ಘಟನೆಯ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಕೆಲವರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ. ಘಟನೆಯ ಬಳಿಕ ಸಂತ್ರಸ್ತರು ಪೊಲೀಸರ ಮೊರೆ ಹೋಗಿ, ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ಮುಂದುವರಿದಿದೆ.

ಯಲ್ಲಾಪುರ: ಬೈಂದೂರು ಪಪಂ ಮುಖ್ಯಾಧಿಕಾರಿಯೊಬ್ಬರು ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರ ಬಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಸಾರ್ವಜನಿಕರು ಥಳಿಸಿದ ಘಟನೆ ತಾಲೂಕಿನ ಮಂಚಿಕೇರಿಯ ಮಾಗೋಡು ಕ್ರಾಸ್ ಬಳಿ ಸೋಮವಾರ ನಡೆದಿದೆ.ಮಾಗೋಡು ಕ್ರಾಸ್ ಬಳಿ ಕೆಲವರು ಮೀನು ಹಾಗೂ ತರಕಾರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿರುವ ಅಜಯ ಗಣೇಶ ಭಂಡಾರ್ಕರ್ ಎಂಬವರು ಮದ್ಯ ಸೇವಿಸಿ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಮೀನು ಮಾರುತ್ತಿದ್ದ ಮಹಿಳೆಯ ಬಳಿ ಉಚಿತವಾಗಿ ಮೀನು ನೀಡುವಂತೆ ಒತ್ತಾಯಿಸಿದ್ದು, ಮೀನು ನೀಡದ ಹಿನ್ನೆಲೆ ಬುಟ್ಟಿಯಲ್ಲಿದ್ದ ಮೀನುಗಳನ್ನು ಚೆಲ್ಲಿದ್ದಾರೆ ಎಂದು ತಿಳಿದುಬಂದಿದೆ.ಅಲ್ಲದೆ, ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಂದಿಗೂ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಅಜಯ ಗಣೇಶ ಭಂಡಾರ್ಕರ್‌ ಅವರನ್ನು ಪ್ರಶ್ನಿಸಿದ್ದು, ಮಾತಿನ ಸಂದರ್ಭದಲ್ಲಿ ಇಲ್ಲಿ ಮೀನು ಮಾರಾಟ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಮಾತಿನ ಚಕಮಕಿ ಮುಂದುವರಿದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಅವರು ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಅಜಯ ಗಣೇಶ ಭಂಡಾರ್ಕರರನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಅವರನ್ನು ಬಿಡಿಸಲು ಬಂದಿದ್ದ ಸ್ನೇಹಿತನಿಗೂ ಸಾರ್ವಜನಿಕರಿಂದ ಏಟು ಬಿದ್ದಿವೆ.

ಘಟನೆಯ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಕೆಲವರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ. ಘಟನೆಯ ಬಳಿಕ ಸಂತ್ರಸ್ತರು ಪೊಲೀಸರ ಮೊರೆ ಹೋಗಿ, ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ಮುಂದುವರಿದಿದೆ. ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ರೂಪಾಲಿ ನಾಯ್ಕ ಆಗ್ರಹ

ಕಾರವಾರ: ಅಂಕೋಲಾ ತಾಲೂಕಿನ ಬೇಲೆಕೇರಿಯ ಮೀನುಗಾರ ಮಹಿಳೆಯ ಮೇಲೆ ಯಲ್ಲಾಪುರದ ಮಂಚಿಕೇರಿಯಲ್ಲಿ ಅಧಿಕಾರಿಯೊಬ್ಬರು ಹಲ್ಲೆ ನಡೆಸಿದ ಘಟನೆ ಖಂಡನೀಯವಾಗಿದ್ದು, ಈ ಕುರಿತು ತಕ್ಷಣ ಸೂಕ್ತ ತನಿಖೆ ನಡೆಸಿ ಅಧಿಕಾರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಆಗ್ರಹಿಸಿದ್ದಾರೆ.ಬೈಂದೂರಿನಲ್ಲಿ ಮುಖ್ಯಾಧಿಕಾರಿಯಾಗಿರುವ ಅಜಯ ಭಂಡಾರ್ಕರ್ ಅವರಿಂದ ಮಂಚಿಕೇರಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಸರಸ್ವತಿ ಕುಡ್ತಲಕರ ಎನ್ನುವವರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬಡ ಮೀನುಗಾರ ಮಹಿಳೆಯೊಬ್ಬರ ಮೇಲೆ ಅಧಿಕಾರದ ದರ್ಪದಿಂದ ವರ್ತಿಸಿ, ಮೀನುಗಳನ್ನು ನೆಲಕ್ಕೆಸೆದು, ಹಲ್ಲೆ ನಡೆಸಲಾಗಿದೆ ಎನ್ನುವುದು ಅತ್ಯಂತ ಗಂಭೀರ ವಿಚಾರ. ಈ ಆರೋಪದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಅಧಿಕಾರಿಗಳಿಗೆ ಕಾನೂನು ಪಾಲನೆ ಮಾಡಿಸುವ ಜವಾಬ್ದಾರಿ ಇದೆ. ಆದರೆ ಅವರೇ ಕಾನೂನನ್ನು ಕೈಗೆತ್ತಿಕೊಂಡು ಮಹಿಳೆಯರ ಮೇಲೆ ಹಲ್ಲೆ ನಡೆಸುವಂತಹ ಆರೋಪಗಳು ಕೇಳಿಬರುವುದು ಆತಂಕಕಾರಿ. ಅಧಿಕಾರಿಗಳಿಗೆ ಮಹಿಳೆಯರ ಮೇಲೆ ಕೈ ಮಾಡುವ ಅಧಿಕಾರ ಕೊಟ್ಟವರು ಯಾರು ಎಂದು ರೂಪಾಲಿ ಎಸ್. ನಾಯ್ಕ ಪ್ರಶ್ನಿಸಿದ್ದಾರೆ.