ಸಾರಾಂಶ
- ಪಿಡಬ್ಲ್ಯೂಡಿ ಎಇಇ ಬಸವರಾಜ ನಾಯ್ಕ, ಎಂಜಿನಿಯರ್ ಶಿವಮೂರ್ತಿ ಸ್ಥಳಕ್ಕೆ ಭೇಟಿ
ಕನ್ನಡಪ್ರಭವಾರ್ತೆ, ಬೀರೂರು:ಬೀರೂರು- ಲಿಂಗದಹಳ್ಳಿ ರಸ್ತೆಯನ್ನು ದ್ವಿಪಥವಾಗಿಸಿ, ಬೀದಿ ದೀಪ ಅಳವಡಿಸುವ ಕಾರ್ಯದಲ್ಲಿ ಅಧಿಕಾರಿಗಳು ಕ್ರಿಯಾಲೋಪ ಎಸಗಿದ್ದಾರೆ ಎಂದು ಆಕ್ಷೇಪಿಸಿದ ನಾಗರಿಕರು ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.ಕಲ್ಲತ್ತಿಗಿರಿ, ದತ್ತಪೀಠ ಹಾಗೂ ಕೆಮ್ಮಣ್ಣುಗುಂಡಿಗೆ ಸಂಪರ್ಕಿಸುವ ಬೀರೂರು– ಲಿಂಗದಹಳ್ಳಿ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಿ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಮಧ್ಯದಿಂದ 2 ಬದಿಯಲ್ಲಿ 7.05 ಮೀ ರಸ್ತೆ ವಿಸ್ತರಿಸಿ, 470 ಮೀ. ಅಭಿವೃದ್ಧಿಪಡಿಸುವ ಕಾಮಗಾರಿಗೆ ಇತ್ತೀಚೆಗೆ ಶಾಸಕ ಕೆ.ಎಸ್. ಆನಂದ್ ಭೂಮಿಪೂಜೆ ನೆರವೇರಿಸಿದ್ದರು.ರಸ್ತೆ ವಿಸ್ತರಣೆ ವೇಳೆ ಗುತ್ತಿಗೆದಾರ ರಸ್ತೆ ಅಕ್ಕಪಕ್ಕದಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವು ಮಾಡಿದ್ದು ಎರಡೂ ಬದಿ ರಸ್ತೆ ವಿಸ್ತರಣೆ ಕ್ರಮಬದ್ಧವಾಗಿಲ್ಲ. ಕುಡಿಯುವ ನೀರು ಪೂರೈಕೆಗೆ ಈಗಾಗಲೇ ಅಮೃತ್ ಯೋಜನೆಯಡಿ ಗುಂಡಿ ತೆಗೆದು ಪೈಪ್ ಅಳವಡಿಸ ಲಾಗುತ್ತಿದೆ. ಕೆಲವೆಡೆ 7.05 ಮೀ. ಅಗಲ ಸರಿಯಾಗಿ ಗುರುತಿಸಿದ್ದರೆ, ಇನ್ನೂ ಕೆಲವೆಡೆ ರಸ್ತೆಯ ಪಕ್ಕದಲ್ಲಿ ಕೇವಲ ಒಂದು ಅಡಿ ಯಷ್ಟು ಮಣ್ಣನ್ನು ಅಗೆದು ಅಲ್ಲಿ ಜಲ್ಲಿ ಮೆಟ್ಲಿಂಗ್ ಮಾಡಿದ್ದಾರೆ. ಚರಂಡಿ ನಿರ್ಮಿಸಲು ಸ್ಥಳಾವಕಾಶ ಇಲ್ಲ, ಹೀಗಾದರೆ ಇದು ಎಂತಹ ಅಭಿವೃದ್ಧಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.ಸಾರ್ವಜನಿಕರ ಆರೋಪ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಬಸವರಾಜ ನಾಯ್ಕ ಮತ್ತು ಎಂಜಿನಿಯರ್ ಶಿವಮೂರ್ತಿ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ವಿಸ್ತರಣೆ ನಿಗದಿಯಂತೆ ಎರಡೂ ಬದಿ ಸೂಕ್ತವಾಗಿ ಆಗಬೇಕು. ಒತ್ತುವರಿಯಿಂದ ವಿಸ್ತರಣೆಗೆ ಅಡಚಣೆ ಇದ್ದರೆ ಪುರಸಭೆ ಆ ಜಾಗ ತೆರವುಗೊಳಿಸಬೇಕು. ಪುರಸಭೆ ತನ್ನ ಜವಾಬ್ದಾರಿ ಪೂರೈಸಿದ ಬಳಿಕ ಕಾಮಗಾರಿ ಮುಂದುವರಿಸಲಾಗುವುದು ಎಂದು ತಿಳಿಸಿದರು.ಅಮೃತ್ ಯೋಜನೆ ಕಾಮಗಾರಿಯನ್ನು ರಸ್ತೆ ವಿಸ್ತರಣೆಯ ಬಳಿಕ ಕೈಗೊಳ್ಳುವಂತೆ ಎಂಜಿನಿಯರ್ ಸೂಚಿಸಿ ತೆರಳಿದ ಬಳಿಕ ಕಾಮಗಾರಿಗೆ ತಡೆ ಬಿದ್ದಿದೆ. ಈಗಿರುವ ರಸ್ತೆ ವಿಸ್ತರಣೆ ಕಾರ್ಯ ಒಳ್ಳೆಯದು, ಆದರೆ ರಸ್ತೆ ಪಕ್ಕದಲ್ಲಿ ಚರಂಡಿಯೇ ಇಲ್ಲ. ಮಳೆ ನೀರು ರಸ್ತೆ ಮತ್ತು ಮನೆಗಳ ಬಾಗಿಲಿಗೆ ಹರಿದರೆ ಎರಡೂ ಹಾಳಾಗುತ್ತವೆ. ಈ ವಿವೇಚನೆ ಇಲ್ಲದೆ ಮಾಡುತ್ತಿರುವ ಅಭಿವೃದ್ಧಿ ಕಾರ್ಯ ಜನೋಪಯೋಗಿ ಅಲ್ಲ. ಸೂಕ್ತವಾಗಿ ನಕ್ಷೆ ತಯಾರಿಸಿ ಅಗತ್ಯ ಕಾಮಗಾರಿಗೆ ಜಾಗ ಉಳಿಸಿಕೊಂಡು ಕ್ರಮಬದ್ಧವಾಗಿ ರಸ್ತೆ ವಿಸ್ತರಣೆ ಆಗಬೇಕು ಎನ್ನುವುದು ಸ್ಥಳೀಯರ ಆಗ್ರಹ.
ಈ ಸಂದರ್ಭದಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಕಾಂತರಾಜ್, ತಿರುಮಲ ಮೋಹನ್ ಕುಮಾರ್, , ಸ್ಥಳೀಯ ಮುಖಂಡ ಮಧು ಬಾವಿಮನೆ, ಪ್ರಕಾಶ್, ಚಂದ್ರು, ರಂಗನಾಥ್, ಪ್ರವೀಣ್, ಶಿವಮೂರ್ತಿ, ಕೆಂಚಪ್ಪ, ರವಿ, ಆನಂದ್, ಪ್ರಭು, ರಮೇಶ್ ಸೇರಿದಂತೆ ಮತ್ತಿತರರು ಇದ್ದರು.-- ಬಾಕ್ಸ್--ರಸ್ತೆ ವಿಸ್ತರಣೆಯಲ್ಲಿ ವಿನಾಯಿತಿ: ಆರೋಪ‘ರಸ್ತೆ ವಿಸ್ತರಣೆ ಆದ ನಂತರ ರಸ್ತೆ ಪಕ್ಕಕ್ಕೆ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಬೇಕು. ಇದಾದ ಮೇಲೆ ಚರಂಡಿಗೆ ಜಾಗ ಮೀಸಲು ಇರಿಸಿಕೊಳ್ಳಬೇಕು. ಆದರೆ, ಇಲ್ಲಿ ಈ ಯಾವ ನಿಬಂಧನೆಯನ್ನೂ ಪಾಲಿಸದೆ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದು, ಕೆಲ ವೊಂದು ಮನೆಗಳು–ಅಂಗಡಿಗಳ ಬಳಿಗೆ ರಸ್ತೆ ವಿಸ್ತರಣೆಯಲ್ಲಿ ವಿನಾಯಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಅಮೃತ್ 2 ಯೋಜನೆ ಪೈಪ್ಲೈನ್, ಪಕ್ಕದಲ್ಲಿ ಚರಂಡಿ ನಿರ್ಮಿಸಬೇಕು. ಆದರೆ, ಅಲ್ಲಿ ಜಾಗವೇ ಇಲ್ಲ. ಈಗ ಅಳವಡಿಸುತ್ತಿರುವ ಕುಡಿಯುವ ನೀರಿನ ಪೈಪ್ಲೈನ್ ವಿಸ್ತರಣೆಯಾದ ರಸ್ತೆಯ ಮದ್ಯಕ್ಕೆ ಸೇರುತ್ತದೆ. ಮುಂದೊಂದು ದಿನ ಪೈಪ್ ಹಾಳಾದರೆ, ಪುನಃ ರಸ್ತೆಯನ್ನು ಕಿತ್ತು ಹಾಳುಮಾಡುತ್ತಾರೆ’ ಎಂದು ಸ್ನೇಹಕೂಟ ಗೆಳೆಯರ ಬಳಗದ ಅಧ್ಯಕ್ಷ ತಿಪ್ಪೇಶ್ ಆಕ್ರೋಶ ವ್ಯಕ್ತಪಡಿಸಿದರು.26 ಬೀರೂರು 1ಬೀರೂರಿನ ಲಿಂಗದಹಳ್ಳಿ ರಸ್ತೆ ವಿಸ್ತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ, ಬುಧವಾರ ಅಮೃತ್ ಯೋಜನೆಯ ಕಾರ್ಯ ನಿರ್ವಹಿಸುತ್ತಿದ್ದ ಎಂಜಿನಿಯರ್ ಮನೋಜ್ಗೆ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು