ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ:
ಸಂವಿಧಾನದ 4ನೇ ಅಂಗವಾಗಿರುವ ಪತ್ರಿಕಾ ರಂಗ ಶ್ರೇಷ್ಠವಾದದ್ದಾಗಿದ್ದು, ಅನೇಕ ಸವಾಲುಗಳ ಮಧ್ಯೆ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಾರೆ. ಹೀಗಾಗಿ, ಪತ್ರಕರ್ತರ ಸೇವೆ ಅಮೂಲ್ಯವಾದದ್ದು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಶ್ಲಾಘಿಸಿದರು.ತಾಲೂಕಿನ ಪಡಗಾನೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ ಜಿಲ್ಲಾ ಜಾನಪದ ಪರಿಷತ್ ನ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗೂ ರಾಜ್ಯಮಟ್ಟದ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರಧನದಲ್ಲಿ ಅವರು ಮಾತನಾಡಿದರು. ಪತ್ರಕರ್ತರು ಸರ್ಕಾರ ಮತ್ತು ಸಮಾಜದ ಪ್ರತಿಬಿಂಬ ಹಾಗೂ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯಮಟ್ಟದ ಕಾರ್ಯಕ್ರಮ ಗ್ರಾಮೀಣ ಭಾಗದ ಪಡಗಾನೂರ ಗ್ರಾಮದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಗ್ರಾಮದ ಅಭಿವೃದ್ಧಿಗಾಗಿ ಸುಮಾರು ₹50 ಲಕ್ಷ ವೆಚ್ಚದ ಸಿಸಿ ರಸ್ತೆ, 5 ಲಕ್ಷದ ಶಾಲಾ ಕಟ್ಟಡದ ದುರಸ್ತಿ, ಪಡಗಾನೂರ ಹಾಗೂ ಬೊಮ್ಮನಹಳ್ಳಿ ರಸ್ತೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ ಎಂದು ಜನರಿಗೆ ಧನ್ಯವಾದ ಹೇಳಿದರು.ಮಾಜಿ ಶಾಸಕ ಅಶೋಕ ಶಾಬಾದಿ ಮಾತನಾಡಿ, ಪತ್ರಕರ್ತರು ಸಮಾಜದ ಅಂಕು ದೊಂಕು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ವಸ್ತುನಿಷ್ಠ ವರದಿ ನೀಡಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿವಿಧ ಗಣ್ಯರು ಪತ್ರಿಕೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಸಾರ್ವಜನಿಕರ ಸಮಸ್ಯೆ ಎತ್ತಿಹಿಡಿಯಬೇಕಿದ್ದು, ಆಗ ಮಾತ್ರ ಉತ್ತಮ ವರದಿಗಳನ್ನು ನಿರೀಕ್ಷಿಸಲು ಸಾಧ್ಯ ಎಂದರು.
ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ರಾಜ್ಯಮಟ್ಟದ ಪ್ರಶಸ್ತಿ ಕಾರ್ಯಕ್ರಮವನ್ನು ಈ ಗ್ರಾಮದಲ್ಲಿ ಹಮ್ಮಿಕೊಳ್ಳುವ ಮೂಲಕ ರಾಜ್ಯದಲ್ಲಿ ಜಿಲ್ಲೆಯ ಪತ್ರಕರ್ತರ ಕೊಡುಗೆ ಅಪಾರ ಎಂದು ಹೇಳಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸಂಸದರಾದ ರಮೇಶ ಜಿಗಜಿಣಗಿ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹಿರೇಮಠದ ವೇ.ಮೂ.ಅಯ್ಯಪ್ಪ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಸಾಹಿತಿ ಮಂಜುನಾಥ ಜುನಗೊಂಡ ಹಾಗೂ ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಕರ್ತರ ಪಾತ್ರದ ಕುರಿತು ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಕ ಕಬೂಲ್ ಕೊಕಟನೂರ ನಿರೂಪಿಸಿದರು.
ಮುಖಂಡ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ, ವಿಜಯಪುರ ವ್ಹಿಡಿಸಿಸಿ ನಿರ್ದೇಶಕ ಹಣುಮಂತ್ರಾಯಗೌಡ ಪಾಟೀಲ, ಕಾನಿಪ ರಾಜ್ಯ ಕಾರ್ಯಕಾರಣಿ ಸದಸ್ಯ ಡಿ.ಬಿ.ವಡವಡಗಿ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಆಕಳವಾಡಿ, ಉಪಾಧ್ಯಕ್ಷೆ ಕಸ್ತೂರಿಬಾಯಿ ಹೊಸಟ್ಟಿ, ತಾಲೂಕು ಕಾನಿಪ ಅಧ್ಯಕ್ಷ ಸಂಗಮೇಶ ಉತ್ನಾಳ, ವಿಜಯಪುರ ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಡಾ.ರಮೇಶ ರಾಠೋಡ ಸೇರಿದಂತೆ ಸಾಧಕರು, ಗ್ರಾಮದ ಮುಖಂಡರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.