ಸಹಕಾರ ಕ್ಷೇತ್ರದಲ್ಲಿ ದೇಶ 5 ಟ್ರಿಲಿಯನ್‌ ಡಾಲರ್‌ ಸಾಧನೆ ದಾಪುಗಾಲು: ಮನು ಮುತ್ತಪ್ಪ

| Published : Feb 07 2024, 01:46 AM IST

ಸಹಕಾರ ಕ್ಷೇತ್ರದಲ್ಲಿ ದೇಶ 5 ಟ್ರಿಲಿಯನ್‌ ಡಾಲರ್‌ ಸಾಧನೆ ದಾಪುಗಾಲು: ಮನು ಮುತ್ತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯ ಪ್ಯಾಕ್ಸ್, ಪಟ್ಟಣ ಸಹಕಾರ ಬ್ಯಾಂಕ್, ಪಿಕಾರ್ಡ್ ಬ್ಯಾಂಕ್, ಲ್ಯಾಂಪ್ಸ್ ಹಾಗೂ ಇತರೆ ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಹಾಗೂ ಲೆಕ್ಕಪರಿಶೋಧನಾ ವರದಿಯ ಪರಿಷ್ಕೃತ ನಮೂನೆ ಕುರಿತು ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶಿಕ್ಷಣ ಕಾರ್ಯಕ್ರಮ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅವರು,ಜಿಲ್ಲೆಯಲ್ಲಿ ಅದ್ಭುತ ರೀತಿಯಲ್ಲಿ ಯಶಸ್ವಿನಿ ಗುರಿ ಸಾಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗ್ರಾಮದ ಉದ್ಧಾರ ದೇಶದ ಉದ್ಧಾರವೆಂದು ಮನಗಂಡಿರುವ ಕೇಂದ್ರ ಸರ್ಕಾರವು ಸಹ ಸಹಕಾರ ಕ್ಷೇತ್ರದ ಮೇಲೆ ವಿಶ್ವಾಸವಿರಿಸಿ ಚಳವಳಿ ಮುನ್ನಡೆಸುವ ಮಹತ್ಕಾರ್ಯ ನಡೆಸುತ್ತಿದ್ದು 5 ಟ್ರಿಲಿಯನ್ ಡಾಲರ್ ಸಾಧನೆಗಾಗಿ ದಾಪುಗಾಲಿಕ್ಕುತ್ತಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಜರ್ಮನಿ, ಜಪಾನ್ ದೇಶಗಳನ್ನು ಹಿಂದಿಕ್ಕಿ ವಿಶ್ವದ 3 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಲಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅಭಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ಪ್ಯಾಕ್ಸ್, ಪಟ್ಟಣ ಸಹಕಾರ ಬ್ಯಾಂಕ್, ಪಿಕಾರ್ಡ್ ಬ್ಯಾಂಕ್, ಲ್ಯಾಂಪ್ಸ್ ಹಾಗೂ ಇತರೆ ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಹಾಗೂ ಲೆಕ್ಕಪರಿಶೋಧನಾ ವರದಿಯ ಪರಿಷ್ಕೃತ ನಮೂನೆ ಕುರಿತು ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅದ್ಭುತ ರೀತಿಯಲ್ಲಿ ಯಶಸ್ವಿನಿ ಗುರಿ ಸಾಧಿಸಲಾಗಿದೆ. ಮತ್ತಷ್ಟು ಪರಿಶ್ರಮದೊಂದಿಗೆ ಜಿಲ್ಲೆಯ ಅಂದಾಜು 2.5 ಲಕ್ಷ ಸಹಕಾರಿಗಳಿಗೆ ಈ ಯೋಜನೆಯನ್ನು ತಲುಪಿಸಿದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿದಂತಾಗುತ್ತದೆ. ಆದುದರಿಂದ ಸಹಕಾರ ಸಂಘಗಳು ಕುಡಿಯುವ ನೀರಿನ ಆಸರೆ, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ, ಚಾರ್ಜಿಂಗ್ ಪಾಯಿಂಟ್, ಸ್ವಚ್ಛ ಭಾರತ ಇತ್ಯಾದಿ ಯೋಜನೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಳವಡಿಸಿಕೊಂಡು ಶಕ್ತಿ ಕೇಂದ್ರಗಳಾಗಿ ಹಣಕಾಸು ಹಾಗೂ ಉದ್ಯೋಗ ಕ್ರಾಂತಿಗೆ ಕಾರಣವಾಗಿ ಯುವ ಜನತೆಯ ಕಣ್ಮಣಿಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್ ಮಾತನಾಡಿ,

ಸಹಕಾರ ಸಂಘದ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಯೂ ಜಾಬ್‌ಚಾರ್ಟ್ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೂ ಸರ್ಕಾರದಿಂದ ಯಾವುದಾದರೂ ಯೋಜನೆಗಳ ಕುರಿತು ಆದೇಶವಿದ್ದಲ್ಲಿ ನಮಗೆ ಸೇವೆ ಮಾಡಲು ನಮಗೆ ಒದಗಿ ಬಂದಿರುವ ಅವಕಾಶವೆಂದು ತಿಳಿದು ಕಾರ್ಯೊನ್ಮುಖರಾದಲ್ಲಿ ಆ ಕೆಲಸವು ಸಂತೃಪ್ತಿಯಿಂದ ಮುಗಿಯುತ್ತದೆ ಎಂದರು.

‘ಯಶಸ್ವಿನಿ’ ಎಂಬುದು ಸಹಕಾರಿಗಳಿಗೆ ಮಾತ್ರ ಇರುವ ಅಪೂರ್ವ ಅವಕಾಶವಾಗಿದ್ದು ಸಹಕಾರ ಚಳುವಳಿಗೆ ಪೂರಕವಾಗಿ ಆರೋಗ್ಯ ರಕ್ಷಣೆ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ಪ್ರೋತ್ಸಾಹ ನೀಡುವ ಯೋಜನೆಯಾಗಿದೆ. ಕಳೆದ ಬಾರಿಯ 50 ಸಾವಿರಕ್ಕೆ ಪ್ರತಿಯಾಗಿ 81 ಸಾವಿರ ನೋಂದಣಿ ಗುರಿ ಸಾಧಿಸಿದ್ದು 720 ಜನ ಸೌಲಭ್ಯ ಪಡೆದಿದ್ದು ಒಂದೂವರೆ ಕೋಟಿ ರು. ಮೊತ್ತದ ಸೌಲಭ್ಯ ಪಡೆದಿರುವುದನ್ನು ಅವಲೋಕಿಸಿದಾಗ ನಾವೆಲ್ಲ ಕೈಜೋಡಿಸಿದ ಪರಿಣಾಮ ಹಲವು ಸಹಕಾರಿಗಳು ನೆಮ್ಮದಿ ಜೀವನ ನಡೆಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ. ಮೋಹನ್ ಹಾಗೂ ಲೆಕ್ಕಪರಿಶೋಧನಾ ವರದಿಯ ಪರಿಷ್ಕೃತ ನಮೂನೆ ಕುರಿತು ನಿವೃತ್ತ ಹಿರಿಯ ಲೆಕ್ಕಪರಿಶೋಧಕ ಸಿರಿಲ್ ಮೊರಾಸ್ ಉಪನ್ಯಾಸ ನೀಡಿದರು.

ಯೂನಿಯನ್ ನಿರ್ದೇಶಕ ಎನ್.ಎ. ರವಿ ಬಸಪ್ಪ, ಸಿ.ಎಸ್. ಕೃಷ್ಣ ಗಣಪತಿ, ಕನ್ನಂಡ ಸಂಪತ್, ಯಶಸ್ವಿನಿ ಯೋಜನೆ ಜಿಲ್ಲಾ ಸಂಯೋಜಕ ಚೇತನ್, ಕಾಸ್ಕಾರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಮುತ್ತುರಾಜ್, ಸಹಕಾರ ಇಲಾಖೆಯ ಪಿ.ಬಿ. ಮೋಹನ್, ಆಶಾ ಇದ್ದರು.ಯೂನಿಯನ್ ವ್ಯವಸ್ಥಾಪಕಿ ಮಂಜುಳಾ ಆರ್. ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರ್ವಹಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಮಡಿಕೇರಿ ಹಾಗೂ ಸಹಕಾರ ಇಲಾಖೆ, ಕೊಡಗು ಜಿಲ್ಲೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.