ಸಾಮಾಜಿಕ ನ್ಯಾಯ ನಮ್ಮಿಂದ ಕಿತ್ತುಕೊಂಡಾಗಲಷ್ಟೇ ಅದರ ಬೆಲೆ ಗೊತ್ತಾಗುತ್ತದೆ

| Published : Jan 15 2025, 12:45 AM IST

ಸಾಮಾಜಿಕ ನ್ಯಾಯ ನಮ್ಮಿಂದ ಕಿತ್ತುಕೊಂಡಾಗಲಷ್ಟೇ ಅದರ ಬೆಲೆ ಗೊತ್ತಾಗುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಏನಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುವುದಿಲ್ಲ. ಕೆಟ್ಟದ್ದು ನಡೆಯುತ್ತಿದ್ದರೂ ಅದನ್ನು ಸ್ವೀಕರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ಸಾಮಾಜಿಕ ನ್ಯಾಯ ತಮಾಷೆಯ ವಿಷಯವಾಗಿದೆ. ಸಾಮಾಜಿಕ ನ್ಯಾಯವನ್ನು ನಮ್ಮಿಂದ ಕಿತ್ತುಕೊಂಡಾಗಲಷ್ಟೇ ಅದರ ಬೆಲೆ ಗೊತ್ತಾಗುತ್ತದೆ ಎಂದು ರಂಗಕರ್ಮಿ, ಚಲನಚಿತ್ರ ನಟ ಅತುಲ್ ಕುಲಕರ್ಣಿ ತಿಳಿಸಿದರು.

ನಗರದ ರಂಗಾಯಣವು ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಮಂಗಳವಾರ ವನರಂಗದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಬಿಡುಗಡೆ ಎಂಬ ಶಬ್ಧ ಕೆಟ್ಟ ಪದದಂತೆ ಕೇಳಿಸುತ್ತಿದೆ. ದೇಶ ಹಾಗೂ ಸಂಸ್ಕೃತಿಗೆ ಇದು ದುರದೃಷ್ಟಕರ ಸಂದರ್ಭ ಎಂದು ವಿಷಾದಿಸಿದರು.

ಸಮಾಜದಲ್ಲಿ ಏನಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುವುದಿಲ್ಲ. ಕೆಟ್ಟದ್ದು ನಡೆಯುತ್ತಿದ್ದರೂ ಅದನ್ನು ಸ್ವೀಕರಿಸುತ್ತಿದ್ದಾರೆ. ಹೀಗಾಗಿ, ಶೋಷಣೆ ವಿರುದ್ಧ ಮಾತನಾಡುವ, ಸತ್ಯ ಕಥೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ರಂಗಕರ್ಮಿಗಳು ಧೈರ್ಯದಿಂದ ಮಾಡಬೇಕಿದೆ ಎಂದು ಅವರು ಹೇಳಿದರು.

ಕರ್ನಾಟಕವು ರಾಷ್ಟ್ರಕ್ಕೆ ರಂಗಭೂಮಿ ಅಪೂರ್ವವಾದ ಕೊಡುಗೆ ನೀಡಿದೆ. ಅದಕ್ಕೆ ಬಿ.ವಿ. ಕಾರಂತ, ಕೆ.ವಿ. ಸುಬ್ಬಣ್ಣ ಅಂತಹವರು ಕಾರಣ. ಭಾರತೀಯ ರಂಗಭೂಮಿಗೆ ರಾಜ್ಯವು ನೀಡಿರುವ ಕೊಡುಗೆಯನ್ನು ಎನ್ಎಸ್‌ ಡಿಯಲ್ಲಿ ಕಲಿತವರೂ ಸೇರಿದಂತೆ ದೇಶದ ಎಲ್ಲಾ ರಂಗಕರ್ಮಿಗಳು ಮಕ್ಕಳಂತೆ ಸಂಭ್ರಮಿಸುತ್ತೇವೆ ಎಂದರು.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಬಿ.ವಿ. ಕಾರಂತ ಹಾಗೂ ಪ್ರಸನ್ನ ಅವರಿಂದ ಕಲಿಯುವ ಅದೃಷ್ಟ ನನ್ನದಾಗಿತ್ತು. ಕಾರಂತರಿಂದ ಪಾಠಗಳು ಸಂಗೀತಕ್ಕೆ ಕಿವಿ ಅರಳಿಸುವಂತೆ ನಮ್ಮನ್ನು ತನ್ಮಯರನ್ನಾಗಿ ಮಾಡುತ್ತಿತ್ತು. ಅದರಿಂದಲೇ ಇಷ್ಟು ದೂರ ಸಾಗಿ ಬಂದಿರುವೆ. ಅವರು ಜೊತೆಯಲ್ಲಿಯೇ ಇದ್ದಾರೆಂದು ಎಂದಿಗೂ ಅನಿಸುತ್ತದೆ. ಕಾರಂತರು ದೆಹಲಿಯ ಎನ್‌ಎಸ್‌ ಡಿಯಲ್ಲಿ ಕುಳಿತು ರಾಷ್ಟ್ರೀಯ ನಾಟಕಗಳು ಎಲ್ಲಿವೆ, ನಾಟಕಗಳು ನಿಜವಾಗಲು ನಡೆಯುತ್ತಿರುವುದು ಪ್ರಾದೇಶಿಕದಲ್ಲಿ ಎಂದಿದ್ದರು. ರಂಗಭೂಮಿ ಎಂದರೆ ಮಣ್ಣಿನ ಜೊತೆಗಿನ ಸಂಬಂಧ, ಅದು ಇರುವುದು ಪ್ರಾದೇಶಿಕತೆಯಲ್ಲಿ ಎಂದು ಅವರು ತಿಳಿಸಿದರು.

ಪ್ರಕಾಶ್‌ ರಾಜ್ ಅವರ ನಿರ್ದಿಗಂತದಲ್ಲಿ ಎರಡು ದಿನ ಕಳೆದೆ. ಅಲ್ಲಿ ರಂಗಭೂಮಿ ಕಲಿತವರಿಗೆ ಜೀವನ ಭದ್ರತೆಯನ್ನು ಕೊಡುವುದಲ್ಲದೇ, ಸ್ವಾತಂತ್ರ್ಯವನ್ನು ನೀಡಿದೆ. ಅಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ಕಾರಂತರ ಪ್ರತಿಮೆಯೂ ಬಂತು. ಪ್ರಕಾಶ್‌ ರಾಜ್ ಅವರು ಪ್ರತಿಮೆಯ ಮುಟ್ಟಿ ‘ಇದು ನಮ್ಮ ಕಾರಂತರು’ ಎಂದರು, ಅದನ್ನು ಮರೆಯಲಾರೆ ಎಂದರು.

ನಟ ಪ್ರಕಾಶ್‌ರಾಜ್, ನಟಿ ಭಾವನಾ ರಾಮಣ್ಣ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ, ರಂಗಸಮಾಜದ ಸದಸ್ಯರಾದ ಮಹಾಂತೇಶ ಗಜೇಂದ್ರಗಡ, ಸುರೇಶ್ ಬಾಬು, ರಾಜಪ್ಪ‌ದಳವಾಯಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಕನ್ನಡ‌ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮೊದಲಾದವರು ಇದ್ದರು.

----

ಕೋಟ್...

ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದೆ. ತಮ್ಮದೇ ದೃಷ್ಟಿಕೋನಗಳನ್ನು ಸಮಾಜದಲ್ಲಿ ನೆಲೆಗೊಳಿಸಲಾಗುತ್ತಿದೆ. ಮುಂದಿನ ತಲೆಮಾರು ಇತಿಹಾಸ ಓದುವಾಗ ತಪ್ಪು ಮಾಡಿದವರನ್ನು ಮರೆಯಬಹುದು. ಆದರೆ, ಮೌನವಾಗಿದ್ದವರನ್ನು ಎಂದೂ ಕ್ಷಮಿಸುವುದಿಲ್ಲ.

- ಪ್ರಕಾಶ್ ರಾಜ್, ನಟ