44ನೇ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನೆ । ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಇತ್ತೀಚಿನ ದಿನಗಳಲ್ಲಿ ಯುವಜನತೆ ಇಂಜಿನಿಯರ್, ಮೆಡಿಕಲ್ ಸೇರಿದಂತೆ ವಾಣಿಜ್ಯ ಶಿಕ್ಷಣಕ್ಕೆ ಮಾರು ಹೋಗುತ್ತಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವ ಹಾಗೂ ಸಮಾಜ ತಿದ್ದುವ ಶಿಕ್ಷಕರ ವೃತ್ತಿಗೆ ಮನ್ನಣೆ ನೀಡುತ್ತಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಬೇಸರ ವ್ಯಕ್ತಪಡಿಸಿದರು.
ಜ್ಯೋತಿನಗರದಲ್ಲಿ ಎಂಇಎಸ್, ಎಂ.ಎಲ್.ಮಂಜಯ್ಯಶೆಟ್ಟಿ ನರಸಿಂಹರಶೆಟ್ಟಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ಧ 44ನೇ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ವೃತ್ತಿಯಲ್ಲಿ ಕಾರ್ಯನಿರ್ವಹಿಸುವವರು ಪಠ್ಯ ಬೋಧನೆಗೆ ಜತೆಗೆ ಸಮಾಜದ ಅರಿವು ಮೂಡಿಸಬೇಕು. ದೇಶ-ವಿದೇಶಗಳ ಆಗು-ಹೋಗುಗಳನ್ನು ತಿಳಿಸಿಕೊಡಬೇಕು. ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು ದೇಶದ ಏಳಿಗೆಗಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ದುಡಿದ ನಾಯಕರ ವಿಚಾರ ಮಂಡಿಸುವ ಕಾರ್ಯವಾಗಬೇಕು ಎಂದರು.ಎಐ ತಂತ್ರಜ್ಞಾನ ಪ್ರತಿಯೊಂದು ಕ್ಷೇತ್ರದಲ್ಲಿ ವ್ಯಾಪಿಸಿಕೊಳ್ಳುತ್ತಿದೆ. ಇದು ಮನುಷ್ಯನ ಕೆಲಸ ಸುಲಭಗೊಳಿಸುವುದ್ದಲ್ಲದೇ, ಮುಂದೊಂದು ದಿನ ಬಹುತೇಕ ಕೆಲಸ ಕಸಿದುಕೊಳ್ಳಲಿದೆ. ಹೀಗಾಗಿ, ಮನುಷ್ಯನು ಎಐ ತಂತ್ರಜ್ಞಾನವನ್ನು ನಿಯಮಿತ ಪ್ರಮಾಣ ದಲ್ಲಿ ಉಪಯೋಗಿಸಿ, ಉಳಿದಂತ ಕೆಲಸ-ಕಾರ್ಯವನ್ನು ಮಾನವ ನಿರ್ವಹಿಸುವಂತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಾಮಾಜಿಕ ಜಾಲತಾಣದ ವಿಡಿಯೋ ಅಥವಾ ಮಾಹಿತಿ ಶುದ್ಧ ಸುಳ್ಳಾಗಿವೆ. ಇದನ್ನೇ ನಂಬಿ ಯುವಜನತೆ ಆಕ್ರೋಶಕ್ಕೆ ಒಳಗಾಗುವ ಸಂಭವವಿದೆ. ಇತಿಹಾಸ ತಿಳಿಯಲು ಪುಸ್ತಕ ಗಳನ್ನು ಅಭ್ಯಾಸಿಸಬೇಕು. ಜತೆಗೆ ಶಿಕ್ಷಕರ ಮಾರ್ಗದರ್ಶನ ಪಡೆಯುವುದು ಸೂಕ್ತ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಆರ್.ತಿಮ್ಮರಾಯಪ್ಪ ಮಾತನಾಡಿ, ಯಾವುದೇ ಕೆಲಸಕ್ಕೆ ಮುಂದಾದಾಗ ಸೋಲು ಎದುರಾಗುವುದು ಸಹಜ. ಸೋಲಿಗೆ ಎದೆಗುಂದದೆ ಸಾಧನೆಯತ್ತ ಮುನ್ನುಗ್ಗಬೇಕು . ಜೀವನದಲ್ಲಿ ಪ್ರಾಮಾಣಿಕತೆ, ಸಮುಯಪಾಲನೆ, ವಿಶ್ವಾಸರ್ಹತೆ, ಸತತ ಪರಿಶ್ರಮ, ಶ್ರದ್ದೆ ಮುಖ್ಯ. ಇವುಗಳಿಂದ್ದಲಿ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರಲಿದೆ ಎಂದರು.ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷೆ ರಾಧಾ ಸುಂದ್ರೇಶ್ ಮಾತನಾಡಿ. ಯುವ ಜನತೆ ಪಾಲಕರು ಆಶೀರ್ವಾದ ಆರೈಕೆಯಲ್ಲಿ ವಿದ್ಯೆ ಕಲಿತು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅಂತ ಹ ಮೌಲ್ಯಯುತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣೀಕರಾಗಿ ದುಡಿಯಬೇಕು ಎಂದು ಹೇಳಿದರು.
ಎಂಎಲ್ ಎಂಎನ್ ಬಿಎಡ್ ಕಾಲೇಜು ಪ್ರಾಂಶುಪಾಲ ಡಾ.ಜಿ.ಎಂ.ಗಣೇಶ್ ಮಾತನಾಡಿ, ಕಾಲೇಜು ಸ್ಥಾಪನೆಗೊಂಡು ನಾಲ್ಕುವರೆ ದಶಕ ಪೂರೈಸಿದೆ. ಕೆಲವೇ ಮಕ್ಕಳ ಸಂಖ್ಯೆಯಲ್ಲಿದ್ದ ಕಾಲೇಜು ಗುಣಾತ್ಮಕ ಶಿಕ್ಷಣದಿಂದ ಕಾಲಕ್ರಮೇಣ ಸಾವಿ ರಾರು ಮಕ್ಕಳು ದಾಖಲಾಗಿದ್ದಾರೆ. ಇಲ್ಲಿ ವಿದ್ಯಾಭ್ಯಾಸ ಪೂ ರೈಸಿದ ಅನೇಕರು ನ್ಯಾಯಾಧೀಶ, ಪೊಲೀಸ್, ಸರ್ಕಾರಿ ಹುದ್ದೆ ಅಲಂಕರಿಸಿದ್ದಾರೆ ಎಂದು ಹೇಳಿದರು.ಕಾಲೇಜು ವಿಶೇಷವಾಗಿ ಗ್ರಾಮೀಣ ಭಾಗದ ಬಾಲಕಿಯರಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದೆ. ಸಮಗ್ರ ಪರಿಣಿತ ಶಿಕ್ಷಕ ವೃಂದದೊಂದಿಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದೆ. ಜಿಲ್ಲೆಯಲ್ಲಿ ಅನೇಕ ಬಿಎಡ್ ಕಾಲೇಜುಗಳಿದ್ದರೂ, ನಮ್ಮ ಬಿಎಡ್ ಕಾಲೇಜು ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಹೆಸರು ಪಡೆದಿದೆ ಎಂದರು.
ಈ ವೇಳೆ ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ, ಉದ್ಯಮಿ ಎಂ.ಎನ್.ಮೋಹನ್, ದಾನಿಗಳಾದ ಕಾಂತಲಕ್ಷ್ಮೀ, ಶಾಂತವೀರಪ್ಪ ಉಪಸ್ಥಿತರಿದ್ದರು.