ವರ್ಷದಲ್ಲಿ ಕೆ.ಆರ್. ಕ್ಷೇತ್ರದ ಅಭಿವೃದ್ಧಿಗೆ 700 ಕೋಟಿ ವೆಚ್ಚ:ಶ್ರೀವತ್ಸ

| Published : May 15 2024, 01:33 AM IST

ವರ್ಷದಲ್ಲಿ ಕೆ.ಆರ್. ಕ್ಷೇತ್ರದ ಅಭಿವೃದ್ಧಿಗೆ 700 ಕೋಟಿ ವೆಚ್ಚ:ಶ್ರೀವತ್ಸ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದ ಸಾರ್ವಜನಿಕರೊಂದಿಗೆ ಸತತ ಸಂಪರ್ಕದಲ್ಲಿ ಇರಬೇಕೆಂಬ ಹಿನ್ನೆಲೆಯಲ್ಲಿ ಮನೆ ಮನೆಗಳಿಗೆ ಪಾದಯಾತ್ರೆ ಮೂಲಕ ತೆರಳಿ ನನ್ನ ದೂರವಾಣಿ ಸಂಖ್ಯೆ ಹಾಗೂ ಆಪ್ತ ಸಹಾಯಕರ ದೂರವಾಣಿ ಸಂಖ್ಯೆ ಮತ್ತು ಕಚೇರಿ ವಿಳಾಸವುಳ್ಳ ಸುಮಾರು 60 ಸಾವಿರಕ್ಕೂ ಹೆಚ್ಚು ಕಾರ್ಡ್ ಗಳನ್ನು ವಿತರಿಸಿ, ಆ ಮೂಲಕ ಹಲವಾರು ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ ಸೇರಿ ಪರಿಹರಿಸಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕಳೆದ ಒಂದು ವರ್ಷದ ಅವಧಿಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ 700 ಕೋಟಿಗೂ ಹೆಚ್ಚಿನ ಅನುದಾನ ವೆಚ್ಚ ಮಾಡಲಾಗಿದೆ ಎಂದು ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ಶಾಸಕರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದು ಒಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡಿರುವ ಹಣವೆಲ್ಲ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿರುವುದು. ಈಗಿನ ಸರ್ಕಾರ ಕೇವಲ 1.50 ಕೋಟಿ ರೂ. ಮಾತ್ರ ನೀಡಿದೆ. ಇನ್ನೂ ಶಾಸಕರ ನಿಧಿಯನ್ನೇ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಕ್ಷೇತ್ರದ ಸಾರ್ವಜನಿಕರೊಂದಿಗೆ ಸತತ ಸಂಪರ್ಕದಲ್ಲಿ ಇರಬೇಕೆಂಬ ಹಿನ್ನೆಲೆಯಲ್ಲಿ ಮನೆ ಮನೆಗಳಿಗೆ ಪಾದಯಾತ್ರೆ ಮೂಲಕ ತೆರಳಿ ನನ್ನ ದೂರವಾಣಿ ಸಂಖ್ಯೆ ಹಾಗೂ ಆಪ್ತ ಸಹಾಯಕರ ದೂರವಾಣಿ ಸಂಖ್ಯೆ ಮತ್ತು ಕಚೇರಿ ವಿಳಾಸವುಳ್ಳ ಸುಮಾರು 60 ಸಾವಿರಕ್ಕೂ ಹೆಚ್ಚು ಕಾರ್ಡ್ ಗಳನ್ನು ವಿತರಿಸಿ, ಆ ಮೂಲಕ ಹಲವಾರು ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ ಸೇರಿ ಪರಿಹರಿಸಲಾಗಿದೆ ಎಂದರು.

940 ಮಂದಿಗೆ ಆಶ್ರಯ ಗುಂಪು ಮನೆ

ಕ್ಷೇತ್ರದ ವ್ಯಾಪ್ತಿಯ ಲಲಿತಾದ್ರಿಪುರದಲ್ಲಿ ಆಶ್ರಯ ಗುಂಪು ಯೋಜನೆಯಡಿ ಕ್ಷೇತ್ರದ 940 ಮಂದಿಗೆ ಹಾಗೂ ವರುಣ ಕ್ಷೇತ್ರದ 500 ಮಂದಿ ಫಲಾನುಭವಿಗಳಿಗೆ ಈ ಯೋಜನೆಯಲ್ಲಿ ಮನೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಲಲಿತಾದ್ರಿಪುರ ಕೆ.ಆರ್. ಕ್ಷೇತ್ರದಲ್ಲಿದ್ದರೂ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ, ಇಲ್ಲಿ ಎರಡು ಕ್ಷೇತ್ರದ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ 13 ಎಕರೆ ಜಾಗವನ್ನು ಪಡೆದು 202 ಕೋಟಿ ರೂ. ವೆಚ್ಚದಲ್ಲಿ ಆಶ್ರಯ ಗುಂಪು ಮನೆ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು.

ಕೆ.ಆರ್. ಕ್ಷೇತ್ರದಲ್ಲಿ ಈಗಾಗಲೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರೆಲ್ಲಾ ತಲಾ 75 ಸಾವಿರ ರೂ. ತಮ್ಮ ವಂತಿಗೆಯಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಪಾವತಿಸಿದ್ದಾರೆ ಎಂದರು.

ರೌಡಿಗಳ ಅಟ್ಟಹಾಸ

ಇತ್ತೀಚಿನ ದಿನಗಳಲ್ಲಿ ಕೆಆರ್ ಕ್ಷೇತ್ರದಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ, ಕೊಲೆಗಳು ನಡೆಯುತ್ತಿವೆ. ಬೀದಿ ಬದಿ ವ್ಯಾಪಾರಿಗಳಿಂದಲೂ ರೋಲ್ ಕಾಲ್ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಇಂತಹ ವರ್ತನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ರೌಡಿ ಚಟುವಟಿಕೆಗಳು ಮುಂದುವರಿದಿದ್ದೇ ಆದಲ್ಲಿ ಆಯಾ ಠಾಣೆಯ ಇನ್ಸ್ ಪೆಕ್ಟರ್ ಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಪಾಲಿಕೆ ಅಧಿಕಾರಿಗಳು ನನ್ನ ವೇಗಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ, ಸೂಕ್ತವಾಗಿ ಕೆಲಸ ಮಾಡದವರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.

ಮಾಜಿ ಮೇಯರ್ ಗಳಾದ ಶಿವಕುಮಾರ್, ಸುನಂದಾ ಪಾಲನೇತ್ರ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್, ಎಚ್.ಜಿ. ಗಿರಿಧರ್, ಮೋಹನ್, ಮುಖಂಡರಾದ ಜೋಗಿ ಮಂಜು, ಗೋಪಾಲ್ ರಾಜೇ ಅರಸ್ ಮೊದಲಾದವರು ಇದ್ದರು.

----

ಬಾಕ್ಸ್...

ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ

ಕಾಂಗ್ರೆಸ್ ಸರ್ಕಾರದಲ್ಲಿ ಕೆ.ಆರ್. ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ. ಕೆ.ಆರ್. ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದ 45 ಕೋಟಿಯನ್ನು ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಕ್ಕೆ ನಗರ ಪಾಲಿಕೆ ಆಯುಕ್ತರು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸ್ಪೀಕರ್ ಅವರ ಗಮನ ಸೆಳೆದಿದ್ದೇನೆ. ಕೂಡಲೇ ಒಂದು ಕ್ಷೇತ್ರಕ್ಕೆ ಮೀಸಲಾದ ಹಣವನ್ನು ಬೇರೊಂದು ಕ್ಷೇತ್ರಕ್ಕೆ ವರ್ಗಾಯಿಸಬಾರದೆಂದು ಅವರು ಸೂಚಿಸಿದ್ದಾರೆ. ಹೀಗಾಗಿ, ಈ ಹಣ ಮುಂದಿನ ತಿಂಗಳಲ್ಲಿ ಕೆ.ಆರ್. ಕ್ಷೇತ್ರಕ್ಕೆ ವಾಪಸ್ಸಾಗಲಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

----

ಕೋಟ್...

ಕೆ.ಆರ್. ಕ್ಷೇತ್ರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಸುಯೇಜ್ ಫಾರಂ ಎಕ್ಸೆಲ್ ಪ್ಲಾಂಟ್ ನಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಇನ್ನೆರಡು ವರ್ಷದಲ್ಲಿ 7 ಲಕ್ಷ ಟನ್ ಕಸ ತೆರವುಗೊಳಿಸಲಾಗುವುದು. ಇದಕ್ಕಾಗಿ 60 ಕೋಟಿ ರೂ. ಟೆಂಡರ್ ನೀಡಲಾಗಿದೆ.

- ಟಿ.ಎಸ್. ಶ್ರೀವತ್ಸ, ಶಾಸಕರು