ಸಾರಾಂಶ
ಗದಗ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿ ಕೊನೆಯ ಸ್ಥಾನ ದಾಖಲಿಸಿದೆ. ಸತತ ಮೂರು ವರ್ಷಗಳಿಂದ ಪಿಯುಸಿ ಫಲಿತಾಂಶ ಕುಸಿಯುತ್ತ ಸಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಜಿಲ್ಲೆಯ ಮಾನವನ್ನು ಬೀದಿಪಾಲು ಮಾಡಿದ್ದಾರೆ ಎನ್ನುವ ಆಕ್ರೋಶ ಕೇಳಿಬರುತ್ತಿದೆ.
ಈ ಬಾರಿ ಗದಗ ಜಿಲ್ಲೆ 32ನೇ ಸ್ಥಾನಕ್ಕೆ ಕುಸಿದಿದ್ದು, ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಪಿಯುಸಿ ಫಲಿತಾಂಶ ಕುಸಿಯುತ್ತಿರುವುದು ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಜಿಲ್ಲೆಯ ಶಿಕ್ಷಣ ಪ್ರೇಮಿಗಳು, ಜನತೆ ತಲೆತಗ್ಗಿಸುವಂತಾಗಿದೆ.ಕಳೆದ ಬಾರಿ 30ನೇ ಸ್ಥಾನ ದಾಖಲಿಸಿದ್ದ ಗದಗ ಜಿಲ್ಲೆ, ಈ ಬಾರಿ ಮತ್ತೆರಡು ಸ್ಥಾನ ಕುಸಿತು ಕಂಡಿದೆ. ಆ ಮೂಲಕ ಸತತ ಮೂರು ವರ್ಷದಿಂದ ಫಲಿತಾಂಶದಲ್ಲಿ ಕುಸಿತದ ಹಾದಿಯಲ್ಲಿಯೇ ಸಾಗುತ್ತಿದೆ. ಸದ್ಯ ಗದಗ ಜಿಲ್ಲೆ ಶೇ. 72.86 ಫಲಿತಾಂಶ ದಾಖಲಿಸಿದೆ. ಕಳೆದ ವರ್ಷ ಶೇ. 66.91 ಪ್ರತಿಶತ ದಾಖಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಫಲಿತಾಂಶದಲ್ಲಿ ಅಲ್ಪ ಸುಧಾರಣೆ ಕಂಡಿದ್ದರೂ ಒಟ್ಟಾರೆ ಫಲಿತಾಂಶ ಮಾತ್ರ ಪ್ರಗತಿ ಕಂಡಿಲ್ಲ.
2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 4,834 ಗಂಡು ಮಕ್ಕಳು, 5,836 ಹೆಣ್ಣುಮಕ್ಕಳು ಸಹಿತ ಒಟ್ಟು 10,670 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 3,043 ಗಂಡು ಮಕ್ಕಳು, 4,731 ಹೆಣ್ಣು ಮಕ್ಕಳು ಸಹಿತ ಒಟ್ಟು 7,774 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ. 62.94ರಷ್ಟು ಗಂಡು ಮಕ್ಕಳು ಉತ್ತೀರ್ಣರಾಗಿದ್ದರೆ, ಶೇ. 81.06ರಷ್ಟು ಹೆಣ್ಣುಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದು, ವಿದ್ಯಾರ್ಥಿಗಳ ಕಳಪೆ ಸಾಧನೆ ಕೂಡಾ ಜಿಲ್ಲೆಯ ಒಟ್ಟು ಫಲಿತಾಂಶದಂತೆಯೇ ಸಾಗಿದೆ.ಸಮಾಧಾನ:
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ತಾಂಡಾದ ನಿವಾಸಿಯಾದ ರವೀನಾ ಸೋಮಪ್ಪ ಲಮಾಣಿ ಕಲಾ ವಿಭಾಗದಲ್ಲಿ 600ಕ್ಕೆ 595 ಅಂಕ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈ ವಿದ್ಯಾರ್ಥಿನಿ ಮೂಲ ಗದಗ ಜಿಲ್ಲೆಯಾಗಿದೆ. ಆದರೆ ಪ್ರಸ್ತುತ ವಿದ್ಯಾರ್ಥಿನಿ , ಧಾರವಾಡ ಕೆಇ ಬೋರ್ಡ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದಾಳೆ. ಆದರೂ ಇದು ಜಿಲ್ಲೆಗೆ ಸಮಾಧಾನ ತಂದು ಕೊಡುವ ವಿಷಯವಾಗಿದೆ.ಪ್ರತಿಭಾ ವಲಸೆ: ಗದಗ ಜಿಲ್ಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೊರತೆ ಇಲ್ಲ. ಆದರೆ ಗದಗ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ, ಹೀಗೆ ಸಾಲು ಸಾಲು ಸಮಸ್ಯೆಗಳಿಂದಾಗಿ ಗದಗ ಜಿಲ್ಲೆಯ ಪಾಲಕರು ತಮ್ಮ ಮಕ್ಕಳನ್ನು ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಓದಿಸುತ್ತಿದ್ದಾರೆ. ಇಲ್ಲಿನ ಹಲವಾರು ಮಕ್ಕಳು ಬೇರೆ ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಗದಗ ಪರಿಸರದಲ್ಲಿ ದ್ವಿತೀಯ ಪಿಯು ಮಟ್ಟಕ್ಕೆ ಉತ್ತಮ ಶಿಕ್ಷಣ ನೀಡುವಂತಹ ವಾತಾವರಣ ನಿರ್ಮಿಸುವಲ್ಲಿ ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಮತ್ತೊಮ್ಮೆ ಸಾಬೀತಾಗಿದೆ. ಜಿಲ್ಲೆ ದ್ವಿತೀಯ ಪಿಯು ಫಲಿತಾಂಶ ಕೊನೆಯ ಸ್ಥಾನಕ್ಕೆ ಬಂದಿರುವುದು ಬೇಸರ ತಂದಿದೆ. ಇದಕ್ಕೆ ಅನೇಕ ಕಾರಣಗಳಿವೆ. ಆ ಬಗ್ಗೆ ಅವಲೋಕನ ನಡೆಸಿ, ಫಲಿತಾಂಶ ಸುಧಾರಣೆಗೆ ಕಠಿಣ ಪ್ರಯತ್ನ ಮಾಡುತ್ತೇವೆ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಂ. ಕುರ್ತಕೋಟಿ ಹೇಳಿದರು.