ಸಾರಾಂಶ
ನರೇಗಾ ಯೋಜನೆ ಯುವ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸುತ್ತದೆ. ಅದೇ ರೀತಿಯಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಗೋದಾಮು ನಿರ್ಮಾಣ, ಶಾಲಾ ಅಡುಗೆ ಕೊಠಡಿ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳಾದ ಚರಂಡಿ, ಸಿಡಿ ನಿರ್ಮಾಣ, ಸಿಸಿ ರಸ್ತೆ ಕಾಮಗಾರಿ ಅನುಷ್ಠಾನಿಸುವುದಕ್ಕೆ ಈ ಯೋಜನೆಯು ಬಹಳಷ್ಟು ಉಪಯುಕ್ತವಾಗಿದೆ.
ಕೊಪ್ಪಳ: ತಾಲೂಕಿನ ಕಲಕೇರಿ ಗ್ರಾಪಂನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಭಾರತ ನಿರ್ಮಾಣ ಸೇವಾ ಕೇಂದ್ರದ ಕಟ್ಟಡವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು.
ಉದ್ಘಾಟನೆ ನಂತರ ಮಾತನಾಡಿದ ಶಾಸಕರು, ನರೇಗಾ ಯೋಜನೆ ಯುವ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸುತ್ತದೆ. ಅದೇ ರೀತಿಯಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಗೋದಾಮು ನಿರ್ಮಾಣ, ಶಾಲಾ ಅಡುಗೆ ಕೊಠಡಿ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳಾದ ಚರಂಡಿ, ಸಿಡಿ ನಿರ್ಮಾಣ, ಸಿಸಿ ರಸ್ತೆ ಕಾಮಗಾರಿ ಅನುಷ್ಠಾನಿಸುವುದಕ್ಕೆ ಈ ಯೋಜನೆಯು ಬಹಳಷ್ಟು ಉಪಯುಕ್ತವಾಗಿದೆ. ಗ್ರಾಪಂನಲ್ಲಿ ಬಾಪೂಜಿ ಸೇವೆಗಳು-100 ಇರುವುದರಿಂದ ಎಲ್ಲ ಗ್ರಾಮಸ್ಥರು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.ಗ್ರಾಪಂಗೆ ವಿವಿಧ ಕಾಮಗಾರಿಗಳಿಗೆ ಶಾಸಕರ ಅನುದಾನ ನೀಡಲಾಗುತ್ತಿದ್ದು, ಕಾಮಗಾರಿ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಸರಿಯಾಗಿ ಪರಿಶೀಲನೆ ಮಾಡಿ ಮೇಲ್ವಿಚಾರಣೆ ಮಾಡುವುದರಿಂದ ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಗ್ರಾಪಂನಿಂದ ಸೌಲಭ್ಯ ಒದಗಿಸಲು ಸಾರ್ವಜನಿಕರಿಗೆ ಆನ್‌ಲೈನ್ ಸೇವೆಗಳು ದೊರೆಯುತ್ತಿದ್ದು, ಇದರಿಂದ ನಗರ ಪ್ರದೇಶಗಳಿಗೆ ಅಲೆದಾಡುವುದು ತಪ್ಪಿಸಿದಂತಾಗುತ್ತದೆ ಎಂದು ಹೇಳಿದರು.ತಾಪಂ ಇಒ ದುಂಡಪ್ಪ ತುರಾದಿ, ಜಿಪಂ ಮಾಜಿ ಸದಸ್ಯರಾದ ರಾಮಣ್ಣ ಚೌಡ್ಕಿ, ಪ್ರಸನ್ನ ಗಡಾದ, ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಈರಪ್ಪ ಕಟ್ಟಿಮನಿ, ಉಪಾಧ್ಯಕ್ಷ ಮರಿಯಮ್ಮ ಸಣ್ಣದ್ಯಾಮಣ್ಣ ಲಮಾಣಿ, ತಾಲೂಕು ಯೋಜನಾಧಿಕಾರಿ ರಾಜೇಸಾಬ್ ನದಾಫ್, ಪಿಡಿಒ ಬಸವರಡ್ಡಿ ತವದಿ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕ ವಿಜಯ ಬಳಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನಪ್ಪ ಕಮ್ಮಾರ ಇದ್ದರು.