ಇಂಡಿಗನತ್ತ ಗ್ರಾಮದಲ್ಲಿ ಇನ್ನೂ ಘಟನೆಯ ಕರಿಛಾಯೆ

| Published : May 17 2024, 12:32 AM IST

ಇಂಡಿಗನತ್ತ ಗ್ರಾಮದಲ್ಲಿ ಇನ್ನೂ ಘಟನೆಯ ಕರಿಛಾಯೆ
Share this Article
  • FB
  • TW
  • Linkdin
  • Email

ಸಾರಾಂಶ

ಏ.26ರಂದು ಇಂಡಿಗನತ್ತ ಗ್ರಾಮದಲ್ಲಿ ನಡೆದ ಇವಿಎಂ ಧ್ವಂಸ ಪ್ರಕರಣ, ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 46 ಮಂದಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಗ್ರಾಮದಲ್ಲಿ ಇನ್ನೂ ಘಟನೆಯ ಕರಿಛಾಯೆ ಮನೆ ಮಾಡಿದೆ.

ಜಿ. ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಏ.26ರಂದು ಇಂಡಿಗನತ್ತ ಗ್ರಾಮದಲ್ಲಿ ನಡೆದ ಇವಿಎಂ ಧ್ವಂಸ ಪ್ರಕರಣ, ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 46 ಮಂದಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಗ್ರಾಮದಲ್ಲಿ ಇನ್ನೂ ಘಟನೆಯ ಕರಿಛಾಯೆ ಮನೆ ಮಾಡಿದೆ.ಇಂಡಿಗನತ್ತ ಗ್ರಾಮದಲ್ಲಿ ಚುನಾವಣಾ ವೇಳೆ ನಡೆದ ಘರ್ಷಣೆಯಿಂದ ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದರೂ ಅಧಿಕಾರಿಗಳ ಭೇಟಿ ಸಾಂತ್ವನ, ಸವಲತ್ತು ವಿತರಣೆಯ ಭರವಸೆಯ ಮಹಾಪರ್ವ ಹರಿದು ಬಂದಿದ್ದರೂ ಗ್ರಾಮದಲ್ಲಿ ಇನ್ನು ಘಟನೆಯ ಬಗ್ಗೆ ಮೌನ ಆವರಿಸಿದೆ.

ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಪೊಲೀಸ್ ಠಾಣಾ ಸರಹದ್ದಿನ ಇಂಡಿಗನತ್ತ ಗ್ರಾಮದಲ್ಲಿ 120ಕ್ಕೂ ಹೆಚ್ಚು ಮನೆಗಳಿದ್ದು 800ಕ್ಕೂ ಹೆಚ್ಚು ಜನ ವಾಸಿಸುತ್ತಿರುವ ಗ್ರಾಮದಲ್ಲಿ 146 ರ ಮತಗಟ್ಟೆ ಧ್ವಂಸ ಪ್ರಕರಣದಿಂದ 20 ಮಹಿಳೆಯರು, 26 ಪುರುಷರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ತಮ್ಮ ಕುಟುಂಬದ ವಯಸ್ಸಾದವರು ಮಕ್ಕಳು, ಗರ್ಭಿಣಿ ಮತ್ತು ಬಾಣತಿಯರು ಸೇರಿದಂತೆ ಗ್ರಾಮದಲ್ಲಿರುವ ಬೆರಳೆಣೆಕೆಯಷ್ಟು ನಿವಾಸಿಗಳು ತಮ್ಮವರಿಗಾಗಿ ಹಂಬಲಿಸುತ್ತಿದ್ದಾರೆ.

ಅಧಿಕಾರಿಗಳ ದಂಡು: ಪ್ರಕರಣ ನಡೆದು 23 ದಿನಗಳು ಕಳೆದಿರುವ ಇಂಡಿಗನತ್ತ ಗ್ರಾಮದ ನಿವಾಸಿಗಳು ತಮ್ಮ ಕುಟುಂಬ ಹಾಗೂ ಜನಜಾನುವಾರುಗಳನ್ನು ತೊರೆದು ಬಂಧನ ಭೀತಿಯಿಂದ ಗ್ರಾಮವನ್ನು ತೊರೆದಿದ್ದು ಗ್ರಾಮದಲ್ಲಿ ಘಟನೆಯ ಬಗ್ಗೆ 46 ಜನರನ್ನು ಬಂಧಿಸಿರುವ ಪೊಲೀಸರು ಉಳಿದಂತೆ ಗ್ರಾಮದಲ್ಲಿ ಶಾಂತಿ ನೆಲೆಸಲು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಒಂದೆಡೆ ತಮ್ಮವರನ್ನು ದೂರ ಮಾಡಿಕೊಂಡು ದಾರಿ ನೋಡುತ್ತಿರುವ ನಿವಾಸಿಗಳಿಗೆ ಸಾಂತ್ವನ ಹೇಳಿ, ಗ್ರಾಮದಲ್ಲಿ ಇರುವವರಿಗೆ ಊಟದ ವ್ಯವಸ್ಥೆ, ಸವಲತ್ತು ವಿತರಿಸುವ ಭರವಸೆ ನೀಡಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಇಷ್ಟಾದರೂ ಗ್ರಾಮದಲ್ಲಿ ಇನ್ನೂ ಬಂಧನ ಭೀತಿಯಿಂದ ಗ್ರಾಮ ತೊರದಿದ್ದು ಜನ ಜಾನುವಾರುಗಳು ಪರಿತಪಿಸುವಂತ ಪರಿಸ್ಥಿತಿ ಇನ್ನೂ ಗ್ರಾಮದಲ್ಲಿ ನೆಲೆಸಿದೆ.

ಶಿಕ್ಷಣ, ಆರೋಗ್ಯ ಬೇಕಾಗಿದೆ ಇಲ್ಲಿನ ಜನತೆಗೆ: ಮಲೆ ಮಹದೇಶ್ವರನ ಬೆಟ್ಟದ ತಪ್ಪಲಿನ ಕುಗ್ರಾಮ ಇಂಡಿಗನತ್ತ ಗ್ರಾಮದಲ್ಲಿ ನೆಲೆಸಿರುವ ಜನತೆಗೆ, ನಿರುದ್ಯೋಗಿ ಯುವಕರಿಗೆ ಸರ್ಕಾರದ ಅಭಯದ ಜೊತೆಗೆ ಅನಕ್ಷರತೆಯಿಂದ ಕೂಡಿರುವ ಜನತೆಗೆ ಶಿಕ್ಷಣದ ಅರಿವು ಮತ್ತು ಆರೋಗ್ಯ ವ್ಯವಸ್ಧೆ ಕಲ್ಪಿಸಿ ಇಲ್ಲಿನ ಜನತೆಗೆ ಸೂಕ್ತ ಅರಿವು ನೆರವು ನೀಡಲು ಸರ್ಕಾರ ಮುಂದಾಗಬೇಕಾಗಿದೆ.

ಜಾಮೀನು ಮಂಜೂರು: ಏ.26ರಂದು ನಡೆದ ಇವಿಎಂ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ 46 ಜನರಿಗೆ ಜಾಮೀನು ಮಂಜೂರಾತಿ ದೊರೆತಿರುವುದು ಗ್ರಾಮದ ಜನತೆಗೆ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ ಇದರಿಂದಾಗಿ ಮನೆಮಠ ಬಿಟ್ಟು ದೂರಾಗಿರುವ ತಮ್ಮವರು ಬರುವ ನಿರೀಕ್ಷೆಯಲ್ಲಿ ಗ್ರಾಮದ ಜನತೆ ಇರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಪ್ರಕರಣಕ್ಕೆ ಬೇಕಾದ ಐದಾರು ಮಂದಿ ಬಗ್ಗೆ ಪೊಲೀಸರು ಗ್ರಾಮದಲ್ಲಿ ನಿಗಾ ವಹಿಸಿದ್ದಾರೆ. ಗಲಭೆ ಪ್ರಕರಣದಲ್ಲಿ ಹಲ್ಲೆಯಿಂದ ಭಯಭೀತರಾಗಿರುವ ಮೆಂದರೆ ಗ್ರಾಮದ ಜನತೆಗೆ ರಾತ್ರಿ ಹಗಲು ಭದ್ರತೆ ಮುಂದುವರೆದಿದೆ.