ಸಾರಾಂಶ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿತಾಲೂಕಿನ ಕೃಷಿ ಪಂಪ್‌ಸೆಟ್‌ಗೆ ಅನಿಯಮಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಮೊದಲೇ ಮಳೆ ಕೊರತೆಯಿಂದ ಕಂಗೆಟ್ಟಿರುವ ಅನ್ನದಾತರಿಗೆ ಅಳಿದುಳಿದು ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿದೆ. ರಾತ್ರಿ, ಸಂಜೆ, ಮಧ್ಯ ರಾತ್ರಿ ಹೀಗೆ ನಿರ್ದಿಷ್ಟ ಸಮಯವಿಲ್ಲದೆ ವಿದ್ಯುತ್ ಕೊಡುತ್ತಿರುವುದರಿಂದ ರೈತ ಹೈರಾಣಾಗಿದ್ದಾನೆ.
ಮುಂಗಾರು ಮಳೆಯಿಲ್ಲದೆ ಕಂಗಾಲಾಗಿದ್ದ ರೈತ ಬೋರ್‌ವೆಲ್‌ಗಳನ್ನು ನಂಬಿ ಹಿಂಗಾರಿನ ಬೆಳೆ ಬಿತ್ತನೆ ಮಾಡಿದ್ದಾನೆ. ಈಗ ಮಳೆಯೂ ಇಲ್ಲ, ಅಳಿದುಳಿದ ಬೆಳೆ ಉಳಿಸಿಕೊಳ್ಳಲು ಸಮರ್ಪಕ ವಿದ್ಯುತ್ ಕೂಡ ಸಿಗುತ್ತಿಲ್ಲ. ಮೊದಲಿದ್ದ 7 ತಾಸು ವಿದ್ಯುತ್ ಪೂರೈಕೆಯನ್ನು 5 ತಾಸಿಗೆ ಸರ್ಕಾರ ನಿಗದಿ ಮಾಡಿದೆ. ಅದನ್ನು ಹೆಸ್ಕಾಂ ಅಧಿಕಾರಿಗಳು ಶಿಫ್ಟ್ ಮುಖಾಂತರ ಸರಬರಾಜು ಮಾಡುತ್ತಿದ್ದಾರೆ. ರಾತ್ರಿ ೧೨ರಿಂದ ನಸುಕಿನ ಜಾವ ೫ ಗಂಟೆಯವರೆಗೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವುದರಿಂದ ರೈತರು ನಿದ್ದೆಗೆಟ್ಟು, ಕತ್ತಲೆಯಲ್ಲಿ ಕೆಲಸ ಮಾಡುವಂತಾಗಿದೆ. ಸರ್ಕಾರದ ಈ ನಿರ್ಧಾರ ರೈತರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.ರಾತ್ರಿ ವೇಳೆ ಹೊಲಗಳಲ್ಲಿ ವಿಷಜಂತುಗಳು ಓಡಾಡುತ್ತವೆ. ಅರೆ ಮಲೆನಾಡು ಭಾಗಗಳಲ್ಲಿ ವನ್ಯಜೀವಿಗಳು ಓಡಾಡುತ್ತಿರುತ್ತವೆ. ಮಧ್ಯ ರಾತ್ರಿ ಹೊಲಕ್ಕೆ ಹೋಗಿ ನೀರು ಹರಿಸುವುದು ಕಷ್ಟದಾಯಕ ಕೆಲಸವಾಗಿದೆ. ಉದ್ಯಮಿಗಳಿಗೆ ಸತತ ವಿದ್ಯುತ್ ಪೂರೈಸಲಾಗುತ್ತದೆ. ಅನ್ನದಾತನ ಪ್ರಶ್ನೆ ಬಂದಾಗ ಕಾಳಜಿ ಬದಲಾಗುತ್ತದೆ ಎಂಬುದು ರೈತರ ಆರೋಪವಾಗಿದೆ.
ಆಳುವ ಸರ್ಕಾರ ನಾಡಿಗೆ ಅನ್ನ ನೀಡುವ ಅನ್ನದಾತನ ಬದುಕಿಗೆ ಬರೆ ಎಳೆಯುತ್ತಿದೆ. ರೈತ ದೇಶದ ಬೆನ್ನೆಲುಬು ಅವರಿಗೆ ಅನ್ಯಾಯ ಮಾಡಬೇಡಿ. ರೈತನಿಗೆ ಅನ್ಯಾಯ ಮಾಡಿದರೆ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮಧ್ಯರಾತ್ರಿ ಕೃಷಿ ಪಂಪ್‌ಸೆಟ್‌ಗಳಿಗೆ ಕರೆಂಟ್ ಕೊಡುತ್ತಿದ್ದಾರೆ. ಅಷ್ಟೊತ್ತಿಗೆ ರೈತರು ನೀರುಣಿಸಲು ಹೆಣಗಾಡುವಂತಾಗಿದೆ. ಹೀಗೆ ಮುಂದಾದರೆ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನೇ ಕೈ ಬಿಡುವಂತಹ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ರೈತ ಸೇನಾ ಮುಖಂಡ ವರುಣಗೌಡ ಎಂ. ಪಾಟೀಲ.ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು, ಹಗಲಿನಲ್ಲಿ ನಿರಂತರ ಏಳು ತಾಸು ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ರೈತರು ಸೇರಿದಂತೆ ಹಲವಾರು ಸಂಘಟನೆಗಳ ಮೂಲಕ ನಾನಾ ರೀತಿಯಲ್ಲಿ ಪ್ರತಿಭಟನೆ ಮಾಡಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಹಗಲಿನಲ್ಲಿಯೇ ವಿದ್ಯುತ್ ಪೂರೈಸಲು ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದು ತಾಲೂಕಿನ ರೈತರ ಒತ್ತಾಯ.
ಕೃಷಿ ಪಂಪ್‌ಸೆಟ್‌ಗಳಿಗೆ ಸತತ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಸುವಂತೆ ಸರ್ಕಾರ ಆದೇಶ ಮಾಡಿಲ್ಲ. ಹೀಗಾಗಿ ವೇಳಾಪಟ್ಟಿಯಂತೆ ಒಂದು ವಾರ ಹಗಲು ನೀಡಿದರೆ, ಒಂದು ವಾರ ರಾತ್ರಿ ಪಾಳೆಯಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿ ನಿರ್ಧಾರ ಕೈಗೊಂಡರೆ ಅದರಂತೆ ವಿದ್ಯುತ್ ನೀಡಲಾಗುವುದು ಎನ್ನುತ್ತಾರೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸಿ.ಬಿ. ಹೊಸಮನಿ.ಪಂಪ್‌ಸೆಟ್‌ಗಳಿಗೆ ಶಿಫ್ಟ್ ಮೂಲಕ ವಿದ್ಯುತ್ ಪೂರೈಸುವುದು ಬೇಡ. ಈ ಹಿಂದಿನಂತೆ ಹಗಲಲ್ಲೇ ಕೊಡಬೇಕು. ರಾತ್ರಿ ವೇಳೆ ವಿದ್ಯುತ್ ಕೊಟ್ಟರೆ ರೈತರು ಜಮೀನಿಗೆ ಹೋಗಲು ಕಷ್ಟವಾಗುತ್ತದೆ. ಅಹಿತಕರ ಘಟನೆ ಸಂಭವಿಸಿದರೆ ಯಾರು ಹೊಣೆ. ರೈತನ ಹಿತದೃಷ್ಟಿಯಿಂದ ಹಗಲಿನಲ್ಲಿಯೇ ವಿದ್ಯುತ್ ನೀಡಲು ಮುಖ್ಯಮಂತ್ರಿ ಆದೇಶಿಸಬೇಕು ಎಂದು ಆಗ್ರಹಿಸುತ್ತಾರೆ ರೈತ ಸಂಘದ ತಾಲೂಕಾಧ್ಯಕ್ಷ ಬಸಲಿಂಗಪ್ಪ ನರಗುಂದ.