ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ಸಿಂದ ರೈತರ ಆಸ್ತಿ ಕಬಳಿಸುವ ಹುನ್ನಾರ

| Published : Nov 23 2024, 12:35 AM IST

ಸಾರಾಂಶ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ, ಬಡವರ, ಮಠ-ಮಾನ್ಯಗಳ ಜಮೀನನ ಆಸ್ತಿ ಕಬಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ, ಇದನ್ನು ಖಂಡಿಸಿ ಬಿಜೆಪಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರುರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ, ಬಡವರ, ಮಠ-ಮಾನ್ಯಗಳ ಜಮೀನನ ಆಸ್ತಿ ಕಬಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ, ಇದನ್ನು ಖಂಡಿಸಿ ಬಿಜೆಪಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೇರಿದ ಪಕ್ಷದ ಮುಖಂಡರು, ಕಾರ್ಯಕರ್ತರು ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲು ಮುಂದಾಗಿದ್ದೇ ತಡ ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದೆ ಎಂದು ಆರೋಪಿಸಿ ಕಾಂಗ್ರೆಸ್, ಮುಖ್ಯಮತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿ,ಸಾಮರಸ್ಯದ ನಾಡಾಗಿದ್ದ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ರಾಜ್ಯವನ್ನು ಆತಂಕದ ಸ್ಥಿತಿಗೆ ತಳ್ಳುತ್ತಿದೆ. ರೈತರ, ಮಠ ಮಂದಿರದ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ದಾಖಲೆಗಳಲ್ಲಿ ಸೇರ್ಪಡೆ ಮಾಡಲಾಗುತ್ತಿದೆ ಎಂದು ದೂರಿದ ಪ್ರತಿಭಟನಾಕಾರರು ವಕ್ಫ್ ಮಂಡಳಿಯಿಂದ ಆದ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.ವಕ್ಫ್ ಬೋರ್ಡ್ ನಿಂದ ಆಗುತ್ತಿರುವ ಗೊಂದಲ ಸರಿಪಡಿಸಲು ರಾಜ್ಯ ಸರ್ಕಾರ ಮುಂದಾಗದೇ ಅಧಿಕಾರಿಗಳ ಸಭೆ ನಡೆಸಿ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡದಂತೆ ತಾತ್ಕಾಲಿಕ ತಡೆ ನೀಡಿದ್ದಾರೆ. ಇದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ ಇದು ಮುಂದೊಂದುದಿನ ರೈತರಿಗೆಮರಣ ಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯದ ವಿಜಯಪುರ ಜಿಲ್ಲೆ ಹೊನ್ನಾವಡದ ರೈತರ 1,500 ಎಕರೆ ಜಮೀನು ವಕ್ಫ್ ಆಸ್ತಿಯೆಂದು ಘೋಷಿಸಿ ತಹಶೀಲ್ದಾರ್ರಿಂದ ಪುಷ್ಠಿಕರಿಸಿ ನೋಟೀಸ್ ನೀಡಲಾಗಿದೆ. ಬೆಂಗಳೂರಿನ ವಿಧಾನಸೌಧವೂ ಸೇರಿದಂತೆ ಹಲವಾರು ಪ್ರಮುಖ ಆಸ್ತಿಗಳು ವಕ್ಫ್ ಗೆ ಸೇರಿದ್ದು ಎಂದು ಮುಸ್ಲಿಂ ನಾಯಕರು ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 1649 ಆಸ್ತಿಗಳ ಹಕ್ಕಿಗಾಗಿ ವಕ್ಫ್ ಪ್ರತಿಪಾದಿಸುತ್ತಿದೆ. ಸವಣೂರು ತಾಲ್ಲೂಕು ಕಡಕೋಳ ಗ್ರಾಪಂ ವ್ಯಾಪ್ತಿಯ ಹನುಮಂತ ದೇವಸ್ಥಾನದ ಆತಿಕ್ರಮಣಕ್ಕೆ ವಕ್ಫ್ ಬೋರ್ಡ್ ಮುಂದಾಗಿದೆ. ಹೀಗೆ ಹಲವೆಡೆ ವಕ್ಫ್ ಬೋರ್ಡ್ ವಿವಾದ ಸೃಷ್ಠಿಸಿದ್ದು ಇದನ್ನು ಬರೆಗಹರಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದ ವಕ್ಫ್ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎನ್‌.ಶಂಕ್ರಪ್ಪ, ಶಿವಬಸ್ಸಪ್ಪ ಮಾಲಿ ಪಾಟೀಲ, ಸುಮಾ ಅಶೋಕ ಗಸ್ತಿ, ಊಟ್ಕೂರು ರಾಘ ವೇಂದ್ರ, ಕೆ.ಎಂ.ಪಾಟೀಲ, ಕಡಗೋಲು ಆಂಜನೇಯ, ಮಲ್ಲಿಕಾರ್ಜುನ ಹಳ್ಳೂರು, ಶಿವಕುಮಾರ ಪೊ.ಪಾ, ಶಂಶಾಲಂ, ವೈ.ಗೋಪಾಲ ರೆಡ್ಡಿ, ಜಿ.ಶಂಕರ ರೆಡ್ಡಿ, ಪಲಗುಲ ನಾಗರಾಜ, ಕಡಗೋಲು ರಾಮಚಂದ್ರ ಸೇರಿದಂತೆ ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.