ಅಧಿವೇಶನದಲ್ಲಿ ಮಾರ್ಧನಿಸಲಿ ತೊಗರಿ ಪರಿಹಾರದ ಕೂಗು

| Published : Dec 11 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಂದರೆ ಬಂಪರ್, ಹೋದರೆ ಪಾಪರ್ ಎಂಬಂತಾಗಿರುವ ರೈತರ ಬಾಳು, ಈ ಬಾರಿ ತೊಗರಿ ಬೆಳೆಯ ನಷ್ಟಕ್ಕೆ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಉತ್ತರ ಕರ್ನಾಟಕದಾದ್ಯಂತ ಮುಂಗಾರು ಹಂಗಾಮಿನಲ್ಲಿ ಭರ್ಜರಿಯಾಗಿ ತೊಗರಿ ಬಿತ್ತನೆ ಮಾಡಿದ ರೈತರ ಜಮೀನಿನಲ್ಲಿ ಆಳೆತ್ತರಕ್ಕೆ ಬೆಳೆದ ತೊಗರಿ ಗಿಡಗಳಲ್ಲಿ ಫಸಲು ಇಲ್ಲದೇ ಅನ್ನದಾತರು ಕಂಗೆಟ್ಟು ಹೋಗಿದ್ದಾರೆ. ಸರ್ಕಾರದಿಂದ ವಿತರಿಸಿದ ತೊಗರಿ ಬೀಜಗಳಲ್ಲೇ ಲೋಪವಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಬಂದರೆ ಬಂಪರ್, ಹೋದರೆ ಪಾಪರ್ ಎಂಬಂತಾಗಿರುವ ರೈತರ ಬಾಳು, ಈ ಬಾರಿ ತೊಗರಿ ಬೆಳೆಯ ನಷ್ಟಕ್ಕೆ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಉತ್ತರ ಕರ್ನಾಟಕದಾದ್ಯಂತ ಮುಂಗಾರು ಹಂಗಾಮಿನಲ್ಲಿ ಭರ್ಜರಿಯಾಗಿ ತೊಗರಿ ಬಿತ್ತನೆ ಮಾಡಿದ ರೈತರ ಜಮೀನಿನಲ್ಲಿ ಆಳೆತ್ತರಕ್ಕೆ ಬೆಳೆದ ತೊಗರಿ ಗಿಡಗಳಲ್ಲಿ ಫಸಲು ಇಲ್ಲದೇ ಅನ್ನದಾತರು ಕಂಗೆಟ್ಟು ಹೋಗಿದ್ದಾರೆ. ಸರ್ಕಾರದಿಂದ ವಿತರಿಸಿದ ತೊಗರಿ ಬೀಜಗಳಲ್ಲೇ ಲೋಪವಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಸಮೀಕ್ಷೆ ನಡೆಸಿದ ವಿಜ್ಞಾನಿಗಳ ತಂಡ ನೂರೆಂಟು ಕಾರಣಗಳನ್ನು ನೀಡಿ ಕೈ ತೊಳೆದುಕೊಂಡಿದೆ.ತೊಗರಿಯನ್ನು ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲಿ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ತೊಗರಿ ಬೆಳೆದು ಕಲಬುರಗಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, 5.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆದ ವಿಜಯಪುರ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕೊಪ್ಪಳ, ಬೆಳಗಾವಿ, ಹೊಸಪೇಟೆ ಸೇರಿದಂತೆ ಉತ್ತರದ ಏಳೆಂಟು ಜಿಲ್ಲೆಗಳಲ್ಲಿ ತೊಗರಿ ಬಿತ್ತನೆ ಮಾಡಲಾಗುತ್ತದೆ. ಈ ಎಲ್ಲ ಜಿಲ್ಲೆಗಳಲ್ಲಿಯೂ ಬಹುತೇಕ ಈ ಬಾರಿ ತೊಗರಿ ಬೆಳೆ ಕೈಕೊಟ್ಟಿದ್ದು, ಅನ್ನದಾತರು ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ.

ಏಜೆನ್ಸಿ ವಿತರಿಸಿದ ಬೀಜಗಳಲ್ಲಿ ತೊಂದರೆ:

ಖಾಸಗಿ ಏಜೆನ್ಸಿಗಳು ವಿತರಿಸಿದ ಟಿಎಸ್‌-3ಆರ್‌, ಜಿಆರ್‌ಜಿ-152, ಜಿಆರ್‌ಜಿ-811 ತಳಿಯ ತೊಗರಿ ಬೀಜಗಳನ್ನು ಕೃಷಿ ಇಲಾಖೆಯ ಮೂಲಕ ರೈತರಿಗೆ ವಿತರಿಸಲಾಗಿತ್ತು. ಕೃಷಿ ಸಂಪರ್ಕ ಕೇಂದ್ರಗಳಿಂದ ಬೀಜ ತಂದು ರೈತರು ಬಿತ್ತನೆ ಮಾಡಿದ ತೊಗರಿ ಬೆಳೆ 6 ರಿಂದ 8 ಅಡಿಯವರೆಗೆ ಹುಲುಸಾಗಿ ಬೆಳೆದಿದೆ. ಆದರೆ ಹೂ ಬಿಡುವ ಸಮಯಕ್ಕೆ ಹೂ ಬಿಟ್ಟಿಲ್ಲ, ಕಾಳು ಕಟ್ಟಿಲ್ಲ. ಹೀಗಾಗಿ ಎಕರೆಗೆ 7 ರಿಂದ 8 ಕ್ವಿಂಟಲ್ ಬರಬೇಕಿದ್ದ ಇಳುವರಿ 1 ರಿಂದ 2 ಕ್ವಿಂಟಲ್ ಸಹ ಬರದಂತಾಗಿದೆ.

ತಾಲೂಕುವಾರು ಎಲ್ಲೆಲ್ಲಿ ಎಷ್ಟು ಬಿತ್ತನೆ?:

ಇಂಡಿ 1,21,426 ಹೆಕ್ಟೇರ್, ಮುದ್ದೇಬಿಹಾಳ 1,15,766 ಹೆಕ್ಟೇರ್, ಸಿಂದಗಿ 1,09,486 ಹೆಕ್ಟೇರ್, ವಿಜಯಪುರ 1,06,614 ಹೆಕ್ಟೇರ್, ಬಸವನ ಬಾಗೇವಾಡಿ 81,271 ಹೆಕ್ಟೇರ್ ಸೇರಿ ಜಿಲ್ಲಾದ್ಯಂತ ಒಟ್ಟು 5,34,565 ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿದೆ. ದುರಾದೃಷ್ಠ ಎಂದರೆ ಅದರಲ್ಲಿ ಶೇ.81 ರಷ್ಟು ತೊಗರಿ ಬೆಳೆ ಹಾನಿಯಾಗಿದೆ. ಪ್ರತಿ ಕ್ವಿಂಟಲ್‌ಗೆ ₹ 7 ಸಾವಿರದಂತೆ ಲೆಕ್ಕ ಹಾಕಿದರೂ ರೈತರಿಗೆ 4 ಸಾವಿರ ಕೋಟಿ ಹಾನಿಯಾಗಲಿದೆ.

ವಿಜ್ಞಾನಿಗಳ ಸಮೀಕ್ಷೆ ಏನು?:

ಧಾರವಾಡ ಕೃಷಿ ವಿವಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಐವರು ವಿಜ್ಞಾನಿಗಳು ಜಿಲ್ಲೆಯಲ್ಲಿನ 17 ಗ್ರಾಮಗಳ 28 ಕ್ಷೇತ್ರಗಳಿಗೆ ಭೇಟಿ ನೀಡಿ ತೊಗರಿ ಬೆಳೆಯ ಸಮೀಕ್ಷೆ ನಡೆಸಿದ್ದಾರೆ. ಅವರ ಸಮೀಕ್ಷೆಯಲ್ಲಿ ಹೂ ಬಿಡುವಾಗ ಮಂಜಿನ ಬಾಧೆಯಾಗಿರುವುದು, ಕೆಲವು ಕಡೆ ತೇವಾಂಶ ಹೆಚ್ಚಾಗಿದ್ದರೆ ಕೆಲವು ಕಡೆ ತೇವಾಂಶ ಕಡಿಮೆಯಾಗಿದೆ. ಕಡಿಮೆ ಆಳಕ್ಕೆ ಬಿತ್ತಿರುವುದು, ದಟ್ಟವಾಗಿ ಬಿತ್ತಿರುವುದು, ಕೀಟನಾಶಕ ಸಿಂಪಡೆಣೆ ಮಾಡಿರುವುದು ಇತ್ಯಾದಿ ಕಾರಣಗಳಿಂದಾಗಿ ತೊಗರಿ ಬೆಳೆಯು ಚೆನ್ನಾಗಿ ಬಂದಿದ್ದರೂ ಸರಿಯಾಗಿ ಹೂ-ಕಾಯಿ ಕಟ್ಟಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

--------------

ಕೋಟ್‌

ಉತ್ತರ ಕರ್ನಾಟಕದಲ್ಲಿ ತೊಗರಿ ಬೆಳೆದ ಎಲ್ಲ ಜಿಲ್ಲೆಗಳಲ್ಲೂ ಸಹ ಈ ಬಾರಿ ಹಾನಿಗೊಳಗಾಗಿದೆ. ಹೀಗಾಗಿ ಚಳಿಗಾಲದ ಅಧಿವೇಶನದಲ್ಲಿ ಉತ್ತರದ ಪ್ರಮುಖ ಸಮಸ್ಯೆಯಾಗಿರುವ ತೊಗರಿ ಬೆಳೆಯ ಗೋಲಮಾಲ್ ಕುರಿತು ಚರ್ಚೆ ಆಗಬೇಕಿದೆ. ಈ ಭಾಗದ ಎಲ್ಲ ಶಾಸಕರು ಧ್ವನಿಯೆತ್ತಿ ತಮ್ಮ ಕ್ಷೇತ್ರಗಳ ರೈತರಿಗೆ ನ್ಯಾಯ ಕೊಡಿಸಬೇಕಿದೆ.

- ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕಸರ್ಕಾರ ಬೀಜ ವಿತರಣಾ ಕಂಪನಿಗಳೊಂದಿಗೆ ಸೇರಿ ರೈತರಿಗೆ ಅನ್ಯಾಯ ಮಾಡಿದ್ದರಿಂದಲೇ ಇಂದು ರೈತರಿಗೆ ಈ ಪರಿಸ್ಥಿತಿ ಬಂದಿದೆ. ತಕ್ಷಣವೇ ಕಳಪೆ ಬೀಜ ವಿತರಿಸಿದ ಕಂಪನಿಗಳನ್ನು ಬ್ಲಾಕ್ ಮಾಡಬೇಕು. ಜೊತೆಗೆ ರಾಜ್ಯ ಸರ್ಕಾರ ಹಾನಿಗೊಳಗಾದ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಬೇಕು. ನ್ಯಾಯ ಸಿಗುವ ವರೆಗೂ ರೈತರೊಂದಿಗೆ ನಾವು ನಿಂತು ಹೋರಾಟ ಮಾಡುತ್ತೇವೆ.

- ಗುರುಲಿಂಗಪ್ಪ ಅಂಗಡಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ