ಕಾವು: ಅಡಕೆ ಖರೀದಿ ಕೇಂದ್ರ ಉದ್ಘಾಟನೆ

| Published : Jul 10 2024, 12:33 AM IST

ಸಾರಾಂಶ

ಕೃಷಿಕರಾದ ಭಾಸ್ಕರ ರೈ ಕಂಟ್ರಮಜಲು, ಶರತ್‌ ಕುಮಾರ್ ರೈ, ಸೀತಾರಾಮ ಭಟ್ ಬರಕ್ಕೆರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಾಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ಸೀತಾರಾಮ ರೈ ಅವರನ್ನು ಕಾವು ಸಿಎ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಅಡಕೆ ಕೃಷಿ ನಾಶವಾದರೆ ಮತ್ತು ಧಾರಣೆ ಕುಸಿದರೆ ದ.ಕ ಮತ್ತು ಉಡುಪಿ ಭಾಗದ ಜನತೆ ಸಂಕಷ್ಟಕ್ಕೊಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಡಕೆ ಬೆಳೆಗೆ ಬಾಧಿಸುವ ರೋಗಗಳ ಮತ್ತು ಅಡಕೆ ಪರ್ಯಾಯ ಉಪಯೋಗದ ಕುರಿತು ಸಂಶೋಧನೆಗಳಾಗಬೇಕಾದ ಅಗತ್ಯವಿದೆ. ಈ ಕೆಲಸ ಆಗದಿದ್ದರೆ ಅಡಕೆಗೆ ಭವಿಷ್ಯವಿಲ್ಲ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಅವರು ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳೂರು ಕೃಷಿಕರ ಸಹಕಾರಿ ಸಂಘದ ವತಿಯಿಂದ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಹಯೋಗ ಮತ್ತು ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರ ಸಹಕಾರದೊಂದಿಗೆ ಆರಂಭಿಸಲಾದ ಅಡಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಯಾಂಪ್ಕೋ, ಮಾಸ್ ಸಹಕಾರಿ ಸಂಘಗಳ ಜತೆಗೆ ಕೃಷಿಪತ್ತಿನ ಸಹಕಾರಿ ಸಂಘಗಳು ಕೂಡ ಅಡಕೆ ಖರೀದಿ ಮಾಡುವಲ್ಲಿ ಪೈಪೋಟಿ ನೀಡುವಂತಾದರೆ ರೈತರಿಗೆ ನ್ಯಾಯಯುತ ಬೆಲೆ ಸಿಗುವ ಜತೆಗೆ ಲಾಭದಾಯಕವಾಗಬಹುದು. ಬೆಳೆಗಾರರು ಬೆಳೆಗೆ ಹರಡುವ ರೋಗದ ಜತೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಡಕೆ ಕೃಷಿಗೆ ಔಷಧಿ ಸಿಂಪಡಣೆ ಮಾಡುವವರು ಕೂಡ ಈಗ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಅಡಕೆ ಕೆ ಕೃಷಿಗೆ ಪೂರಕವಾಗುವ ಕೆಲಸ ಕಾರ್ಯಗಳ ಬಗ್ಗೆ ಯುವಜನತೆಗೆ ತರಬೇತಿ ನೀಡುವ ಕೆಲಸವನ್ನು ಸಹಕಾರಿ ಸಂಘಗಳು ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು ಮಾತನಾಡಿ, ಸೀತಾರಾಮ ರೈ ಅವರು ಅಧ್ಯಕ್ಷರಾಗಿ ಅಧಿಕಾರಿ ವಹಿಸಿದ ಅತ್ಯಲ್ಪ ಕಾಲದಲ್ಲೇ ಮಾಸ್ ಸಂಸ್ಥೆ ಅಭಿವೃದ್ಧಿಯತ್ತ ಸಾಗಿದೆ. ಹಣದ ಕೊರತೆಯನ್ನು ನೀಗಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಬೆಳೆಗಾರರಿಗೆ ಪ್ರಯೋಜನವಾಗಬೇಕಾದರೆ ಮಾರುಕಟ್ಟೆ ಪೈಪೋಟಿ ಇರಬೇಕು ಎಂದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳೆಜ್ಜ ಮಾತನಾಡಿ, ಹಳೆದಿರೋಗ, ನುಸಿ ರೋಗ ಇತ್ಯಾದಿ ರೋಗಳಿಂದಾಗಿ ಈ ಭಾಗದ, ಅದರಲ್ಲೂ ಮುಖ್ಯವಾಗಿ ಸುಳ್ಯ ಕಡೆಯ ಅಡಕೆ ಕೃಷಿಕರು ಕಂಗಾಲಾಗಿದ್ದಾರೆ. ಅಡಕೆ ಧಾರಣೆಯಲ್ಲಿ ಸ್ಥಿರತೆ ಕಾಪಾಡುವ ಕೆಲಸವೂ ಆಗಬೇಕಿದೆ ಎಂದರು. ಕಾವು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಮಾಸ್ ಸಂಸ್ಥೆಯ ನಿರ್ದೇಶಕ ಎಂ.ಬಿ. ನಿತ್ಯಾನಂದ ಮುಂಡೋಡಿ ಮಾತನಾಡಿದರು. ಕೃಷಿಕರಾದ ಭಾಸ್ಕರ ರೈ ಕಂಟ್ರಮಜಲು, ಶರತ್‌ ಕುಮಾರ್ ರೈ, ಸೀತಾರಾಮ ಭಟ್ ಬರಕ್ಕೆರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಾಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ಸೀತಾರಾಮ ರೈ ಅವರನ್ನು ಕಾವು ಸಿಎ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ. ಲೋಕೇಶ್, ನಿದೇಶಕರಾದ ಬೆಳ್ಳೆ ಶಿವಾಜಿ ಎಸ್. ಸುವರ್ಣ, ಸುಧಾ ಎಸ್. ರೈ ಪುಣ್ಚಪ್ಪಾಡಿ, ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಪುಷ್ಪರಾಜ ಅಡ್ಯಂತಾಯ ಮಂಚಿ ಮತ್ತಿತರರು ಇದ್ದರು.ಮಾಸ್ ಸಂಸ್ಥೆಯ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಕಾವು ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ವಂದಿಸಿದರು. ಸವಣೂರು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಕಾವು ಸಿಎ ಬ್ಯಾಂಕ್ ಸಿಬ್ಬಂದಿ ಸುನಿಲ್ ನಿರೂಪಿಸಿದರು.