ಸಾರಾಂಶ
ಆರಾಧ್ಯ ಟ್ರಸ್ಟ್ ವತಿಯಿಂದ ಚಾಮರಾಜನಗರದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಆರಾಧ್ಯ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಗರದಲ್ಲಿ ನಡೆಯಿತು.ಬೆಳಗ್ಗೆ ಧಾರ್ಮಿಕವಾಗಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಬಳಿಕ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಇದೇ ವೇಳೆ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ರಾಮಾರಾಧ್ಯರು ಅಧಿಕಾರ ವಹಿಸಿಕೊಂಡರೆ, ನಿಕಟಪೂರ್ವ ಅಧ್ಯಕ್ಷ ವಿಶ್ವಾರಾಧ್ಯರನ್ನು ಬೀಳ್ಕೊಟ್ಟು ಗೌರವಿಸಲಾಯಿತು. ಸಮುದಾಯದ ಕ್ರೀಡಾಪಟುಗಳಾದ ವಿಶ್ವೇಶ್ವರ ಆರಾಧ್ಯ, ಆಕಾಶ್ ಆರಾಧ್ಯ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ನಾಗಭೂಷಣ ಆರಾಧ್ಯ ಮಾತನಾಡಿ, ಶಿಕ್ಷಣಕ್ಕೆ ಸಮುದಾಯದವರು ಒತ್ತು ನೀಡಬೇಕು. ಯಾರಿಗೂ ಯಶಸ್ಸು ತಾನಾಗಿಯೇ ಒಲಿದು ಬರುವುದಿಲ್ಲ. ಅದಕ್ಕಾಗಿ ಪರಿಶ್ರಮ ಅಗತ್ಯ. ಸೋಲು ಸಾಮಾನ್ಯ, ಆದರೆ ಮರಳಿ ಯತ್ನಿಸಿದರೆ ಯಶಸ್ಸು ಕಷ್ಟವೇನಲ್ಲ ಎಂದರು. ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತರನ್ನು ಉತ್ತೇಜಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಆರ್. ಐಶ್ವರ್ಯಾ ಮಾತನಾಡಿ, ಆರಾಧ್ಯ ಟ್ರಸ್ಟ್ ಚಾ.ನಗರದಲ್ಲಿ ಸ್ಥಾಪನೆ ಆಗಿರುವುದು ಶ್ಲಾಘನೀಯ. ಜೀವನದಲ್ಲಿ ಗುರಿ, ಗುರುವಿನ ಅಗತ್ಯ ತುಂಬ ಇದೆ. ಗುರಿ ಸಾಧನೆಯ ಕನಸು ಕಾಣಬೇಕು. ಅಡೆತಡೆಗಳನ್ನು ಮೆಟ್ಟಿ ಮುನ್ನಗ್ಗಬೇಕು. ಅಲ್ಲದೇ ನಮ್ಮತನ ಹಾಗೂ ಸಂಸ್ಕೃತಿಯನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಆರಾಧ್ಯ ಟ್ರಸ್ಟ್ ನೂತನ ಅಧ್ಯಕ್ಷ ರಾಮಾರಾಧ್ಯ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಕೆ. ಹೊಸೂರು ಮಲ್ಲಾರಾಧ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಕಟ ಪೂರ್ವ ಅಧ್ಯಕ್ಷ ಎ.ಎನ್. ವಿಶ್ವಾರಾಧ್ಯ, ಗೌರವಾಧ್ಯಕ್ಷ ರುದ್ರಾರಾಧ್ಯ, ಶಿವಶಂಕರ ಆರಾಧ್ಯ ಹಾಗೂ ಪದಾಧಿಕಾರಿಗಳು, ಸದಸ್ಯರು, ಗುಂಡ್ಲುಪೇಟೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.ಕಾರ್ಯಕ್ರಮದ ಬಳಿಕ ಸಾವಯವ ಕೃಷಿಯಿಂದ ಬೆಳೆದ ಸಿರಿಧಾನ್ಯಗಳಿಂದ ತಯಾರಿಸಿದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಸುಧಾ ಆರಾಧ್ಯ ಸೇರಿದಂತೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.