ಸಾರಾಂಶ
ಕನ್ನಡಪ್ರಭವಾರ್ತೆ ತೀರ್ಥಹಳ್ಳಿತಾಲೂಕಿನ ಮೇಲಿನ ಕುರುವಳ್ಳಿ ಹಾರೋಗುಳಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚುತ್ತಿರುವ ಕಾರಣ ಜನರು ಭಯಭೀತರಾಗಿದ್ದು, ಗ್ರಾಮದಲ್ಲಿ ತಿರುಗಾಡುವುದಕ್ಕೂ ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.ಕಾಡುಕೋಣಗಳಿಂದಾಗಿ ಆಗುತ್ತಿರುವ ಸಮಸ್ಯೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹಾರೋಗುಳಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಸಿತೋಟ ಗ್ರಾಮದ ಹಿರಿಯ ನಾಗರಿಕ ರತ್ನಾಕರ್, ಕಾಡುಕೋಣಗಳ ಹಾವಳಿ ಕುರಿತಂತೆ ಯಾರಲ್ಲಿ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂದೇ ತಿಳಿಯುತ್ತಿಲ್ಲಾ. ಹಗಲು ಹೊತ್ತಿನಲ್ಲೇ ಮನೆಗಳ ಆಸುಪಾಸಿನಲ್ಲೇ ಸುತ್ತಾಡುತ್ತಿರುವ ಕೋಣಗಳ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಗ್ರಾಮಸ್ಥರ ಮನವಿಗೆ ಕ್ಯಾರೇ ಎನ್ನುತ್ತಿಲ್ಲಾ ಎಂದಿದಿದ್ದಾರೆ.ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡುಕೋಣಗಳ ಹಾವಳಿಯಿಂದಾಗಿ ಮನೆಯಿಂದ ಹೊರ ಬರುವುದಕ್ಕೂ, ಗ್ರಾಮದಲ್ಲಿ ತಿರುಗಾಡುವುದಕ್ಕೂ ಭಯವಾಗುತ್ತಿದೆ. ಆನೆ ಗಾತ್ರದ ಕೋಣಗಳು ಮೊದಮೊದಲು ಈ ಮೊದಲು ರಾತ್ರಿ ಹೊತ್ತಿನಲ್ಲಿ ಅಡಕೆ ತೋಟಗಳಿಗೆ ಗದ್ದೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದವು. ಆದರೆ ಇತ್ತೀಚಿಗೆ ಹಗಲು ಹೊತ್ತಿನಲ್ಲೇ ಮನೆಗಳ ಹತ್ತಿರವೇ ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಗಮನ ಹರಿಸಬೇಕಿದೆ ಎಂದೂ ಆಗ್ರಹಿಸಿದ್ದಾರೆ.