ಸಾರಾಂಶ
ಧಾರವಾಡ: ಸಂಸದೀಯ ಪಟು ಎಚ್.ಕೆ. ಪಾಟೀಲ ಅವರು ವಿಧಾನ ಪರಿಷತ್, ವಿಧಾನಸಭೆ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಭಾ ನಾಯಕರಾಗಿ ಮಾಡಿರುವ ಚರ್ಚೆ, ಮಂಡನೆ, ಭಾಷಣಗಳ ಮತ್ತು ವಿಚಾರ ವಿಮರ್ಶೆಗಳ ಕುರಿತಾಗಿ 1500 ಪುಟಗಳ ಐದು ಸಂಪುಟಗಳನ್ನು ಹೊರ ತಂದಿದ್ದು, ಜ.13ರಂದು ಧಾರವಾಡದಲ್ಲಿ ಲೋಕಾರ್ಪಣೆಗೊಳ್ಳಲಿವೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ಕಟ್ಟೀಮನಿ, ಕರ್ನಾಟಕ ಸಂಶೋಧಕರ ಒಕ್ಕೂಟ ಈ ಸಂಪುಟಗಳನ್ನು ಪ್ರಕಾಶನ ಮಾಡಿದೆ.
ಯುವ ಶಾಸಕರುಗಳಿಗೆ, ರಾಜಕಾರಣದ ಅಧ್ಯಯನ ಮಾಡುವವರಿಗೆ ಹಾಗೂ ಸಮಾಜಕ್ಕೆ ರಾಜಕಾರಣದ ಈ ಮಗ್ಗಲು ಅವಶ್ಯವಾಗಿ ಬೇಕು. ಪ್ರಸ್ತುತ ರಾಜಕಾರಣದ ಕಾಲಘಟ್ಟದಲ್ಲಿ ಸಚಿವ ಎಚ್.ಕೆ. ಪಾಟೀಲ ಮುತ್ಸದ್ಧಿ, ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರು. ಈ ಹಿನ್ನೆಲೆಯಲ್ಲಿ ಅವರ ಭಾಷಣಗಳನ್ನು ಸಂಪುಟವಾಗಿ ಸಿದ್ಧಗೊಳಿಸಲಾಗಿದೆ ಎಂದರು.
ಸಂಪುಟಗಳ ಸಂಪಾದಕ ಡಾ. ರೇವಯ್ಯ ಒಡೆಯರ್ ಮಾತನಾಡಿ, ಕರ್ನಾಟಕ ವಿವಿ ಸುವರ್ಣ ಸಂಭ್ರಮ ಭವನದಲ್ಲಿ ಜ. 13ರಂದು ಬೆಳಗ್ಗೆ 11ಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಈ ಸಂಪುಟಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುತ್ತಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿಶ್ರಾಂತ ಸಭಾಪತಿ ಡಾ.ಬಿ.ಎಲ್. ಶಂಕರ, ವಿ.ಆರ್. ಸುದರ್ಶನ, ವೀರಣ್ಣ ಮತ್ತಿಕಟ್ಟಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಭಾಗವಹಿಸಲಿದ್ದು, ಕಾನೂನು ಸಚಿವ ಎಚ್.ಕೆ. ಪಾಟೀಲ ಉಪಸ್ಥಿತರಿರುತ್ತಾರೆ.
ವಿಶೇಷ ಅತಿಥಿಗಳಾಗಿ ಕರ್ನಾಟಕ ವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹಾಗೂ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.