ಕಾಲರಾ ಉಲ್ಬಣ ವರದಿಯ ಬೆನ್ನಲೆ ಗೋಪನಹಳ್ಳಿಗೆ ಅಧಿಕಾರಿಗಳ ದೌಡು

| Published : Jun 03 2024, 12:30 AM IST

ಸಾರಾಂಶ

ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಚಂದ್ರಶೇಖರ ಕಂಬಳಿಮಠ, ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ಇಒ ಬಿ.ಎಸ್.ಲಕ್ಷ್ಮಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರಿನಿಂದ ಉಂಟಾದ ವಾಂತಿ, ಬೇಧಿ ಪ್ರಕರಣಗಳು ವರದಿಯಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ತಾಲ್ಲೂಕು ಆರೋಗ್ಯ ಇಲಾಖೆ ಮುಂದಾಗಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಚಂದ್ರಶೇಖರ ಕಂಬಳಿಮಠ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಬಿ.ಎಸ್. ಲಕ್ಷ್ಮಣ್, ಎಇಒ ಸಂತೋಷ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ತಿಪ್ಪೇಸ್ವಾಮಿ ಹಾಗೂ ಆಸ್ಪತ್ರೆ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ಮನೆ, ಮೆನೆಗೂ ತೆರಳಿ ಗ್ರಾಮಸ್ಥರಿಗೆ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದರಲ್ಲದೆ, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೀಕಾಗಿದ್ದು, ಇದರಿಂದ ಕಲುಷಿತ ನೀರು ಸರಬರಾಜಾಗಿ ನೀರು ಕುಡಿದ ಗ್ರಾಮಸ್ಥರು ಅಸ್ವಸ್ಥರಾಗಿದ್ದರು. ಈ ಬಗ್ಗೆ ಪತ್ರಿಕಾ ವರದಿ ಬಂದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಕುಡಿಯುವ ನೀರಿನ ಪೈಪನ್ನು ಬದಲಾಯಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಾನುವಾರವೂ ಸಹ ನಾಲ್ಕಕ್ಕೂ ಹೆಚ್ಚು ವಾಂತಿಬೇಧಿ ಪೀಡಿತ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಜಿಲ್ಲಾ ಸರ್ವೆಕ್ಷಣಾಧಿಕಾರಿ ಚಂದ್ರಶೇಖರ ಕಂಬಳಿಮಠ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ವಾಂತಿ, ಬೇಧಿ ಪ್ರಕರಣ ನಿಯಂತ್ರಿಸುವಲ್ಲಿ ವೈದ್ಯರು ಮತ್ತು ಸಿಬ್ಬಂದಿ ವರ್ಗ ಸಾಕಷ್ಟು ಪರಿಶ್ರಮವಹಿಸಿದ್ದಾರೆ. ಕಲುಷಿತ ನೀರಿನಿಂದ ಉಂಟಾದ ಈ ಪ್ರಮಾದವನ್ನು ನಿಯಂತ್ರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ವರ್ಗ ಇಂದೂ ಸಹ ಗ್ರಾಮದ ಆಸ್ಪತ್ರೆಯಲ್ಲಿ ಮೊಕ್ಕಾಂ ಮಾಡಲು ಸೂಚನೆ ನೀಡಿದೆ. ಆರೋಗ್ಯ ಇಲಾಖೆ ಜಾಗೃತಿಯ ನಡುವೆಯೂ ಸಹ ಉದಾಸೀನತೆಯಿಂದ ಇದ್ದರೆ ಇಂತಹ ಪ್ರಮಾದಗಳು ಹೆಚ್ಚುತ್ತವೆ. ಆದ್ದರಿಂದ ಎಲ್ಲರೂ ಜಾಗೃತೆಯಿಂದ ಇರಬೇಕು ಎಂದರು.