ಸಾರಾಂಶ
ಲೋಕಾ ಅಧಿಕಾರಿಗಳು ದಾಳಿ ನಡೆಸಿದ ಸುರೇಶ್‌ರವರ ವಿಠಲನಗರ ಮನೆ.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಆಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ಬೆಳ್ಳಂಬೆಳಗ್ಗೆ ಚಳ್ಳಕೆರೆಯ ಕಾಟಪ್ಪನಹಟ್ಟಿ ಹಿರಿಯೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್‌ರವರ ಮನೆಯ ಮೇಲೆ ದಾಳಿ ನಡೆಸಿ ಅಪಾರ ಹಣ, ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ಡಿವೈಎಸ್‌ಪಿ ಮೃತ್ಯುಂಜಯ ಮತ್ತು ತಂಡ ಈ ದಾಳಿ ನಡೆಸಿದರು. ಮಂಗಳವಾರ ಬೆಳಗ್ಗೆ ಸುರೇಶ್‌ಗೆ ಸೇರಿದ ಬೆಂಗಳೂರಿನ ಒಂದು ಮನೆ, ಚಳ್ಳಕೆರೆಯ ವಿಠಲನಗರ ಮತ್ತು ವಾಲ್ಮೀಕಿ ಬಡಾವಣೆ(ಹೊಸಬೇಡರಹಟ್ಟಿ) ಮನೆಯ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಅಪಾರ ಚಿನ್ನಾಭರಣ, ನಗದು, ನಿವೇಶನಗಳ ದಾಖಲೆ ಪತ್ರ ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಬೆಳಗಿನ ಜಾವ 4:30ರ ಸಮಯದಲ್ಲಿ ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ನಿದ್ದೆಯಲ್ಲಿದ್ದ ಸುರೇಶ್ ಮತ್ತು ಕುಟುಂಬಕ್ಕೆ ದಾಳಿ ಮೂಲಕ ಅಧಿಕಾರಿಗಳು ಶಾಕ್ ನೀಡಿದರು. ಬೆಳಗಿನ ಜಾವವೇ ಲೋಕಾ ಅಧಿಕಾರಿಗಳು ಮನೆ ಬಾಗಿಲು ತಟ್ಟಿದ ಕೂಡಲೇ ಸುರೇಶ್‌ಗೆ ಶಾಕ್ ಆಗಿದೆ. ಒಳ ಪ್ರವೇಶಿಸಿದವರೇ ಅವರಿಂದ ಕೆಲವೊಂದು ಮಾಹಿತಿ ಪಡೆದಿದ್ಧಾರೆ.ಬೆಳ್ಳಂ ಬೆಳಗ್ಗೆ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌ರವರ ಮನೆಯ ಮೇಲೆ ದಾಳಿ ತಿಳಿದ ಸಾರ್ವಜನಿಕರು ಗುಂಪು, ಗುಂಪಾಗಿ ಅವರ ಮನೆಗೆ ತೆರಳಿ ವೀಕ್ಷಿಸಿದ್ದಾರೆ. ಆದರೆ, ಸುರೇಶ್ ಮಾತ್ರ ಲೋಕಾಯುಕ್ತ ಅಧಿಕಾರಿಗಳ ವಶದಲ್ಲಿದ್ದರು. ಸಾರ್ವಜನಿಕರು ಆಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಸಿಲುಕಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ದಾಳಿ ಸಂದರ್ಭದಲ್ಲಿ ಬೆಂಗಳೂರು ಹಾಗೂ ಚಳ್ಳಕೆರೆ ನಗರದಲ್ಲಿ ಒಟ್ಟು 3 ಮನೆಗಳ ದಾಖಲಾತಿಯನ್ನು ಲೋಕಾಯುಕ್ತ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ನಿವೇಶನ ಹಾಗೂ ಜಮೀನನ್ನು ಸಹ ಅವರು ಹೊಂದಿದ್ದು, ಅವುಗಳ ಪರಿಶೀಲನೆ ಮುಂದುವರೆದಿದೆ.