ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮ ಹಣಕಾಸು ವವ್ಯವಹಾರ ಶಂಕೆ ಹಿನ್ನಲೆ ಜಾರಿ ನಿರ್ದೇಶನಾಲಯದ (ಇಡಿ) ಹೆಸರಿನಲ್ಲಿ ಖಾಸಗಿ ಕಂಪನಿ ಮೇಲೆ ದಾಳಿ ನಡೆಸಿ ಬಳಿಕ ಅಲ್ಲಿನ ಉದ್ಯೋಗಿಗಳನ್ನು ಅಕ್ರಮ ಬಂಧನದಲ್ಲಿಟ್ಟು1.5 ಕೋಟಿ ರು. ಹಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಇಲಾಖೆಯ ಅಧೀಕ್ಷಕ ಸೇರಿ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಜಿಎಸ್‌ಟಿ ಬೆಂಗಳೂರು ಪ್ರಾದೇಶಿಕ ಕಚೇರಿ ದಕ್ಷಿಣ ವಿಭಾಗದ ಅಧೀಕ್ಷಕ ಅಭಿಷೇಕ್, ಹಿರಿಯ ಗುಪ್ತಚರ ಅಧಿಕಾರಿ ಮನೋಜ್ ಸೈನಿ, ನಾಗೇಶ್ ಬಾಬು ಹಾಗೂ ಸೋನಾಲಿ ಸಹಾಯ್ ಬಂಧಿತರಾಗಿದ್ದು, ಈ ಬಗ್ಗೆ ಜೀವನ್ ಭೀಮಾ ನಗರದ ಮೆಕ್ಸೋ ಸಲ್ಯೂಷನ್ ಪ್ರೈ. ಕಂಪನಿ ಉದ್ಯೋಗಿ ಕೇಶವ್ ತಕ್ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ.
ಕೆಲ ದಿನಗಳ ಹಿಂದೆ ಮೆಕ್ಸೋ ಕಂಪನಿ ಮೇಲೆ ದಾಳಿ ನಡೆಸಿ ಬಳಿಕ ಆ ಕಂಪನಿಯಲ್ಲೇ ಉದ್ಯೋಗಿಗಳನ್ನು 2 ದಿನಗಳು ಬಂಧನದಲ್ಲಿಟ್ಟು ಜಿಎಸ್‌ಟಿ ಅಧಿಕಾರಿಗಳು ಹಣ ಸುಲಿಗೆ ಮಾಡಿದ್ದರು. ಈ ಬಗ್ಗೆ ಬೈಯಪ್ಪನಹಳ್ಳಿ ಠಾಣೆಗೆ ಕಂಪನಿ ಉದ್ಯೋಗಿ ದೂರು ನೀಡಿದ್ದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಜಿಎಸ್‌ಟಿ ಅಧಿಕಾರಿ ಅಭಿಷೇಕ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಸಲಿ ಮುಖವಾಡ ಕಳಚಿದೆ.ಪ್ರಕರಣದ ವಿವರ ಹೀಗಿದೆ.
ಕೆಲ ತಿಂಗಳಿಂದ ಜೆ.ಬಿ.ನಗರ ರಸ್ತೆಯಲ್ಲಿ ವೆಬ್ ಡಿಸೈನಿಂಗ್‌ನ ಮೆಕ್ಸೋ ಕಂಪನಿ ವಹಿವಾಟು ನಡೆಸುತ್ತಿದೆ. ಈ ಕಂಪನಿ ಬಗ್ಗೆ ಮಾಹಿತಿ ಪಡೆದ ಜಿಎಸ್‌ಟಿ ಅಧೀಕ್ಷಕ ಅಭಿಷೇಕ್ ತಂಡವು, ಆ.30 ರಂದು ಬೆಳಗ್ಗೆ 9 ಗಂಟೆಗೆ ಜಿ.ಎಂ.ಪಾಳ್ಯದಲ್ಲಿದ್ದ ಆ ಕಂಪನಿಯ ಉದ್ಯೋಗಿ ಕೇಶವ್ ಮನೆ ಮೇಲೆ ದಾಳಿ ನಡೆಸಿದೆ. ಆಗ ತಮ್ಮನ್ನು ಇಡಿ ಹಾಗೂ ಜಿಎಸ್‌ಟಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಆರೋಪಿಗಳು, ನಿಮ್ಮ ಕಂಪನಿಯಲ್ಲಿ ಅಕ್ರಮ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಬಂದಿದೆ. ಅದಕ್ಕೆ ದಾಳಿ ನಡೆಸಿದ್ದೇವೆ ಎಂದಿದ್ದಾರೆ. ಬಳಿಕ ಕೇಶವ್ ನನ್ನು ವಶಕ್ಕೆ ಪಡೆದ ಆರೋಪಿಗಳು, ಆತನಿಂದ ಮೊಬೈಲ್ ಕಸಿದುಕೊಂಡು ದಾಖಲೆಗಳನ್ನು ಪರಿಶೀಲಿಸಬೇಕಿದೆ. ಕಂಪನಿ ಕಚೇರಿಗೆ ಕರೆದೊಯ್ಯುತ್ತಿದ್ದೇವೆ ಎಂದಿದ್ದಾರೆ. ಆ ವೇಳೆ ಕೇವಶ್ ಮನೆಯಲ್ಲಿದ್ದ ಕಂಪನಿಯ ನೌಕರರಾದ ಪವನ್ ತಕ್, ಮುಖೇಶ್ ಜೈನ್ ಹಾಗೂ ಸ್ನೇಹಿತ ರಾಕೇಶ್ ಮಾಣಕ್ ಚಾಂದನಿನನ್ನು ಜಿಎಸ್‌ಟಿ ತಂಡ ವಶಕ್ಕೆ ಪಡೆದಿದೆ.ನಂತರ ಮನೆಯಿಂದ ಬಲವಂತವಾಗಿ ಆ ನಾಲ್ವರನ್ನು ಕಾರುಗಳಲ್ಲಿ ಕರೆದುಕೊಂಡು ಜೆ.ಬಿ.ನಗರದ ರಸ್ತೆಯಲ್ಲಿದ್ದ ಕಂಪನಿ ಕಚೇರಿಗೆ ಕರೆತಂದಿದ್ದಾರೆ. ಆನಂತರ ಅವರನ್ನು ಪ್ರತ್ಯೇಕವಾಗಿ ಕೋಣೆಯಲ್ಲಿಟ್ಟು ಮನಬಂದಂತೆ ಥಳಿಸಿ ಹಿಂಸಿಸಿ 3 ಕೋಟಿ ರು.ಗೆ ಕೊಡುವಂತೆ ಜಿಎಸ್‌ಟಿ ತಂಡ ಬೇಡಿಕೆ ಇಟ್ಟಿತ್ತು ಎಂದು ಆರೋಪಿಸಲಾಗಿದೆ.
ಕೆಲ ಹೊತ್ತಿನ ಬಳಿಕ ಇಂದಿರಾ ನಗರಕ್ಕೆ ಕೇಶವ್‌ನನ್ನು ಹಿರಿಯ ಜಿಎಸ್‌ಟಿ ಅಧಿಕಾರಿ ಮನೋಜ್ ಕರೆದೊಯ್ದಿದ್ದಾರೆ. ಅಲ್ಲಿ ಆತನ ಮೊಬೈಲ್ ಅನ್ನು ಫ್ಲೈಟ್ ಮೂಡ್‌ನಲ್ಲಿಟ್ಟು ಹಾಟ್ ಸ್ಪಾಟ್ ಮೂಲಕ ಇಂಟರ್‌ನೆಟ್ ಕನೆಕ್ಟ್ ಮಾಡಿಸಿದ ಮನೋಜ್, ಬಳಿಕ ಆತನ ಸ್ನೇಹಿತ ರೋಷನ್‌ಗೆ ಕೇಶವ್‌ನಿಂದ ವಾಟ್ಸಾಪ್ ಕಾಲ್ ಮಾಡಿಸಿ 3 ಕೋಟಿ ರು. ತರುವಂತೆ ಹೇಳಿಸಿದ್ದರು. ನಂತರ ಮತ್ತೆ ಕೇಶವ್‌ನನ್ನು ಕಂಪನಿ ಕಚೇರಿಗೆ ಆರೋಪಿಗಳು ಕರೆತಂದಿದ್ದರು. ಮರು ದಿನ ಕೇಶವ್‌ನನ್ನು ಮತ್ತೆ ಕಾರಿನಲ್ಲಿ ಕರೆದೊಯ್ದು ನಗರದ ವಿವಿಧೆಡೆ ಸುತ್ತಾಡಿಸಿ ಮರಳಿ ಕಂಪನಿ ಕಚೇರಿಗೆ ಕರೆತಂದಿದ್ದರು. ಆಗ ಕೇಶವ್‌ನಿಂದ ಮತ್ತೆ ಆತನ ಸ್ನೇಹಿತ ರೋಷನ್‌ಗೆ ಕರೆ ಮಾಡಿಸಿ ಹಣವನ್ನು ಶೀಘ್ರವೇ ಹಣ ತರುವಂತೆ ಒತ್ತಾಯಿಸಿದ್ದರು. ಹಣ ಬರುವುದು ವಿಳಂಬವಾಗಿದ್ದಕ್ಕೆ ಕೇಶವ್‌ಗೆ ಆರೋಪಿಗಳು ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಹವಾಲ ಮೂಲಕ 1.5 ಕೋಟಿ ರು. ಹಣ ಸಲ್ಲಿಕೆ
ಕೊನೆಗೆ ಕೇಶವನ ಸಂಕಷ್ಟದ ಮಾಹಿತಿ ತಿಳಿದು ಹವಾಲ ಮೂಲಕ 1.5 ಕೋಟಿ ಹಣವನ್ನು ಹೊಂದಿಸಿದ ರೋಷನ್, ಸೆ.1 ನಸುಕಿನ 2.30ರ ಸುಮಾರಿಗೆ ಮುಖೇಶ್ ಜೈನ್ ಮೂಲಕ ಕೇಶವ್ ಮನೆಗೆ ಹಣ ಕಳುಹಿಸಿದ್ದರು. ಆಗ ಕೇಶವ್ ಮನೆಗೆ ತೆರಳಿದ ಜಿಎಸ್‌ಐಟಿ ಅಧಿಕಾರಿಗಳು, ಅಕ್ರಮ ಪ್ರಕರಣದ ಹಣ ಎಂದು ಸುಳ್ಳು ಹೇಳಿ ಆ ಹಣವನ್ನು ಜಪ್ತಿ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.ಮಹಜರ್ ದಾಖಲೆ ಬಿಟ್ಟು ಸಿಕ್ಕಿಬಿದ್ದರು..!ಕೇಶವ್ ಮನೆ ಮೇಲೆ ದಾಳಿ ನಡೆಸಿದ ಜಿಎಸ್‌ಟಿ ತಂಡವು, ಆ ಮನೆಯಲ್ಲಿ ಅಕ್ರಮ ವ್ಯವಹಾರದ ಹಣ ಎಂದು ಜಪ್ತಿ ಮಾಡಿದ ನಂತರ ಮಹಜರ್ ಪ್ರಕ್ರಿಯೆ ನಾಟಕವಾಡಿದ್ದರು. ಆದರೆ ಹಣ ಜಪ್ತಿ ಮಾಡಿ ತೆರಳುವಾಗ ಆ ಮನೆಯಲ್ಲೇ ಮಹಜರ್ ದಾಖಲೆಗಳನ್ನು ಬಿಟ್ಟು ಅಧಿಕಾರಿಗಳು ತೆರಳಿದ್ದರು. ಆ ದಾಖಲೆಯನ್ನು ನೋಡಿದ ಕೇಶವ್ ಕುಟುಂಬದವರು, ಏನೋ ಮರೆತು ಹೋಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಎರಡು ದಿನಗಳಾದರೂ ಮಹಜರ್ ದಾಖಲೆ ಪಡೆಯಲು ಬಾರದೆ ಹೋದಾಗ ಜಿಎಸ್‌ಟಿ ಅಧಿಕಾರಿಗಳ ನಡವಳಿಕೆ ಮೇಲೆ ಕೇಶವ್‌ಗೆ ಅನುಮಾನ ಬಂದಿದೆ. ಆಗ ಈ ದಾಳಿ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ಕೂಡಲೇ ಬೈಯಪ್ಪನಹಳ್ಳಿ ಠಾಣಗೆ ತೆರಳಿ ಅವರು ದೂರು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.ಸಿಸಿಟಿವಿ ಹೇಳಿದ ಸತ್ಯ
ಈ ಬಗ್ಗೆ ತನಿಖೆಗಿಳಿದ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಕೃತ್ಯದ ಹಿಂದೆ ವೃತ್ತಿಪರ ದರೋಡೆಕೋರರ ಪಾತ್ರವಿರಬಹುದು ಎಂದು ಶಂಕಿಸಿದ್ದರು. ಆದರೆ ಕೇಶವ್ ಮನೆ ಹಾಗೂ ಅವರ ಕಂಪನಿಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಜಿಎಸ್‌ಟಿ ಅಧಿಕಾರಿಗಳ ಚಲನವಲನದ ದೃಶ್ಯಾವಳಿಗಳು ಪತ್ತೆಯಾದವು. ಈ ಸುಳಿವು ಆಧರಿಸಿ ಅಧೀಕ್ಷಕ ಅಭಿಷೇಕ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಮೇಲಾಧಿಕಾರಿಗಳಿಗೆ ತಿಳಿಸದೆ ದಾಳಿಅಕ್ರಮ ಆರ್ಥಿಕ ವ್ಯವಹಾರದ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸುವ ಮುನ್ನ ತಮ್ಮ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಕೆಳಹಂತದ ಅಧಿಕಾರಿಗಳು ಪಡೆಯಬೇಕಿದೆ. ಅಂತೆಯೇ ಮೆಕ್ಸೋ ಕಂಪನಿ ಮೇಲಿನ ದಾಳಿ ಕುರಿತು ಮಾಹಿತಿಗೆ ಕೇಂದ್ರ ಜಿಎಸ್‌ಟಿ ಪ್ರಾದೇಶಿಕ ಕಚೇರಿಯ ಮಹಾನಿರ್ದೇಶಕ (ಗುಪ್ತದಳ) ಅವರನ್ನು ಸಂಪರ್ಕಿಸಲಾಯಿತು. ಆಗ ಈ ಪ್ರಕರಣದ ಕುರಿತು ಅವರಿಗೆ ಮಾಹಿತಿಯೇ ಇರಲಿಲ್ಲ. ಡಿಜಿ ಅನುಮತಿ ಪಡೆಯದೆ ಅಧೀಕ್ಷಕರು ದಾಳಿ ನಡೆಸಿದ್ದರು.
ಅಕ್ರಮ ಆರ್ಥಿಕ ವ್ಯವಹಾರದ ಮಾಹಿತಿ ಮೇರೆಗೆ ಕಂಪನಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆಗೆ ಕಾನೂನು ಪ್ರಕಾರ ಜಿಎಸ್‌ಟಿ ಅಧಿಕಾರಿಗಳಿಗೆ ಅವಕಾಶವಿದೆ. ಆದರೆ 1.5 ಕೋಟಿ ರು. ಹಣ ಸುಲಿಗೆ ಮಾಡಿದ್ದು ಯಾಕೆ? 2 ದಿನಗಳು ಅಕ್ರಮ ಬಂಧನದಲ್ಲಿಟ್ಟಿದ್ದು ಕಾನೂನುಬಾಹಿರ ಕೃತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.