ಸಾರಾಂಶ
ಅಭಿವ್ಯಕ್ತಿಗೊಳಿಸುವ ದನಿಗಳೇ ಬಿಗಿಯಾಗಿರುವ ಈ ಕಾಲಘಟ್ಟದಲ್ಲಿ ಚೈತನ್ಯ ನೀಡುವ ಶಕ್ತಿ ರಂಗಭೂಮಿಯಲ್ಲಿ ಮಾತ್ರ ಉಳಿದುಕೊಂಡಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಿಕ್ಕಿರುವ ಸ್ವಾತಂತ್ರ್ಯ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಲೇಖನಿ ಮುಚ್ಚಲ್ಪಟ್ಟು, ಹೋರಾಟಗಳು ಅಪಾಯಕಾರಿಯಾಗಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಕಳವಳ ವ್ಯಕ್ತಪಡಿಸಿದರು.ನಗರದ ಕಿರುರಂಗಮಂದಿರದಲ್ಲಿ ಜಿಪಿಐಇಆರ್ ರಂಗತಂಡದ 31ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರಾವಣ ರಂಗೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮೈಮ್ ಅಭಿನಯದಂತೆ ನಮ್ಮ ಮಾತು ಕೂಡ ಕಳೆದು ಹೋಗಿದೆ. ಹೀಗಾಗಿ ನಮ್ಮ ದನಿಗೆ ರಂಗಭೂಮಿ ವೇದಿಕೆಯಾಗಬಲ್ಲದು. ಅಭಿವ್ಯಕ್ತಿಗೊಳಿಸುವ ದನಿಗಳೇ ಬಿಗಿಯಾಗಿರುವ ಈ ಕಾಲಘಟ್ಟದಲ್ಲಿ ಚೈತನ್ಯ ನೀಡುವ ಶಕ್ತಿ ರಂಗಭೂಮಿಯಲ್ಲಿ ಮಾತ್ರ ಉಳಿದುಕೊಂಡಿದೆ. ನಾವಿಂದು ಏನು ಮಾತನಾಡದ ಪರಿಸ್ಥಿತಿಯಲ್ಲಿದ್ದೇವೆ ಎಂದರು.ದೇಶದಲ್ಲಿನ ರಾಜಕೀಯ ಒಳ ಜಗಳಗಳು ಅಂಬೇಡ್ಕರ್‌ಅವರಲ್ಲಿ ಕಳವಳವನ್ನುಂಟು ಮಾಡಿತ್ತು. ಆದ್ದರಿಂದಲೇ ಸಂವಿಧಾನ ಸಮರ್ಪಿಸುವಾಗ ದೇಶದ ಸ್ವಾತಂತ್ರ ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಭಯವಿತ್ತು. ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರದ ಸ್ಪಷ್ಟತೆ ನಮ್ಮಲ್ಲಿ ಇರಬೇಕು. ಜೋಪಾನ ಮಾಡಿಟ್ಟುಕೊಂಡು ಎಚ್ಚರಿಕೆಯಿಂದ ಆಚರಿಸುವುದೇ ಸ್ವಾತಂತ್ರ್ಯ ಎಂಬುವುದನ್ನು ಅರಿಯಬೇಕು. ಅದು ರಂಗಕರ್ಮಿಯ ಆತ್ಮವಾಗಬೇಕು ಎಂದರು.
ಶಾಸಕ ಕೆ. ಹರೀಶ್ ಗೌಡ ಕೋಮುವಾದ ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ನಮ್ಮ ಭಾರತ ಒಂದು ಸಮುದಾಯಕ್ಕೋ ಅಥವಾ ಒಂದು ಧರ್ಮಕ್ಕೋ ಸೀಮಿತವಾದ ದೇಶವಲ್ಲ. ಸಮಾಜ ಸ್ವಾಸ್ಥ್ಯವಾಗಿರಬೇಕಾದರೆ ರಂಗಭೂಮಿಗಳು ಹೆಚ್ಚು ಪ್ರಖರವಾಗಿ ಕೆಲಸ ಮಾಡಬೇಕು ಎಂದರು.ಜಿಪಿಐಇಆರ್ ನಿರ್ದೇಶಕ ಮೈಮ್ ರಮೇಶ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಸಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ನಟ ರಿಷಿ, ರಂಗಾಯಣ ನಿವೃತ್ತ ಕಲಾವಿದೆ ಗೀತಾ ಮೋಂಟಡ್ಕ, ಜಿಪಿಐಇಆರ್ ಸಂಚಾಲಕ ಹರಿದತ್ತ ಇದ್ದರು.
ಬಳಿಕ ರಾಜಗುರು ಹೊಸಕೋಟೆ ನಿರ್ದೇಶನದ ಬೆಂಗಳೂರಿನ ರಂಗಪಯಣ ತಂಡದವರು ಹೆಸರೆ ಇಲ್ಲದವರು ನಾಟಕ ಪ್ರದರ್ಶಿಸಿದರು.