ಮೆರವಣಿಗೆ ಶುರುವಾಗಲಿದ್ದು, ಗಾಂಧಿಬಜಾರ್. ನೆಹರು ರಸ್ತೆ ಮಾರ್ಗವಾಗಿ ಸೀನಪ್ಪ ಶೆಟ್ಟಿ (ಗೋಪಿ ಸರ್ಕಲ್) ವೃತ್ತ ತಲುಪಿ, ಅಲ್ಲಿ ಸಾರ್ವಜನಿಕ ಸಭೆ ಕೂಡ ನಡೆಯಲಿದೆ. ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಭಾರತಿಶೆಟ್ಟಿ, ಎಸ್.ರುದ್ರೇಗೌಡ, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ್, ಹರತಾಳು ಹಾಲಪ್ಪ, ಕೆ.ಬಿ. ಪ್ರಸನ್ನಕುಮಾರ್, ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ಧರಾಮಣ್ಣ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಐಡಿಯಲ್ ಗೋಪಿ, ಮಾಜಿ ಅಭಿಯಂತರ ಅನಂದ ಮೂರ್ತಿ ಹಾಗೂ ಮಹೇಶ್ ಮೂರ್ತಿ ನೇತೃತ್ವದಲ್ಲಿ ಅನೇಕ ಯುವಕರು ಮತ್ತು ನಿವೃತ್ತ ಸರ್ಕಾರಿ ನೌಕರರು ಪಕ್ಷಕ್ಕೆ ಸೇರ್ಪಡೆಗೊಂಡರು.ಪತ್ರಿಕಾಗೋಷ್ಠಿಯಲ್ಲಿ ಡಿ.ಎಸ್. ಅರುಣ್, ಮಾಲತೇಶ್, ನಾಗರಾಜ್, ಮೋಹನ್ ರೆಡ್ಡಿ, ಹರಿಕೃಷ್ಣ, ಜ್ಯೋತಿ ಪ್ರಕಾಶ್, ಐಡಿಯಲ್ ಗೋಪಿ, ಅಣ್ಣಪ್ಪ, ಚಂದ್ರಶೇಖರ್ ಮತ್ತಿತರರು ಇದ್ದರು.