ಜಿಲ್ಲೆಯಲ್ಲಿ ಪ.ಜಾ. ಸಮೀಕ್ಷೆ ಶೇ.95.75 ಪೂರ್ಣ: ಡಿಸಿ ವಿದ್ಯಾಕುಮಾರಿ

| Published : May 18 2025, 01:20 AM IST

ಸಾರಾಂಶ

2011ರ ಜನಗಣತಿ ವರದಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 15,329 ಪರಿಶಿಷ್ಟ ಜಾತಿ ಕುಟುಂಬಗಳಿವೆ. ಅವುಗಳಲ್ಲಿ 14,941 ಕುಟುಂಬಗಳ ಸಮೀಕ್ಷೆ ಆಗಿದ್ದು, ಬಾಕಿ ಉಳಿದ ಕುಟುಂಬಗಳ ಸಮೀಕ್ಷೆಯನ್ನೂ ಮೇ 25ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನ್‌ದಾಸ್‌ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಶೇಖರಿಸುವ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ಆರಂಭಿಸಲಾಗಿದೆ. ಶುಕ್ರವಾರದ ವರೆಗೆ 14,941 ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು, ಶೇ.95.75ರಷ್ಟು ಪ್ರಗತಿ ಸಾಧಿಸಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, 2011ರ ಜನಗಣತಿ ವರದಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 15,329 ಪರಿಶಿಷ್ಟ ಜಾತಿ ಕುಟುಂಬಗಳಿವೆ. ಅವುಗಳಲ್ಲಿ 14,941 ಕುಟುಂಬಗಳ ಸಮೀಕ್ಷೆ ಆಗಿದ್ದು, ಬಾಕಿ ಉಳಿದ ಕುಟುಂಬಗಳ ಸಮೀಕ್ಷೆಯನ್ನೂ ಮೇ 25ರೊಳಗೆ ಪೂರ್ಣಗೊಳಿಸಲಾಗುವುದು ಎಂದರು.ಮೇ 5ರಿಂದ ಸಮೀಕ್ಷೆ ಕಾರ್ಯ ಆರಂಭಿಸಿದ್ದು, ಒಟ್ಟು 112 ಗಣತಿದಾರರು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ. ಅವರ ಮೇಲ್ವಿಚಾರಣೆಗೆ 112 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಮನೆಮನೆ ಭೇಟಿ ಸಮೀಕ್ಷೆಯ ಅವಧಿಯನ್ನು ಇದೇ 25ರ ವರೆಗೆ ವಿಸ್ತರಿಸಲಾಗಿದೆ. ಮೇ 26ರಿಂದ 28ರ ವರೆಗೆ ಬ್ಲಾಕ್‌ ವ್ಯಾಪ್ತಿಯಲ್ಲಿ ವಿಶೇಷ ಶಿಬಿರ ನಡೆಯಲಿದೆ. ಮೇ 19ರಿಂದ 28ರ ವರೆಗೆ ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆ ನಡೆಯಲಿದೆ ಎಂದವರು ವಿವರಿಸಿದರು.

------------

ಪೋಡಿ ಆಂದೋಲನ

ಸರ್ಕಾರಿ ಜಮೀನುಗಳ ಪೋಡಿ ಆಂದೋಲನ ಆರಂಭವಾಗಿದ್ದು, ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರಾದವರು ಪೋಡಿ ಮಾಡಿಸಿಕೊಳ್ಳಬೇಕು. ಜನರು ಬಳಕೆ ಮಾಡದ, ಕಾಡು ಬೆಳೆದಿರುವ ಹಾಗೂ ಸರ್ವೆಗೆ ಸಹಕಾರ ನೀಡದವರ ಜಮೀನನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳುವ ಚಿಂತನೆ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೇಳಿದರು.