ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ವಿಳಂಬ: ಅಸಹಾಯಕರ ಬದುಕಿಗೆ ಹೊಡೆತ

ಸಾಮಾಜಿಕ ಭದ್ರತಾ ಯೋಜನೆಗೆ ಗ್ರಹಣ: ಸಂಕಷ್ಟದಲ್ಲಿ ವೃದ್ಧರು, ವಿಧವೆಯರು

ಪಿಂಚಣಿ ಹಣ ಜಮೆಯಾಗದೆ ಸಂಕಷ್ಟದಲ್ಲಿ ವೃದ್ಧರು, ವಿಶೇಷಚೇತನರು


ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಸರ್ಕಾರದಿಂದ ದೊರೆಯುವ ಪಿಂಚಣಿಯಿಂದಲೇ ಜೀವನ ನಡೆಸುತ್ತಿರುವ ಅನೇಕ ಫಲಾನುಭವಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಿಂಚಣಿ ಇಲ್ಲದೆ ದೈನಂದಿನ ಖರ್ಚು ನಿರ್ವಹಣೆ ಕಷ್ಟವಾಗಿದ್ದು, ಪಿಂಚಣಿ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಲು ತಹಸೀಲ್ದಾರ ಕಚೇರಿಗೆ ಅಲೆಯುತ್ತಿದ್ದಾರೆ.

ಕಳೆದರಡು ತಿಂಗಳಿನಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಬಾರದೆ ಕೆಲವೊಂದು ನಿರ್ಗತಿಕರು, ವಿಶೇಷಚೇತನರು, ವಿಧವೆಯರು ಪರದಾಡುವಂತಾಗಿದೆ.

ಸಾಮಾಜಿಕ ಭದ್ರತಾ ಯೋಜನೆಯಡಿ ಇಂದಿರಾಗಾಂಧಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶೇಷಚೇತನರ ಪಿಂಚಣಿ, ಸಂಧ್ಯಾ ಸುರಕ್ಷಾ ಸೇರಿ ನಾನಾ ಯೋಜನೆಗಳಡಿ ತಾಲೂಕಿನಲ್ಲಿ 16194 ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ತಿಂಗಳಿಗೆ ಸರಿಸಮಾರು ₹1 ಕೋಟಿ 14 ಲಕ್ಷ ಅನುದಾನ ಬೇಕಾಗುತ್ತದೆ.

ಇದೀಗ ಕಳೆದ ಎರಡು ಮೂರು ತಿಂಗಳಿನಿಂದ ಕೆಲವೊಬ್ಬರಿಗೆ ಮಾಸಾಶನ ಮುಂಜೂರಾಗಿಲ್ಲ. ಈ ತಿಂಗಳು ಪೂರ್ಣಗೊಂಡರೆ ಮೂರು ತಿಂಗಳ ಬಾಕಿಗಾಗಿ ಫಲಾನುಭವಿಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಕಷ್ಟವಾದ ಜೀವನ ನಿರ್ವಹಣೆ:

ಹಲವಾರು ಒಂಟಿ ಮಹಿಳೆ, ವಿಶೇಷಚೇತನರು ಸರ್ಕಾರರದ ಇಂತಹ ಯೋಜನೆಗಳ ಮೇಲೆಯೇ ಅವಲಂಬಿತವಾಗಿದ್ದಾರೆ. ಪಿಂಚಣಿ ವಿಳಂಬವಾಗುತ್ತಿರುವುದರಿಂದ ನಿತ್ಯದ ಆಹಾರ, ಅಗತ್ಯತೆ ಹಾಗೂ ಔಷಧ ಪಡೆಯಲು ಸಾಧ್ಯವಾಗದೆ ಗೋಳಿಡುವಂತಾಗಿದೆ.

ಫಲಾನುಭವಿಗಳಿಗೆ ಈ ಹಿಂದೆ ಪ್ರತಿ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿತ್ತು. ಆದರೆ ಈಗ ಮೂರು ತಿಂಗಳು ಹತ್ತಿರ ಬಂದರೂ ಜಮಾ ಆಗುತ್ತಿಲ್ಲ. ಪಿಂಚಣಿ ಹಣ ವಿಳಂಬದ ಕುರಿತು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ಸರಿಯಾದ ಸ್ಪಷ್ಟತೆ ನೀಡುತ್ತಿಲ್ಲ, ಸಮಸ್ಯೆ ಇದೆ ಎನ್ನುತ್ತಾರೆ.

ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವ ಕಾರ್ಯ ಸರ್ಕಾರ ಮಾಡುತ್ತಿರುವುದು ತಪ್ಪಲ್ಲ, ಆದರೆ ಅರ್ಹ ಫಲಾನುಭವಿಗಳಿಗೆ ಯೋಜನೆ ಫಲ ತಲುಪಿಸುವಲ್ಲಿ ವಿಳಂಬ ಮಾಡಬಾರದು. ಕೆಲವೆಡೆ ಯಾವುದೇ ಮಾಹಿತಿ ನೀಡದೆ ಮಾಸಾಶನ ಸ್ಥಗಿತಗೊಳಿಸಲಾಗಿದೆ. ಸರ್ಕಾರದಿಂದ ದೊರೆಯುವ ಪಿಂಚಣಿ ಮೇಲೆಯೇ ಬದುಕು ಸಾಗಿಸುತ್ತಿರುವ ಅನೇಕರು ನಿತ್ಯದ ಸಾಮಗ್ರಿಗಳಿಗಾಗಿ ಸಾಲ ಮಾಡಿ ಜೀವನ ನಡೆಸುವ ಪರಿಸ್ಥಿತಿಗೆ ತಲುಪಿದ್ದಾರೆ.ಸರ್ಕಾರಕ್ಕೆ ವರದಿ

ಅಂಕೋಲಾದಲ್ಲಿ ಕೆಲವು ಫಲಾನುವಿಗಳು ಯೋಜನೆಯ ಲಾಭ ಪಡೆಯಲು ಅನರ್ಹರಾಗಿದ್ದಾರೆ. ಕೂಡಲೇ ಈ ಬಗ್ಗೆ ಮರು ಪರಿಶೀಲಿಸಿ ವರದಿ ನೀಡುವಂತೆ ಗ್ರಾಮ ಸಹಾಯಕರು ಹಾಗೂ ಕಂದಾಯ ನೀರಿಕ್ಷಕರಿಗೆ ಸರ್ಕಾರದಿಂದ ಆದೇಶವಾಗಿದೆ. ಫಲಾನುಭವಿಗಳ ಅರ್ಹತೆಯ ನೈಜತೆಯನ್ನು ಪರಿಶೀಲಿಸಿ ಅಧಿಕಾರಿಗಳು ವರದಿಯನ್ನು ಸರ್ಕಾರಕ್ಕೂ ನೀಡಿದ್ದಾರೆ. ಆದರೆ ಇದರಲ್ಲಿ ಅರ್ಹರಿಗೂ ಪಿಂಚಣಿ ದೊರೆದಿರುವುದು ಕಂಡು ಬಂದಿದೆ.ಸಾಮಾಜಿಕ ಭದ್ರತಾ ಯೋಜನೆಯಲ್ಲಿನ ಹಣವನ್ನೇ ನಂಬಿ ಸಾವಿರಾರು ಬಡ ಜನರು ಬದುಕು ಸಾಗಿಸುತ್ತಿದ್ದಾರೆ. ಅವರ ಪಿಂಚಣಿಗೆ ರಾಜ್ಯ ಸರ್ಕಾರ ಕೊಕ್ಕೆ ಹಾಕಿ ಇನ್ನಷ್ಟು ಮಾನಸಿಕವಾಗಿ ಶೋಷಿಸುವುದು ಸರಿಯಲ್ಲ. ಕೂಡಲೇ ಫಲಾಭವಿಗಳ ಮಾಸಾಶನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತಾಗಬೇಕು.

ರೂಪಾಲಿ ನಾಯ್ಕ ಮಾಜಿ ಶಾಸಕಿ