ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎದೆಗುಂದದೆ ಮುನ್ನುಗ್ಗಿದರೆ ಯಶಸ್ಸು ಖಚಿತ: ಎ.ದೇವರಾಜು

| Published : Feb 16 2025, 01:45 AM IST

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎದೆಗುಂದದೆ ಮುನ್ನುಗ್ಗಿದರೆ ಯಶಸ್ಸು ಖಚಿತ: ಎ.ದೇವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೆಲ್ಲಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಇರುತ್ತಿರಲಿಲ್ಲ. ಇತ್ತೀಚಿಗೆ ತುಂಬಾ ತರಬೇತಿ ಸಂಸ್ಥೆಗಳಿವೆ. ಆದರೆ, ದುಬಾರಿ ಶುಲ್ಕ ವಿದ್ಯಾರ್ಥಿಗಳಿಗೆ ಭರಿಸಲಾಗದೆ ತರಬೇತಿ ಪಡೆಯಲು ಆಗುತ್ತಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಮುಕ್ತ ವಿವಿಯ ತರಬೇತಿ ಕೇಂದ್ರವು ಬಹಳ ಪ್ರಯೋಜನಕಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸ್ಪರ್ಧೆಗಳು ಹೆಚ್ಚಿದೆ. ಆದರೂ ಯಾರು ಎದೆಗುಂದದೆ ಮುನ್ನುಗ್ಗಿದರೆ ಯಶಸ್ಸು ಖಚಿತ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕಾದರೆ ಆಸಕ್ತಿ ಬಹಳ ಮುಖ್ಯ ಎಂದು ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜು ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಬ್ಯಾಂಕಿಂಗ್ ತರಬೇತಿ ಶಿಬಿರದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಠಿಣವಾಗಿದೆ. ಪರೀಕ್ಷೆ ಎದುರಿಸಲು ತಯಾರಿ ಜೊತೆಗೆ ಅಸಕ್ತಿ ಬಹಳ ಮುಖ್ಯವಾಗಿದೆ ಎಂದರು.

ಹಿಂದೆಲ್ಲಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಇರುತ್ತಿರಲಿಲ್ಲ. ಇತ್ತೀಚಿಗೆ ತುಂಬಾ ತರಬೇತಿ ಸಂಸ್ಥೆಗಳಿವೆ. ಆದರೆ, ದುಬಾರಿ ಶುಲ್ಕ ವಿದ್ಯಾರ್ಥಿಗಳಿಗೆ ಭರಿಸಲಾಗದೆ ತರಬೇತಿ ಪಡೆಯಲು ಆಗುತ್ತಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಮುಕ್ತ ವಿವಿಯ ತರಬೇತಿ ಕೇಂದ್ರವು ಬಹಳ ಪ್ರಯೋಜನಕಾರಿಯಾಗಿದೆ ಎಂದು ಅವರು ಶ್ಲಾಘಿಸಿದರು.

ವಿದ್ಯಾರ್ಥಿಗಳು ಶ್ರದ್ದೆ ಹಾಗೂ ನಿರಂತರ ಪ್ರಯತ್ನದಿಂದ ತಮ್ಮ ಗುರಿ ಮುಟ್ಟುವ ತನಕ ಅಭ್ಯಾಸವನ್ನು ಸಮಸ್ಯೆಗೆ ಹೆದರಿ ನಿಲ್ಲಿಸಬಾರದು. ಜೊತೆಗೆ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಎಲ್ಲಾ ಪರೀಕ್ಷೆಗಳನ್ನು ಧೈರ್ಯವಾಗಿ ತೆಗೆದುಕೊಂಡು ಎದುರಿಸಿ ಎಂದರು.

ಪರೀಕ್ಷೆ ಎದುರಿಸಲು ನಿಮ್ಮ ವೈಯಕ್ತಿಕ ಆಸಕ್ತಿ ಮುಖ್ಯವಾಗಿರಬೇಕೆ ಹೊರತು ಬೇರೆಯವರ ಒತ್ತಾಯಕ್ಕೆ ಓದಬಾರದು. ಪರೀಕ್ಷೆ ಬರೆಯುವವರೆಲ್ಲ ಪಾಸಾಗುವುದಿಲ್ಲ. 100 ಹುದ್ದೆಗೆ ಪರೀಕ್ಷೆ ನಡೆಸಿದರೆ ಸುಮಾರು 1 ಲಕ್ಷ ಜನರು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲಿ ಸತತವಾಗಿ ಅಭ್ಯಾಸ ನಡೆಸಿದವರಿಗೆ ಮಾತ್ರ ಕೆಲಸ ದೊರಕುತ್ತದೆ. ಆದ್ದರಿಂದ ನಿಮ್ಮ ಗುರಿ ಅಚಲವಾಗಿರಬೇಕು ಎಂದರು.

ಪ್ರತಿಯೊಬ್ಬರೂ ಕೂಡ ನಿಮ್ಮ ಗುರಿಯನ್ನು ಪ್ರೀತಿಸಿ. ಎಲ್ಲರ ಬಳಿಯೂ ಮೊಬೈಲ್ ಇರುವುದರಿಂದ ಪ್ರಯಾಣ ಮಾಡುವಾಗ ಅಥವಾ ಇನ್ನಾವುದೇ ಸಮಯದಲ್ಲಿ ಬೆಳಗ್ಗೆ, ಸಂಜೆ, ತಡರಾತ್ರಿಯಲ್ಲಿ ಪ್ರಸಾರವಾಗುವ ಆಕಾಶವಾಣಿಯ ಸುದ್ದಿಯನ್ನು ಗಮನವಿಟ್ಟು ಕನ್ನಡ ಮತ್ತು ಆಂಗ್ಲಭಾಷೆ ಎರಡರಲ್ಲಿಯೂ ಕೇಳಬೇಕು. ಜೊತೆಗೆ ಪ್ರಚಲಿತ ಘಟನೆ, ನ್ಯೂಸ್ ಪೇಪರ್ ಹಾಗೂ ಇನ್ನಿತರ ವಿಷಯಗಳನ್ನು ಪ್ರತಿನಿತ್ಯ ಗಮನಿಸಿ ಟಿಪ್ಪಣಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಪ್ರಯತ್ನದಿಂದ ಎಲ್ಲವೂ ಸಾಧ್ಯ. ಹೀಗಾಗಿ, ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ತಮ್ಮ ಗುರಿಯನ್ನು ಮುಟ್ಟಬಹುದಾಗಿದೆ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಇಂದು ಕಷ್ಟಪಟ್ಟರೆ ಮುಂದಿನ ನಿಮ್ಮ ಜೀವನ ಸುಖಕರವಾಗಿರುತ್ತದೆ. ಜೊತೆಗೆ ಸಮಾಜದಲ್ಲಿ ಉನ್ನತ ಗೌರವಗಳು ದೊರಕುತ್ತದೆ. ಎಲ್ಲರಿಗೂ ಓದಿನ ಹಸಿವಿರಬೇಕು. ಕಲಿಕೆ ಎಂಬುದು ದಿನನಿತ್ಯದ ಪಯಣವಾಗಿದೆ. ಎಲ್ಲರೂ ಉತ್ತಮ ಶ್ರದ್ಧೆಯಿಂದ ಕಲಿಕೆ ಮುಂದುವರಿಸಿ ಎಂದರು.

ವಿವಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಹಣಕಾಸು ಅಧಿಕಾರಿ ಪ್ರೊ. ನಿರಂಜನ್‌ ರಾಜ್‌, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.