ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮನೆಗಳಿಂದ ಸಂಗ್ರಹಿಸುವ ತ್ಯಾಜ್ಯ ವಿಲೇವಾರಿಗೆ ಯಲಹಂಕ ತಾಲೂಕಿನ ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ 2.32 ಎಕರೆ ಗೋಮಾಳವನ್ನು ಬೆಂಗಳೂರು ನಗರ ಜಿಲ್ಲಾಡಳಿತ ಮಂಜೂರು ಮಾಡಿ ಆದೇಶಿದೆ.
ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಳ್ಳಳ್ಳಿ ಮತ್ತು ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಗುಡ್ಡದ ಮಾದರಿಯಲ್ಲಿ ಕಸ ಸುರಿಯುತ್ತಿರುವುದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಬಳಿ ಕಸ ಹಾಕುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಆರು ದಿನದಲ್ಲಿ ಭೂಭರ್ತಿ ಕೇಂದ್ರ ಕಸ ವಿಲೇವಾರಿಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ. ರಸ್ತೆ ಸೇರಿದಂತೆ ಮೊದಲಾದ ವ್ಯವಸ್ಥೆಯನ್ನು ಈ ಹಿಂದೆಯೇ ಮಾಡಿಕೊಳ್ಳಲಾಗಿತ್ತು ಎಂದು ವಿವರಿಸಿದ್ದಾರೆ.
ನಗರದ ಹೊರ ವಲಯದಲ್ಲಿರುವ ಬೆಳ್ಳಳ್ಳಿ ಹಾಗೂ ಮಿಟ್ಟಗಾನಹಳ್ಳಿಯ ಕಸದ ಭೂ ಭರ್ತಿ ಕ್ವಾರಿ ತುಂಬಿದ್ದರೂ ಕಸ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸುತ್ತಲಿನ ಗ್ರಾಮಸ್ಥರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.
ಹೀಗಾಗಿ, ಕಳೆದ ಮೂರು ದಿನಗಳಿಂದ ನಗರದ ಕಸ ವಿಲೇವಾರಿ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಭೆ ನಡೆಸಿದ ವೇಳೆ ಮುಂದಿನ 10 ದಿನದಲ್ಲಿ ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದರು.