ಸಾರಾಂಶ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡಿನ ಸೌಹಾರ್ದ ಬದುಕಿನ ಬಗ್ಗೆ ರಂಗಚಲನ ತಂಡದ ಮೂಲಕ ನಿರ್ಮಾಣಗೊಂಡ ‘ಜಾಗ್ ರ್ತೆ’ ತುಳು ನಾಟಕದ ಪ್ರಥಮ ಪ್ರದರ್ಶನ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಇತ್ತೀಚೆಗೆ ನೆರವೇರಿತು.
ತುಳು ಅಕಾಡೆಮಿಯಿಂದ ತುಳುನಾಡ ಸೌಹಾರ್ದತೆ ಕುರಿತ ನಾಟಕ ಪ್ರದರ್ಶನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಮಂಗಳೂರು
ನಮ್ಮೊಳಗಿನ ಜಾತಿ, ಧರ್ಮ, ಭಾಷೆಯ ವೈವಿಧ್ಯತೆಯನ್ನು ಜತೆಗಿರಿಸಿಕೊಂಡು ನಾವೆಲ್ಲರೂ ಒಂದೇ ಎನ್ನುವ ಸೌಹಾರ್ದತೆಯ ಸಮಾಜವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರ ಜವಾಬ್ದಾರಿ ಮಹತ್ತರವಾದುದು ಎಂದು ನಿವೃತ್ತ ಪ್ರಾಂಶುಪಾಲ ಡಾ.ಎನ್. ಇಸ್ಮಾಯಿಲ್ ಹೇಳಿದ್ದಾರೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡಿನ ಸೌಹಾರ್ದ ಬದುಕಿನ ಬಗ್ಗೆ ರಂಗಚಲನ ತಂಡದ ಮೂಲಕ ನಿರ್ಮಾಣಗೊಂಡ ‘ಜಾಗ್ ರ್ತೆ’ ತುಳು ನಾಟಕದ ಪ್ರಥಮ ಪ್ರದರ್ಶನವನ್ನು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನಾವ್ಯಾರೂ ಕತ್ತರಿಸುವ ಕತ್ತರಿ ಆಗಬಾರದು, ಹೊಲಿದು ಒಟ್ಟುಗೂಡಿಸುವ ಸೂಜಿ- ದಾರ ಆಗಬೇಕು. ನಮ್ಮ ಜಾತಿ ಧರ್ಮ ಮನೆಯಲ್ಲಿ ಮತ್ತು ಆರಾಧನಾಲಯಗಳಲ್ಲಿ ಮಾತ್ರ ಇರಬೇಕು, ಸಮಾಜದಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಇರಬೇಕು. ಧರ್ಮ, ಜಾತಿ, ಭಾಷೆ ಯಾವುದೇ ಇರಲಿ- ಮನುಷ್ಯರು ಒಂದೇ. ಅದನ್ನು ಸಾರುವ ಪ್ರಯತ್ನ ತುಳು ಅಕಾಡೆಮಿ ಈ ನಾಟಕದ ಮೂಲಕ ಮಾಡುತ್ತಿದೆ ಎಂದರು.ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುನಾಡಿನ ಸೌಹಾರ್ದ ಪರಂಪರೆಯ ಬಗ್ಗೆ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತುಳು ಅಕಾಡೆಮಿಯು ಎರಡು ಹೊಸ ನಾಟಕಗಳನ್ನು ನಿರ್ಮಾಣ ಮಾಡಿದೆ ಎಂದು ತಿಳಿಸಿದರು.
ನಾಟಕ ಹಾಗೂ ಚಲನಚಿತ್ರ ನಟಿ ಸುನೀತಾ ಎಕ್ಕೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಂಗ ಸಂಚಲನ ನಿರ್ದೇಶಕ ದಿನೇಶ್ ಅತ್ತಾವರ, ಅಕಾಡೆಮಿ ಸದಸ್ಯರಾದ ಬೂಬ ಪೂಜಾರಿ, ಕುಂಬ್ರ ದುರ್ಗಾಪ್ರಸಾದ್ ರೈ, ಮಿಲಾಗ್ರಿಸ್ ಪ್ರೌಢಶಾಲೆಯ ಪ್ರಾಂಶುಪಾಲ ಫಾ.ಉದಯ್ ಫರ್ನಾಂಡಿಸ್ ಇದ್ದರು.ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ನಿರೂಪಿಸಿದರು. ಮಿಲಾಗ್ರಿಸ್ ಪಿಯು ಕಾಲೇಜ್ ಪ್ರಾಂಶುಪಾಲ ಮೆಲ್ವಿನ್ ವಾಸ್ ವಂದಿಸಿದರು.