ಸಾರಾಂಶ
ಸಾಹಿತ್ಯ ಸಂವೇದನೆಯ ಒಳನೋಟಗಳ ಕುರಿತು ಮಾತನಾಡಿದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರವಿಕಿರಣ್ ಕೆ.ಆರ್, ಸಾಹಿತ್ಯದ ಓದು ವ್ಯಕ್ತಿಯನ್ನು ಎಂದಿಗೂ ಏಕಾಂಗಿಯಾಗಿರಲು ಬಿಡುವುದಿಲ್ಲ. ಸಾಹಿತ್ಯ ಸಂವೇದನಾಶೀಲ ವ್ಯಕ್ತಿತ್ವದ ನೈಜ ಜತೆಗಾರನಿದ್ದಂತೆ. ಭಾವನೆಗಳ ಅನನ್ಯತೆ ಅರಿತರೆ ಸಂಬಂಧಗಳ ಮಹತ್ವ ತಿಳಿಯುತ್ತದೆ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಆಧುನಿಕ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಪುಸ್ತಕದ ಓದು ನೀಡುವ ಆತ್ಮೀಯ ಭಾವ ಅನನ್ಯವಾಗಿಯೇ ಉಳಿದಿದೆ ಎಂದು ಕವಯತ್ರಿ ಮಂಜುಳಾ ಹುಲಿಕುಂಟೆ ಹೇಳಿದರು.ಇಲ್ಲಿನ ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಅರಿವು ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ನಡೆದ ಸಾಹಿತ್ಯ ಚರ್ಚೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯ ಆಯಾಮಗಳು ಭಿನ್ನವಾಗಿರುತ್ತವೆ. ಸಮಕಾಲೀನ ಬರಹಗಾರರ ಬರಹಗಳು ಅವರನ್ನು ತಲುಪಬೇಕು. ಕೃತಕ ಬುದ್ದಿಮತ್ತೆಯ ಯುಗದಲ್ಲಿ ಸೃಜನಶೀಲತೆಯೂ ಸರಕಾಗುತ್ತಿದೆ. ಆದರೆ ಮನುಷ್ಯ ಸಂವೇದನೆಯನ್ನು ಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳುವ ಕೆಲಸ ಆಗಬೇಕು. ಬದಲಾಗುತ್ತಿರುವ ಸಾಮಾಜಿಕ ಸಂದರ್ಭಗಳಲ್ಲಿ ಸಾಹಿತ್ಯದ ಪ್ರಭಾವ ಹಾಗೂ ಔಚಿತ್ಯದ ಕುರಿತು ಅಕಾಡೆಮಿಕ್ ಆದ ಚರ್ಚೆಗಳು ಅಗತ್ಯ. ಎಲ್ಲ ಕಾಲಕ್ಕೂ ಸಲ್ಲುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಚಿಂತನೆಗಳ ಬಗ್ಗೆ ಮರು ವಿಮರ್ಶೆ ಅಗತ್ಯವಿದೆ ಎಂದರು.ಸಾಹಿತ್ಯ ಸಂವೇದನಾಶೀಲ ವ್ಯಕ್ತಿತ್ವದ ಜತೆಗಾರ:
ಸಾಹಿತ್ಯ ಸಂವೇದನೆಯ ಒಳನೋಟಗಳ ಕುರಿತು ಮಾತನಾಡಿದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರವಿಕಿರಣ್ ಕೆ.ಆರ್, ಸಾಹಿತ್ಯದ ಓದು ವ್ಯಕ್ತಿಯನ್ನು ಎಂದಿಗೂ ಏಕಾಂಗಿಯಾಗಿರಲು ಬಿಡುವುದಿಲ್ಲ. ಸಾಹಿತ್ಯ ಸಂವೇದನಾಶೀಲ ವ್ಯಕ್ತಿತ್ವದ ನೈಜ ಜತೆಗಾರನಿದ್ದಂತೆ. ಭಾವನೆಗಳ ಅನನ್ಯತೆ ಅರಿತರೆ ಸಂಬಂಧಗಳ ಮಹತ್ವ ತಿಳಿಯುತ್ತದೆ. ಸಾಹಿತ್ಯ ಗತಕಾಲದ ಸರಕು ಮಾತ್ರವಾಗದೆ, ಸಮಾಜ ಹಾಗೂ ವರ್ತಮಾನದ ಕುರಿತ ಆಲೋಚನೆಗಳ ಜೊತೆಗೆ ಭವಿಷ್ಯದ ಬಗೆಗಿನ ಎಚ್ಚರಗಳನ್ನೂ ಒಳಗೊಂಡಿರುತ್ತದೆ ಎಂದರು.ಯುವ ಮನಸ್ಸುಗಳಲ್ಲಿ ಮೂಡುವ ರಸಭಾವಗಳಿಗೆ ಅಕ್ಷರದ ರೂಪ ದೊರೆಯಬೇಕು. ಅನ್ನಿಸಿದ್ದನ್ನು ಹೇಳಿಬಿಡುವ ಮುಕ್ತತೆ ಸಾಹಿತಿಗೆ ಅಗತ್ಯ. ಕನ್ನಡದ ನಾಳೆಗಳ ಬಗ್ಗೆ ಚಿಂತಿಸುವ ಜತೆಗೆ ಸಶಕ್ತ ಚಿಂತನೆಗಳನ್ನು ಪ್ರಚೋದಿಸಿ, ಮಾನವೀಯ ಆಲೋಚನೆಗಳಿಗೆ ಮುಖಾಮುಖಿಯಾಗಿಸುವ ಪ್ರಕ್ರಿಯೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರವೀಣ್ ತಳಗವಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಓದು ಮತ್ತು ಗ್ರಹಿಕೆಯ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಸಾಹಿತ್ಯಿಕ ಚರ್ಚೆಗಳು ಹೆಚ್ಚು ಮಹತ್ವ ಪಡೆದಿವೆ ಎಂದರು.ಪ್ರಾಂಶುಪಾಲ ಪ್ರೊ.ಆರ್.ಎನ್.ಪಂಚಾಕ್ಷರಯ್ಯ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಹುಲಿಕುಂಟೆ ಹಾಗೂ ಪ್ರೊ.ಕೆ.ಆರ್.ರವಿಕಿರಣ್ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ವಿದ್ಯಾರ್ಥಿಗಳೊಂದಿಗೆ ಸಾಹಿತ್ಯ ಸಂವಾದ ನಡೆಯಿತು. ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.